ಹಾಂಗ್‌ಝೌ (ಚೀನಾ): ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಈವರೆಗೆ ಸೋಲು ಕಾಣದ ಭಾರತ ತಂಡವು ಬುಧವಾರ ನಡೆಯಲಿರುವ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಕೊರಿಯಾ ತಂಡವನ್ನು ಎದುರಿಸಲಿದೆ.
ಫಾರ್ವರ್ಡ್ ಆಟಗಾರ್ತಿಯರಾದ ನವನೀತ್ ಕೌರ್ ಹಾಗೂ ಮುಮ್ತಾಜ್ ಖಾನ್ ಅವರು ಅಮೋಘ ಲಯದಲ್ಲಿದ್ದು, ಗುಂಪು ಹಂತದಲ್ಲಿ ತಲಾ ಐದು ಗೋಲು ಹೊಡೆದಿದ್ದಾರೆ. ಭಾರತ ತಂಡವು ಫೈನಲ್‌ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಸೂಪರ್ ಫೋರ್ ಸುತ್ತಿನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಮಿಡ್‌ಫೀಲ್ಡರ್‌ಗಳಾದ ನೇಹಾ, ಉದಿತಾ, ಶರ್ಮಿಳಾ ಹಾಗೂ ರುತುಜಾ ಪಿಸಾಳ್ ಅವರೂ ಉಪಯುಕ್ತ ಕಾಣಿಕೆ ನೀಡಿದ್ದಾರೆ.
ಸಲೀಮಾ ಟೇಟೆ ಬಳಗವು ಗುಂಪು ಹಂತದಲ್ಲಿ ಎರಡು ಪಂದ್ಯ ಗೆದ್ದಿದ್ದರೆ, ಮತ್ತೊಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಕೊರಿಯಾ ಎರಡು ಜಯ ಹಾಗೂ ಒಂದು ಸೋಲು ಕಂಡಿದೆ.
ಭಾರತ ಹಾಗೂ ಕೊರಿಯಾ ನಡುವಣ ಕೊನೆಯ ಐದು ಪಂದ್ಯಗಳಲ್ಲಿ ಭಾರತ ಮೂರರಲ್ಲಿ ಗೆಲುವು ಕಂಡಿದ್ದರೆ, ಕೊರಿಯಾ ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ. ಮತ್ತೊಂದು ಪಂದ್ಯ ಡ್ರಾ ಆಗಿದೆ. ಹೀಗಾಗಿ, ಈ ಪಂದ್ಯದಲ್ಲಿ ಮೇಲ್ನೋಟಕ್ಕೆ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಭಾರತದ ವನಿತೆಯರು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದು, ಫೈನಲ್ ಮೇಲೆ ಕಣ್ಣಿಟ್ಟಿದ್ದಾರೆ.
‘ಟೂರ್ನಿಯಲ್ಲಿ ಈವರೆಗೆ ಭಾರತ ತಂಡ ತೋರಿದ ಪ್ರದರ್ಶನ ತೃಪ್ತಿ ನೀಡಿದೆ. ಭಾರತದ ಆಟಗಾರ್ತಿಯರು ಶಿಸ್ತಿನ ಜೊತೆಯಲ್ಲೇ ಸ್ಥಿರ ಹೋರಾಟ ತೋರಿದ್ದಾರೆ. ಅವಕಾಶ ಸಿಕ್ಕಾಗ ಎದುರಾಳಿ ತಂಡದ ಮೇಲೆ ಆಕ್ರಮಣವನ್ನೂ ಮಾಡಿದ್ದಾರೆ’ ಎಂದು ಭಾರತ ತಂಡದ ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.
ಆತಿಥೇಯ ಚೀನಾ, ಭಾರತ, ಜಪಾನ್ ಹಾಗೂ ಕೊರಿಯಾ ತಂಡಗಳು ಸೂಪರ್ ಫೋರ್ ಹಂತಕ್ಕೆ ಪ್ರವೇಶಿಸಿದ್ದು, ಮೊದಲ ಎರಡು ಸ್ಥಾನ ಪಡೆಯಲಿರುವ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ. ಉಳಿದೆರಡು ತಂಡಗಳು, ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಹೋರಾಡಲಿವೆ.
ಈ ಟೂರ್ನಿಯ ವಿಜೇತರು ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಟೂರ್ನಿಗೆ ನೇರಪ್ರವೇಶ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.