ADVERTISEMENT

ಮಹಿಳಾ ವಿಶ್ವಕಪ್ ಹಾಕಿ: ಭಾರತದ ರಾಣಿ ಪಡೆಗೆ ಇಂಗ್ಲೆಂಡ್ ಸವಾಲು

​ಪ್ರಜಾವಾಣಿ ವಾರ್ತೆ
Published 21 ಜುಲೈ 2018, 14:40 IST
Last Updated 21 ಜುಲೈ 2018, 14:40 IST
ಕೃಪೆ: ಹಾಕಿ ಇಂಡಿಯಾ, ಟ್ವಿಟರ್ ಖಾತೆ
ಕೃಪೆ: ಹಾಕಿ ಇಂಡಿಯಾ, ಟ್ವಿಟರ್ ಖಾತೆ   

ಲಂಡನ್‌: ಮಹಿಳೆಯರ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶನಿವಾರಭಾರತ ತಂಡ ಆತಿಥೇಯ ಇಂಗ್ಲೆಂಡ್‌ ಎದುರು ಸೆಣಸಲಿದೆ. ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿರುವ ಭಾರತ ಇದೇ 26ರಂದು ಐರ್ಲೆಂಡ್ ಎದುರು ಮತ್ತು 29ರಂದು ಅಮೆರಿಕವನ್ನು ಎದುರಿಸಲಿದೆ.

ಎಲ್ಲಿ?: ಲೀ ವ್ಯಾಲಿ ಹಾಕಿ ಆ್ಯಂಡ್ ಟೆನ್ನಿಸ್ ಸೆಂಟರ್, ಲಂಡನ್

ಸಮಯ:ಇಂದು (ಜುಲೈ 21) ಸಂಜೆ6.30ಕ್ಕೆ

ADVERTISEMENT

ಯಾವ ವಾಹಿನಿಯಲ್ಲಿ ಪ್ರಸಾರ?: ಸ್ಟಾರ್ ಸ್ಫೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ 2 ಎಚ್‍ಡಿ

ಭಾರತದ ಮಹಿಳೆಯರು 2010ರಲ್ಲಿ ಕೊನೆಯದಾಗಿ ವಿಶ್ವಕಪ್‌ನಲ್ಲಿ ಆಡಿದ್ದರು. ಅರ್ಜೆಂಟೀನಾದಲ್ಲಿ ನಡೆದಿದ್ದ ಆ ಟೂರ್ನಿ ಯಲ್ಲಿ ಭಾರತ ಏಳನೇ ಸ್ಥಾನ ಗಳಿಸಿತ್ತು. ಆಗ ಏಳು ಗೋಲು ಗಳಿಸಿದ್ದ ರಾಣಿ ರಾಂಪಾಲ್ ಈಗ ತಂಡದ ನಾಯಕಿ.

ಈ ಬಾರಿಯೂ ರಾಣಿಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ದೇಶಕ್ಕೆ ಜಯ ಗಳಿಸಿಕೊಡುವುದರೊಂದಿಗೆ ನಾಯಕಿಯ ಜವಾಬ್ದಾರಿಯನ್ನು ನಿಭಾಯಿಸುವ ಜವಾಬ್ದಾರಿಯೂ ಅವರ ಮೇಲೆ ಇದೆ. ಎರಡು ವರ್ಷಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ 10ನೇ ಸ್ಥಾನ ಗಳಿಸಿದೆ.

ಗೆಲ್ಲುವ ಭರವಸೆ

ರಾಣಿ ರಾಂಪಾಲ್‌ ಅವರಿಗೆ ವಂದನಾ ಕಠಾರಿಯಾ, ಗುರುಜೀತ್ ಕೌರ್‌ ಮುಂತಾದ ಬಲಿಷ್ಠ ಆಟಗಾರ್ತಿಯರ ಬೆಂಬಲವಿದೆ. ಹೀಗಾಗಿ ಟೂರ್ನಿಯಲ್ಲಿ ಯಶಸ್ಸು ಗಳಿಸುವ ಭರವಸೆಯಲ್ಲಿದೆ.‘ತಂಡದ ಮೇಲೆ ಒತ್ತಡ ಇಲ್ಲ. ಇಂಗ್ಲೆಂಡ್‌ಗೆ ತವರಿನಲ್ಲಿ ಗೆಲ್ಲುವ ಒತ್ತಡ ಇದ್ದರೂ ಇರಬಹುದು. ಆದರೆ ನಾವು ನಿರಾಳವಾಗಿ ಆಡಲಿದ್ದೇವೆ. ತವರಿನ ಪ್ರೇಕ್ಷಕರ ಬೆಂಬಲ ಎದುರಾಳಿ ತಂಡಕ್ಕೆ ಇದೆ. ಆದರೆ ಭಾರಿ ಸಂಖ್ಯೆಯ ಪ್ರೇಕ್ಷಕರ ಮುಂದೆ ಆಡುವ ಸವಾಲು ನಮಗೆ ಹೊಸತೇನಲ್ಲ’ ಎನ್ನುವುದು ತಂಡದ ನಾಯಕಿ ರಾಣಿ ರಾಂಪಾಲ್ ಅವರ ಆತ್ಮವಿಶ್ವಾಸದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.