
ಟ್ರೋಫಿಯೊಂದಿಗೆ ಎಸ್‌ಜಿ ಪೈಪರ್ಸ್ ಆಟಗಾರ್ತಿಯರ ಸಂಭ್ರಮ
–ಪಿಟಿಐ
ರಾಂಚಿ: ಎಸ್‌ಜಿ ಪೈಪರ್ಸ್ ತಂಡವು ಶೂಟೌಟ್‌ನಲ್ಲಿ 3–2ರಿಂದ ಶ್ರಾಚಿ ಬೆಂಗಾಲ್ ಟೈಗರ್ಸ್ ತಂಡವನ್ನು ಮಣಿಸಿ ಎರಡನೇ ಆವೃತ್ತಿಯ ಮಹಿಳಾ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಮರಾಂಗ್ ಗೋಮಕೆ ಜಯಪಾಲ್ ಸಿಂಗ್ ಮುಂಢಾ ಹಾಕಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯವು ನಿಗದಿತ ಅವಧಿಯಲ್ಲಿ 1–1ರಲ್ಲಿ ಡ್ರಾ ಆಗಿತ್ತು. ಬೆಂಗಾಲ್ ತಂಡದ ಲಾಲ್‌ರೆಮ್‌ಸಿಯಾಮಿ 16ನೇ ನಿಮಿಷದಲ್ಲಿ ಗೋಲು ಹೊಡೆದರೆ, ಪೈಪರ್ಸ್ ತಂಡದ ಪ್ರೀತಿ ದುಬೆ (53ನೇ ನಿ.) ಸಮಬಲಕ್ಕೆ ಕಾರಣರಾದರು.
ಶೂಟೌಟ್‌ನಲ್ಲಿ ಪೈಪರ್ಸ್ ತಂಡದ ನಾಯಕಿ ನವನೀತ್ ಕೌರ್, ಜುವಾನಾ ಕ್ಯಾಸ್ಟೆಲ್ಲಾರೊ ಹಾಗೂ ಲೋಲಾ ರಿಯೆರಾ ಚೆಂಡನ್ನು ಗುರಿ ಸೇರಿಸಿದರು. ಗೋಲ್‌ಕೀಪರ್ ಬನ್ಸಾರಿ ಸೋಲಂಕಿ ಅವರು ನಿರ್ಣಾಯಕ ಸೇವ್‌ಗಳೊಂದಿಗೆ ಪೈಪರ್ಸ್ ತಂಡದ ಗೆಲುವಿಗೆ ರೂವಾರಿಯಾದರು.
ವಿಜೇತ ತಂಡಕ್ಕೆ ₹1.5 ಕೋಟಿ ಹಾಗೂ ರನ್ನರ್ಸ್ ಅಪ್ ತಂಡಕ್ಕೆ ₹1 ಕೋಟಿ ನಗದು ಬಹುಮಾನ ನೀಡಲಾಯಿತು. ತೃತೀಯ ಸ್ಥಾನ ಪಡೆದ ರಾಂಚಿ ರಾಯಲ್ಸ್ ತಂಡಕ್ಕೆ ₹50 ಲಕ್ಷ ದೊರೆಯಿತು.
ಬೆಂಗಾಲ್ ತಂಡದ ಅಗಸ್ಟಿನಾ ಗಾರ್ಝೆಲನಿ ಟೂರ್ನಿಯ ಗರಿಷ್ಠ ಗೋಲು ಸ್ಕೋರರ್ ಎನಿಸಿದರು. ನವನೀತ್ ಕೌರ್ ಟೂರ್ನಿಯ ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಬನ್ಸಾರಿ ಅವರು ಟೂರ್ನಿಯ ಉತ್ತಮ ಗೋಲ್‌ಕೀಪರ್ ಎನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.