
ಸ್ಯಾಂಟಿಯಾಗೊ (ಚಿಲಿ): ಎಫ್‌ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿರುವ ಭಾರತ ತಂಡವು ಒಂಬತ್ತನೇ ಸ್ಥಾನದ ಹುಡುಕಾಟದಲ್ಲಿದ್ದು, ಭಾನುವಾರ ನಡೆದ ಪಂದ್ಯದಲ್ಲಿ 3–1ರಿಂದ ವೇಲ್ಸ್ ವಿರುದ್ಧ ಜಯ ಸಾಧಿಸಿದೆ.
ಭಾರತ ಪರ ಹಿನಾ ಬಾನೊ (14ನೇ ನಿಮಿಷ), ಸುನೆಲಿಟಾ ಟೊಪ್ಪೊ (24ನೇ), ಮತ್ತು ಇಶಿಕಾ (31ನೇ) ಗೋಲು ದಾಖಲಿಸಿದರೆ, ವೇಲ್ಸ್ ಪರ ಎಲೋಯಿಸ್ ಮೋಟ್ (52ನೇ) ಏಕೈಕ ಗೋಲು ಗಳಿಸಿದರು. ಭಾರತ ತಂಡವು ಸಿ ಗುಂಪಿನಲ್ಲಿ ಎರಡು ಜಯ ಮತ್ತು ಒಂದು ಸೋಲಿನೊಂದಿಗೆ ಎರಡನೇ ಸ್ಥಾನ ಗಳಿಸಿ ನಾಕೌಟ್ ರೇಸ್‌ನಿಂದ ಹೊರಬಿದ್ದಿದೆ.
ಆರು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಆರು ತಂಡಗಳು ಮತ್ತು ಎರಡನೇ ಸ್ಥಾನ ಪಡೆದು, ಅತ್ಯುತ್ತಮ ಪಾಯಿಂಟ್ಸ್ ಹೊಂದಿರುವ ಎರಡು ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶಿಸಲಿವೆ.
ಭಾರತ ತಂಡವು ಮಂಗಳವಾರ ಉರುಗ್ವೆ ವಿರುದ್ಧ ಸೆಣಸಲಿದೆ. ಈ ಪಂದ್ಯದ ವಿಜೇತರು ಒಂಬತ್ತನೇ ಸ್ಥಾನಕ್ಕಾಗಿ ಹಣಾಹಣಿ ನಡೆಸಲಿದ್ದಾರೆ. ಸೋತ ತಂಡವು 11ನೇ ಸ್ಥಾನಕ್ಕಾಗಿ ಹೋರಾಟ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.