ADVERTISEMENT

WFI ಅಮಾನತು ರದ್ದು: ದಿಗ್ಭ್ರಮೆ ವ್ಯಕ್ತಪಡಿಸಿದ ವಿನೇಶ್ ಫೋಗಟ್

ಪಿಟಿಐ
Published 13 ಮಾರ್ಚ್ 2025, 2:51 IST
Last Updated 13 ಮಾರ್ಚ್ 2025, 2:51 IST
   

ಚಂಡೀಗಢ: ಭಾರತೀಯ ಕುಸ್ತಿ ಒಕ್ಕೂಟದ(ಡಬ್ಲ್ಯುಎಫ್‌ಐ) ಅಮಾನತು ಹಿಂತೆಗೆದುಕೊಂಡಿದ್ದಕ್ಕೆ 2023ರಲ್ಲಿ ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಸ್ತಿಪಟು, ರಾಜಕಾರಣಿ ವಿನೇಶ್ ಫೋಗಟ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕುಸ್ತಿ ಸಂಸ್ಥೆಯ ಅಮಾನತನ್ನು ರದ್ದುಗೊಳಿಸಿ ಕ್ರೀಡಾ ಸಚಿವಾಲಯ ಬುಧವಾರ ಆದೇಶಿಸಿತ್ತು.

ನಾನು ಅತ್ಯಂತ ದುಃಖದಿಂದ ಇಲ್ಲಿ ನಿಂತಿದ್ದೇನೆ. ಎರಡು ವರ್ಷಗಳ ಕಾಲ ನಾವು ಬೀದಿಯಲ್ಲಿ ಹೋರಾಟ ನಡೆಸಿದ್ದೆವು. ನಾವು ಕುಸ್ತಿ ಕ್ರೀಡೆಯನ್ನು ಉಳಿಸಲು ಹೋರಾಡಿದ್ದೆವು. ಈಗ, ಎರಡು ದಿನಗಳ ಹಿಂದೆ, ನಿಮ್ಮ ಪಕ್ಷ (ಬಿಜೆಪಿ) ಕ್ರೀಡೆಯನ್ನು ಮತ್ತೆ ಅವರ ಕೈಗೆ ನೀಡಿದೆ ಎಂದು ದುಃಖದಿಂದ ಹೇಳುತ್ತಿದ್ದೇನೆ’ಎಂದು ಜುಲಾನಾದ ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಹರಿಯಾಣ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಹರಿಯಾಣ ವಿಧಾನಸಭೆಯಲ್ಲಿ ಬ್ರಿಜ್ ಭೂಷಣ್ ಹೆಸರನ್ನು ಹೆಸರಿಸದೆ ಫೋಗಟ್ ಕಿಡಿಕಾರಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಫೋಗಟ್ ಭಾಗವಹಿಸಿದ್ದರು

ADVERTISEMENT

ನಂತರ, ಅವರು ವಿಧಾನಸಭಾ ಸಂಕೀರ್ಣದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿ, ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಒಬ್ಬ ‘ಡಮ್ಮಿ’ ಮತ್ತು ಬ್ರಿಜ್ ಭೂಷಣ್ ಇನ್ನೂ ಅಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮೇಲಿನ ಅಮಾನತನ್ನು ಬುಧವಾರ ರದ್ದುಗೊಳಿಸಿದೆ. ಇದು ಕುಸ್ತಿ ಸಂಸ್ಥೆಯನ್ನು ಸುತ್ತುವರೆದಿರುವ ತಿಂಗಳುಗಳ ಅನಿಶ್ಚಿತತೆಯನ್ನು ಕೊನೆಗೊಳಿಸಿ ಚಟುವಟಿಕೆಗಳನ್ನು ಪುನರಾರಂಭಿಸಲು ದಾರಿ ಮಾಡಿಕೊಟ್ಟಿದೆ.

ಆಡಳಿತ ಮತ್ತು ಕಾರ್ಯವಿಧಾನದ ಸಮಗ್ರತೆಯ ಲೋಪಗಳಿಗಾಗಿ ಸಚಿವಾಲಯವು 2023ರ ಡಿಸೆಂಬರ್ 24 ರಂದು ಡಬ್ಲ್ಯುಎಫ್ಐ ಅನ್ನು ಅಮಾನತುಗೊಳಿಸಿತ್ತು.

ಬ್ರಿಜ್ ಭೂಷಣ್, ಜೂನಿಯರ್ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಜಂತರ್ ಮಂತರ್‌ನಲ್ಲಿ ದೀರ್ಘ ಪ್ರತಿಭಟನೆ ನಡೆಸಿದ್ದರು.

ಇದಲ್ಲದೆ, ಹರಿಯಾಣ ಸರ್ಕಾರವು ಉದಯೋನ್ಮುಖ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕೆಂದು ಫೋಗಟ್ ಒತ್ತಾಯಿಸಿದ್ದಾರೆ.

50 ಕೆ.ಜಿ ಕುಸ್ತಿ ವಿಭಾಗದ ಫೈನಲ್‌ಗೂ ಮುನ್ನ ಅಧಿಕ ತೂಕ ಹೊಂದಿದ್ದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಪದಕ ವಿಜೇತೆಯಂತೆ ಅವರನ್ನು ಸನ್ಮಾನಿಸುವುದಾಗಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೀಡಿದ್ದ ಭರವಸೆಯನ್ನು ಅವರು ನೆನಪಿಸಿದ್ದಾರೆ.

‘ವಿನೇಶ್ ನಮ್ಮ ಮಗಳು ಮತ್ತು ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಬಹುಮಾನವನ್ನು ಅವಳಿಗೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದ್ದರು. ಈ ಭರವಸೆ ಇನ್ನೂ ಈಡೇರಿಲ್ಲ ಎಂದು ಫೋಗಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.