ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌- ನಿರೀಕ್ಷೆ ಇರಲಿಲ್ಲ...ನಿರಾಸೆ ಆಗಲಿಲ್ಲ...

ಬಸವರಾಜ ದಳವಾಯಿ
Published 13 ಅಕ್ಟೋಬರ್ 2019, 19:31 IST
Last Updated 13 ಅಕ್ಟೋಬರ್ 2019, 19:31 IST
ಅನ್ನುರಾಣಿ–ಎಎಫ್‌ಪಿ ಚಿತ್ರ
ಅನ್ನುರಾಣಿ–ಎಎಫ್‌ಪಿ ಚಿತ್ರ   

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಈ ಬಾರಿ ಹೆಚ್ಚಿನ ಮಹತ್ವವಿತ್ತು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಬೇಕಾದರೆ ಅಗ್ರಮಾನ್ಯ ಅಥ್ಲೀಟ್‌ಗಳು ಇಲ್ಲಿ ಉತ್ತಮ ನಿರ್ವಹಣೆ ತೋರಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಾಗಿತ್ತು. ಪ್ರತಿಭಾನ್ವಿತ ಓಟಗಾರ್ತಿ ಹಿಮಾ ದಾಸ್‌ ಹಾಗೂ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅನುಪಸ್ಥಿತಿಯಲ್ಲಿ ಭಾರತದ ಅಥ್ಲೀಟುಗಳ ಮೇಲೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಒಲಿಂಪಿಕ್ಸ್‌ಗೆ ಅರ್ಹತೆ ದೃಷ್ಟಿಯಿಂದ ಕೆಲವು ಅಥ್ಲೀಟುಗಳು ಅರ್ಹತಾ ಮಟ್ಟ ತಲುಪಬಹುದೇ ಎಂಬ ಕುತೂಹಲ ಇತ್ತು. ಮಿಶ್ರ ರಿಲೇಯಲ್ಲಿ ಅರ್ಹತೆ ಗಳಿಸಿದ್ದೊಂದು ಸಮಾಧಾನದ ಸಂಗತಿ.

ದೋಹಾದಲ್ಲಿ ಇತ್ತೀಚೆಗೆ ನಡೆದ (ಸೆಪ್ಟೆಂಬರ್‌ 27ರಿಂದ ಅಕ್ಟೋಬರ್‌ 6) ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ದಕ್ಕಿದ್ದು 58ನೇ ಸ್ಥಾನ.ನಮೀಬಿಯಾ, ಕೋಸ್ಟರಿಕಾ, ಮಾಲ್ಡೊವಾ, ಅಲ್ಜೀರಿಯಾ, ಹಂಗರಿಯಂತಹ ಪುಟ್ಟ ದೇಶಗಳಿಗಿಂತಲೂ ಕೆಳಗಿನ ಸ್ಥಾನ. ಒಲಿಂಪಿಕ್ಸ್‌ನ ಎರಡು ಸ್ಪರ್ಧೆಗಳಲ್ಲಿ ಅರ್ಹತೆ ಗಳಿಸಿದ್ದೊಂದೇ ಭಾರತಕ್ಕೆ ಒದಗಿದ ಸಮಾಧಾನ. ಭಾರತ ತಂಡ, ಮೊದಲ ಬಾರಿ ಪರಿಚಯಿಸಲಾದ 4x400 ಮೀಟರ್‌ ಮಿಶ್ರ ರಿಲೇಯಲ್ಲಿ ಅರ್ಹತಾ ಮಟ್ಟ ತಲುಪಿತು. 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಬ್ಳೆ ಕೂಡ ಒಲಿಂಪಿಕ್ಸ್ ಅರ್ಹತೆ ಪಡೆದರು.

ಮಹಿಳೆಯರ ಜಾವೆಲಿನ್‌ ಎಸೆತದಲ್ಲಿ ಅನ್ನುರಾಣಿ ರಾಷ್ಟ್ರೀಯ ದಾಖಲೆ ಸುಧಾರಿಸಿ ಸಂಚಲನ ಮೂಡಿಸಿದರಲ್ಲದೇ ಫೈನಲ್‌ ಹಂತಕ್ಕೆ ತಲುಪಿದ್ದರು. ಉಳಿದ ಅಥ್ಲೀಟುಗಳು ನಿರಾಸೆ ಮೂಡಿಸಿದರು.ಅಮೆರಿಕ ಒಟ್ಟು 29 ಪದಕಗಳೊಂದಿಗೆ (14 ಚಿನ್ನ) ನಿರೀಕ್ಷೆಯಂತೆ ಅಗ್ರಸ್ಥಾನ ಪಡೆದರೆ, ಕೆನ್ಯಾ ಮತ್ತು ಜಮೈಕಾ ಪದಕ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡವು.

