ADVERTISEMENT

ಸುಳ್ಳು ಜನನ ಪ್ರಮಾಣಪತ್ರ: 30 ಕುಸ್ತಿಪಟುಗಳ ವಿರುದ್ಧ ಕ್ರಮ

ಪಿಟಿಐ
Published 7 ಜೂನ್ 2025, 14:05 IST
Last Updated 7 ಜೂನ್ 2025, 14:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಸುಳ್ಳು ಜನನಪ್ರಮಾಣಪತ್ರ ನೀಡಿ ಜೂನಿಯರ್‌ ಹಂತದಲ್ಲಿ ಸ್ಪರ್ಧಿಸುತ್ತಿದ್ದ ವಯೋಮಿತಿ ಮೀರಿದ ಕುಸ್ತಿಪಟುಗಳ ಮೇಲೆ ಭಾರತ ಕುಸ್ತಿ ಫೆಡರೇಷನ್‌ ಚಾಟಿ ಬೀಸಿದೆ. 400ಕ್ಕೂ ಅಧಿಕ ಪ್ರಕರಣಗಳ ತಪಾಸಣೆಯ ನಂತರ 30 ಮಂದಿ ಕುಸ್ತಿಪಟುಗಳ ಮೇಲೆ ತಾತ್ಕಾಲಿಕ ಅಮಾನತು ಹೇರಲಾಗಿದೆ.

ಹರಿಯಾಣದ ಹಲವು ಪೈಲ್ವಾನರು ಸುಳ್ಳು ಜನನಪ್ರಮಾಣಪತ್ರ ನೀಡಿ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಕೋಚ್‌ಗಳು ಮತ್ತು ಡೆಲ್ಲಿಯ ವಿವಿಧ ಅಖಾಡಗಳ ಕುಸ್ತಿಪಟುಗಳು ದೂರು ನೀಡಿದ್ದು, ಫೆಡರೇಷನ್‌ ಈ ಬಗ್ಗೆ ತಪಾಸಣೆ ನಡೆಸಿತ್ತು.

ADVERTISEMENT

ಫೆಡರೇಷನ್‌ಗೇ ಆಘಾತ ನೀಡುವ ರೀತಿ, ನಕಲಿ ಪ್ರಮಾಣಪತ್ರ ನೀಡಿದ್ದ ಇಬ್ಬರು ಪೈಲ್ವಾನರು ಇತ್ತೀಚೆಗೆ ಬಿಹಾರದಲ್ಲಿ ನಡೆದ ಖೇಲೊ ಇಂಡಿಯಾ ಕ್ರೀಡೆಗಳಲ್ಲಿ ಪದಕಗಳನ್ನೂ ಗೆದ್ದಿದ್ದರು.

‘ಜೂನಿಯರ್‌ ಹಂತದ (18 ವರ್ಷದೊಳಗಿನವರು ಮತ್ತು ಕೆಡೆಟ್‌ ವಿಭಾಗ) ಸ್ಪರ್ಧೆಗಳಲ್ಲಿ ಈಗ ತಪ್ಪು ಮಾಡಿದವರ ಭವಿಷ್ಯ ಹಾಳು ಮಾಡಲು ನಾವು ಬಯಸುವುದಿಲ್ಲ. 18 ವರ್ಷ ದಾಟಿದವರು ಅವರ ಮೂಲ ರಾಜ್ಯವನ್ನು ಪ್ರತಿನಿಧಿಸಬೇಕು’ ಎಂದು ಫೆಡರೇಷನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನಾವು ಪ್ರತಿಯೊಂದು ಪ್ರಕರಣ ಪರಿಶೀಲಿಸಿದ್ದೇವೆ. 30–40 ದಿನಗಳಲ್ಲಿ 30 ಮಂದಿ ಇಂಥ ತಪ್ಪು ಮಾಡಿದ್ದಾರೆ. ಈಗ ಸುಳ್ಳು ಪ್ರಮಾಣಪತ್ರ ನೀಡಿದವರು ಫೆಡರೇಷನ್‌ಗೆ ಬಂದು ತಮ್ಮ ಕೃತ್ಯ ಮತ್ತು ಮೋಸಕ್ಕೆ ಕ್ಷಮೆ ಕೇಳಬೇಕು’ ಎಂದು ಅವರು ಹೇಳಿದರು.

‘ಹರಿಯಾಣದಲ್ಲಿ ತಮ್ಮ ಕೋಚ್‌ಗಳಿಂದ ತಪ್ಪುದಾರಿಗಿಳಿದ ಯುವ ಕುಸ್ತಿಪಟುಗಳು ದೆಹಲಿಯ ನರೇಲಾ ಮತ್ತು ರೋಹಿಣಿ ಪ್ರದೇಶಗಳಲ್ಲಿ ಲಂಚ ನೀಡಿ ಸುಳ್ಳು ಪ್ರಮಾಣಪತ್ರ ಪಡೆಯುತ್ತಿರುವುದು ಬಹಿರಂಗವಾಗಿದೆ’ ಎಂದರು.

ಕೋಚ್‌ ಅಮಾನತು:

ಲೈಂಗಿಕ ಕಿರಕುಳ ನೀಡಿದ ದೂರಿನ ಮೇರೆಗೆ ಹರಿಯಾಣದ ಕೋಚ್‌ ಸಂಜಯ್ ಲಾತರ್‌ ಅವರನ್ನು ಡಬ್ಲ್ಯುಎಫ್‌ಐ ಅಮಾನತು ಮಾಡಿದೆ. ಕಳೆದ ತಿಂಗಳು ಖೇಲೊ ಇಂಡಿಯಾ ಕ್ರೀಡೆಗಳ ವೇಳೆ ಕೋಚ್‌ ಲೈಂಗಿಕ ಕಿರುಕುಳ ನೀಡಿರುವುದಾಗಿ ಸ್ಪರ್ಧಿಯೊಬ್ಬರು ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.