ADVERTISEMENT

ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌: ಭಾರತದ ಬೆಳ್ಳಿ ‘ಡಬಲ್‌’

ವಿಶ್ವ ಚಾಂಪಿಯನ್‌ಷಿಪ್‌: ಮತ್ತೊಮ್ಮೆ ಕೈ ತಪ್ಪಿದ ಚಿನ್ನ

ಪಿಟಿಐ
Published 25 ಸೆಪ್ಟೆಂಬರ್ 2021, 14:05 IST
Last Updated 25 ಸೆಪ್ಟೆಂಬರ್ 2021, 14:05 IST
ಅಭಿಷೇಕ್ ವರ್ಮಾ– ರಾಯಿಟರ್ಸ್ ಚಿತ್ರ
ಅಭಿಷೇಕ್ ವರ್ಮಾ– ರಾಯಿಟರ್ಸ್ ಚಿತ್ರ   

ಯಾಂಕ್ಟನ್‌, ಅಮೆರಿಕ (ಪಿಟಿಐ): ಕೂದಲೆಳೆ ಅಂತರದಿಂದ ಚಿನ್ನದ ಪದಕ ತಪ್ಪಿಸಿಕೊಂಡ ಭಾರತದ ಮಹಿಳಾ ಮತ್ತು ಮಿಶ್ರಕಂಪೌಂಡ್‌ ತಂಡಗಳು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡವು.

ಇಲ್ಲಿ ಗೆದ್ದಿದ್ದರೆ ಭಾರತ ವಿಶ್ವ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನ ಗಳಿಸಿದಂತಾಗುತ್ತಿತ್ತು. 10 ಟೂರ್ನಿಗಳ ಪೈಕಿ ಎಂಟರಲ್ಲಿ ಫೈನಲ್ ತಲುಪಿದ್ದ ಭಾರತ ಎಂಟರಲ್ಲಿಯೂ ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದೆ.

ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನನ್‌ ಫೈನಲ್‌ನಲ್ಲಿ 150–154ರಿಂದ ಕೊಲಂಬಿಯಾದ ಡೇನಿಯಲ್ ಮುನೋಜ್ ಮತ್ತು ಸಾರಾ ಅಲೆಜಾಂಡ್ರೊ ಎದುರು ಎಡವಿದರು. ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಜೋಡಿ ನಾಲ್ಕನೇ ಸ್ಥಾನ ಗಳಿಸಿತ್ತು.

ADVERTISEMENT

16 ಸುತ್ತುಗಳ ಪೈಕಿ ಕೊಲಂಬಿಯಾ ಜೋಡಿ 10 ಬಾರಿ ‘ಪರ್ಫೆಕ್ಟ್‌ 10’ಗೆ ಗುರಿಯಿಟ್ಟಿತು.

ಮಹಿಳಾ ಡಬಲ್ಸ್‌ನಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದ ಜ್ಯೋತಿ, ಮುಸ್ಕಾನ್ ಕಿರಾರ್‌ ಮತ್ತು ಪ್ರಿಯಾ ಗುರ್ಜರ್ ಅವರಿದ್ದ ಭಾರತ ತಂಡವು 224–229 ಪಾಯಿಂಟ್ಸ್ ಅಂತರದಿಂದ ಕೊಲಂಬಿಯಾದ ಸಾರಾ ಲೋಪೆಜ್‌, ಅಲೆಜಾಂಡ್ರೊ ಯುಸ್ಕಿಯಾನೊ ಮತ್ತು ನೊರಾ ವಾಲ್ಡೆಜ್ ಎದುರು ಮಣಿಯಿತು.

ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಕೊಲಂಬಿಯಾ ಆಟಗಾರ್ತಿಯರು 15 ಬಾರಿ ‘ಪರ್ಫೆಕ್ಟ್‌ 10’ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.