ADVERTISEMENT

ಜಿನ್ಸನ್ ಜಾನ್ಸನ್ ಅವರು ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಒಲಿಂಪಿಕ್ಸ್‌ ಗುರಿ ಇರಿಸಿಕೊಂಡು ಅಮೆರಿಕದಲ್ಲಿ ಸ್ಕಾಟ್ ಸಿಮನ್ಸ್‌ ಬಳಿ ವಿಶೇಷ ತರಬೇತಿ ಪಡೆದಿದ್ದರು. 1,500 ಮೀಟರ್‌ ಓಟದ ಹೀಟ್ಸ್‌‌ನಲ್ಲಿ ಅವರು ಗಳಿಸಿದ್ದು 34ನೇ ಸ್ಥಾನ. ಸೆಮಿಫೈನಲ್ ಹಂತವನ್ನೂ ದಾಟಲೂ ಅವರಿಗೆ ಸಾಧ್ಯವಾಗಲಿಲ್ಲ. ಭರವಸೆ ಮೂಡಿಸಿದ್ದ ಪುರುಷರ ಮತ್ತು ಮಹಿಳೆಯರ ರಿಲೇ ತಂಡಗಳು ಹೆಚ್ಚು ಸದ್ದು ಮಾಡಲಿಲ್ಲ.

ವಿ.ಕೆ.ವಿಸ್ಮಯಾ, ಜಿಸ್ನಾ ಮ್ಯಾಥ್ಯು, ಮುಹಮ್ಮದ್ ಅನಾಸ್, ನೊಹ್ ನಿರ್ಮಲ್ ಟಾಮ್ ಅವರನ್ನೊಳಗೊಂಡ ಮಿಶ್ರ ರಿಲೇ ತಂಡ 4x400 ಮೀ. ರಿಲೇ ಓಟದ ವಿಭಾಗದಲ್ಲಿ ಫೈನಲ್ಸ್ ತಲುಪಿದ್ದೇ ಮಹಾ ಸಾಧನೆ. ಫೈನಲ್‌ನಲ್ಲಿಏಳನೇ ಸ್ಥಾನ ಪಡೆಯಿತು. ಕ್ರಮಿಸಿದ ಕಾಲ 3 ನಿಮಿಷ 15.77 ಸೆಕೆಂಡುಗಳು. ಇದು ಈ ಋತುವಿನಲ್ಲಿ ಭಾರತ ತಂಡದ ಶ್ರೇಷ್ಠ ಸಾಧನೆ. ಮಹಿಳಾ ಮತ್ತು ಪುರುಷರ ತಂಡಗಳು ಕನಿಷ್ಠ ಫೈನಲ್ ಪ್ರವೇಶಿಸಲು ಸಾಧ್ಯವಾಗದಿರುವುದೂ ನಿರಾಸೆ ಮೂಡಿಸಿತು. ಭಾರತ ಅಥ್ಲೆಟಿಕ್‌ ಫೆಡರೇಷನ್‌ ರಿಲೇ ತಂಡಗಳ ಮೇಲೆ ವಿಶ್ವಾಸ ಹೊಂದಿತ್ತು.

ರಾಷ್ಟ್ರೀಯ ಮುಕ್ತ ಕೂಟದಲ್ಲಿ 8.20 ಮೀ. ಜಿಗಿದಿದ್ದ ಲಾಂಗ್‌ಜಂಪ್‌ ಸ್ಪರ್ಧಿ ಎಂ.ಶ್ರೀಶಂಕರ್ ಇಲ್ಲಿ ಅದೇ ಲಯವನ್ನು ಕಾಯ್ದುಕೊಳ್ಳಲಾಗಲಿಲ್ಲ. ಎಂ.ಪಿ.ಜಬೀರ್ 400 ಮೀ.ಹರ್ಡಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದೇ ಕಷ್ಟದಿಂದ. ಈ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಧರುಣ್‌ ಅಯ್ಯಸ್ವಾಮಿ ಅರ್ಹತಾ ಸುತ್ತಿನಲ್ಲೇ ಅಭಿಯಾನ ಅಂತ್ಯಗೊಳಿಸಿದರು.

