ADVERTISEMENT

ಮಹಿಳಾ ಏಷ್ಯಾ ಕಪ್‌ ಹಾಕಿ: ಭಾರತಕ್ಕೆ ಸುಲಭದ ತುತ್ತಾದ ಥಾಯ್ಲೆಂಡ್

11–0 ಸುಲಭ ಗೆಲುವು

ಪಿಟಿಐ
Published 5 ಸೆಪ್ಟೆಂಬರ್ 2025, 13:44 IST
Last Updated 5 ಸೆಪ್ಟೆಂಬರ್ 2025, 13:44 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಹಾಂಗ್‌ಝೌ (ಚೀನಾ): ಉದಿತಾ ದುಹಾನ್ ಮತ್ತು ಬ್ಯೂಟಿ ಡುಂಗ್‌ಡುಂಗ್ ಅವರು ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ, ಮಹಿಳೆಯರ ಏಷ್ಯಾ ಕಪ್ ಹಾಕಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ ಥಾಯ್ಲೆಂಡ್ ತಂಡವನ್ನು 11–0 ಗೋಲುಗಳಿಂದ ಸೋಲಿಸಿತು.

ಉದಿತಾ ಅವರು ಪಂದ್ಯದ 30ನೇ ಮತ್ತು 52ನೇ ನಿಮಿಷ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಗೋಲುಗಳನ್ನು ಗಳಿಸಿದರು. ಡುಂಗ್‌ಡುಂಗ್ ಅವರು 45 ಮತ್ತು 54ನೇ ನಿಮಿಷ ಗೋಲು ಹೊಡೆದರು.

ADVERTISEMENT

ಭಾರತದ ಇತರ ಗೋಲುಗಳನ್ನು– ಮಮ್ತಾಝ್ ಖಾನ್‌ (7ನೇ ನಿಮಿಷ), ಸಂಗೀತಾ ಕುಮಾರಿ (10ನೇ), ನವನೀತ್ ಕೌರ್ (16ನೇ), ಲಾಲ್ರೆಮ್‌ಸಿಯಾಮಿ (18ನೇ), ತೋಡಂ ಸುಮನ್‌ ದೇವಿ (49ನೇ), ಶರ್ಮಿಳಾ ದೇವಿ (57ನೇ) ಮತ್ತು ರುತುಜಾ ದಾದಾಸೊ ಪಿಸಳ್ (60ನೇ ನಿಮಿಷ) ಅವರು ಗಳಿಸಿದರು.

ಸ್ಕೋರು ಸೂಚಿಸಿರುವಂತೆ ಭಾರತ ಈ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತ್ತು. ವಿಶ್ವ ಕ್ರಮಾಂಕದಲ್ಲಿ ಪ್ರಸ್ತುತ 9ನೇ ಸ್ಥಾನದಲ್ಲಿರುವ ‘ನೀಲಿ ಧಿರಿಸಿನ ವನಿತೆಯರು’ ವಿರಾಮದ ವೇಳೆಗೆ 5–0 ಗೋಲುಗಳಿಂದ ಮುಂದಿದ್ದರು. ವಿಶ್ವಕ್ರಮಾಂಕದಲ್ಲಿ ಥಾಯ್ಲೆಂಡ್‌ 30ನೇ ಸ್ಥಾನದಲ್ಲಿದೆ.

ಭಾರತ ಈ ಪಂದ್ಯದಲ್ಲಿ 9 ಪೆನಾಲ್ಟಿ ಕಾರ್ನರ್‌ಗಳಲ್ಲಿ ಐದನ್ನು ಗೋಲುಗಳಾಗಿ ಪರಿವರ್ತಿಸಿತು. ಥಾಯ್ಲೆಂಡ್‌ಗೆ ಪೆನಾಲ್ಟಿ ಕಾರ್ನರ್‌ಗಳೇ ಲಭ್ಯವಾಗಲಿಲ್ಲ.

ಭಾರತ ತನ್ನ ಮುಂದಿನ ಪಂದ್ಯವನ್ನು ಶನಿವಾರ ಜಪಾನ್ ವಿರುದ್ಧ ಆಡಲಿದೆ. ಗುಂಪಿನ ಅಂತಿಮ ಪಂದ್ಯದಲ್ಲಿ ಸೆ. 8ರಂದು ಸಿಂಗಪುರವನ್ನು ಎದುರಿಸಲಿದೆ.

ಎಂಟು ತಂಡಗಳು ತಲಾ ನಾಲ್ಕರಂತೆ ಎರಡು ಗುಂಪುಗಳಲ್ಲಿದೆ. ಮೊದಲ ಎರಡು ಸ್ಥಾನ ಗಳಿಸಿದ ತಂಡಗಳು ಸೂಪರ್ ಫೋರ್ ಹಂತಕ್ಕೆ ಮುನ್ನಡೆಯಲಿವೆ. ಈ ಹಂತದಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆ. 14ರಂದು ಫೈನಲ್ ಆಡಲಿವೆ. ಫೈನಲ್‌ನಲ್ಲಿ ಗೆಲ್ಲುವ ತಂಡ 2026ರಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ ಹಾಕಿ ಟೂರ್ನಿಗೆ ಅರ್ಹತೆ ಪಡೆಯಲಿದೆ.

ಭಾರತ ತಂಡವು ಈ ಪಂದ್ಯಕ್ಕೆ ಅನುಭವಿಗಳಾದ ಗೋಲ್‌ ಕೀಪರ್ ಸವಿತಾ ಪೂನಿಯಾ ಮತ್ತು ಡ್ರ್ಯಾಗ್‌ಫ್ಲಿಕರ್‌ ದೀಪಿಕಾ ಅವರಿಲ್ಲದೇ ಆಡುತ್ತಿದೆ. ಇಬ್ಬರೂ ಗಾಯಾಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.