100 ಮೀ. ಓಟದಲ್ಲಿ ಭರವಸೆಯಾಗಿದ್ದ ದ್ಯುತಿ ಚಾಂದ್ ಕಳಪೆ ನಿರ್ವಹಣೆ ತೋರಿದರು. ಹೀಟ್ಸ್‌ನಲ್ಲಿ 11.48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರಿಗೆ ದಕ್ಕಿದ್ದು 7ನೇ ಸ್ಥಾನ.

ಮಹಾರಾಷ್ಟ್ರ ಹುಡುಗನ ಮಿಂಚು: ಸ್ಟೀಪಲ್‌ಚೇಸ್‌ ವಿಭಾಗದಲ್ಲಿ ಭಾರತಕ್ಕೆ ಹೆಚ್ಚು ನಿರೀಕ್ಷೆಗಳಿರಲಿಲ್ಲ. ಆದರೆ ಮಹಾರಾಷ್ಟ್ರದ ಅವಿನಾಶ್ ಸಬ್ಳೆ ಉತ್ತಮ ಸಾಧನೆಯನ್ನೇ ತೋರಿದರು. 3000 ಮೀ. ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಫೈನಲ್ ತಲುಪಿ 13ನೇ ಸ್ಥಾನ ಪಡೆದರು. 8 ನಿಮಿಷ 21.33 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದರು.

ನಡಿಗೆ ಸ್ಪರ್ಧೆಯಲ್ಲಿ ಕೆ.ಟಿ.ಇರ್ಫಾನ್ ಮೇಲೆ ನಿರೀಕ್ಷೆ ಅಧಿಕವಾಗಿತ್ತು. ಫೈನಲ್‌ನಲ್ಲಿ ಅವರು 27ನೇ ಸ್ಥಾನ ಗಳಿಸಿದರೆ, ಇನ್ನೊಬ್ಬ ಸ್ಪರ್ಧಿ ದೇವೆಂದರ್ ಸಿಂಗ್ ಅವರ ಸವಾಲು 36ನೇ ಸ್ಥಾನಕ್ಕೆ ಕೊನೆಗೊಂಡಿತು.

ಜಾವೆಲಿನ್ ಎಸೆತದಲ್ಲಿ ಶಿವಪಾಲ್ ಸಿಂಗ್, ಶಾಟ್‌ಪುಟ್‌ನಲ್ಲಿ ತೇಜಿಂದರ್ ಪಾಲ್ ಸಿಂಗ್ ತೂರ್ ನಿರಾಸೆ ಮೂಡಿಸಿದರು.
ಮಹಿಳೆಯರ 1500 ಮೀ. ಓಟದಲ್ಲಿ ಪಿ.ಯು ಚಿತ್ರಾ ಸಹ ಅಷ್ಟೇ. ಅರ್ಹತಾ ಸುತ್ತನ್ನು 4 ನಿಮಿಷ 10.11 ಸೆಕೆಂಡುಗಳಲ್ಲಿ ಕ್ರಮಿಸಿದ ಅವರು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಲು ಶಕ್ತರಾದರು.

ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಭರವಸೆಯಾಗಿದ್ದ ಅನ್ನುರಾಣಿ ಫೈನಲ್ ತಲುಪಿದ್ದರು. ಅರ್ಹತಾ ಸುತ್ತಿನಲ್ಲಿ 62.43 ಮೀಟರ್ ದೂರ ಜಾವೆಲಿನ್ ಎಸೆದಿದ್ದ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಫೈನಲ್‌ನಲ್ಲಿ ಅವರು ಗಳಿಸಿದ್ದು 8ನೇ ಸ್ಥಾನ. ಪುರುಷರ ಮ್ಯಾರಥಾನ್‌ನಲ್ಲಿ ಏಷ್ಯನ್ ಚಾಂಪಿಯನ್ ಆಗಿದ್ದ ಟಿ. ಗೋಪಿ ಇಲ್ಲಿ 21ನೇ ಸ್ಥಾನ ಗಳಿಸಿದರು.ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ ಅನ್ನು 2021ರ ಆಗಸ್ಟ್ 6ರಿಂದ ಅಮೆರಿಕದ ಒರೆಗಾನ್‌ನ ಯುಜೀನ್‌ನಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅಥ್ಲೀಟ್‌ಗಳು ಸಜ್ಜಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.