ADVERTISEMENT

ಸೂಪರ್‌ ಸ್ಟಾರ್ ನಿರೀಕ್ಷೆಯಲ್ಲಿ ಅಥ್ಲೆಟಿಕ್ಸ್‌ ಕ್ಷೇತ್ರ

ದೋಹಾದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಇಂದಿನಿಂದ, ಬೋಲ್ಟ್‌ ನಿವೃತ್ತಿ ನಂತರ ಮೊದಲ ಕೂಟ

ಏಜೆನ್ಸೀಸ್
Published 26 ಸೆಪ್ಟೆಂಬರ್ 2019, 19:45 IST
Last Updated 26 ಸೆಪ್ಟೆಂಬರ್ 2019, 19:45 IST
   

ದೋಹಾ: ‘ಸ್ಪ್ರಿಂಟ್‌ ದೊರೆ’ ಉಸೇನ್‌ ಬೋಲ್ಟ್‌ ನಿವೃತ್ತರಾದ ನಂತರ ಮೊದಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ಶುಕ್ರವಾರ ಆರಂಭವಾಗಲಿದೆ. ಒಂದೆಡೆ ಉದ್ದೀಪನ ಮದ್ದುಸೇವನೆ ಹಗರಣಗಳ ಕಳಂಕದಿಂದ ಕಂಗೆಟ್ಟಿರುವ ಅಥ್ಲೆಟಿಕ್‌ ಕ್ಷೇತ್ರ ಹೊಸ ಸೂಪರ್‌ಸ್ಟಾರ್‌ಗಾಗಿ ಅತೀವ ಕಾತರದಿಂದ ಎದುರುನೋಡುತ್ತಿದೆ.

ದೋಹಾದ ಖಲೀಫಾ ಇಂಟರ್‌ನ್ಯಾಷನಲ್‌ ಸ್ಟೇಡಿಯಮ್‌ನಲ್ಲಿ ನಡೆಯುವ ಹತ್ತು ದಿನಗಳ ಅಥ್ಲೆಟಿಕ್‌ ಮೇಳದಲ್ಲಿ 200 ರಾಷ್ಟ್ರಗಳ 2,000 ಅಥ್ಲೀಟುಗಳು‍ಪಾಲ್ಗೊಳ್ಳಲಿದ್ದಾರೆ. ಇಲ್ಲಿನ ಉಗ್ರ ಬಿಸಿಲು ಮತ್ತು ಸೆಕೆಯನ್ನು ತಡೆದುಕೊಳ್ಳಲು ಅತ್ಯಾಧುನಿಕ ವಾತಾನುಕೂಲ ವ್ಯವಸ್ಥೆ ಮಾಡಲಾಗಿದೆ. ಈ ಕೂಟ ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ನಡೆಯುತ್ತಿರುವುದು ಇದೇ ಮೊದಲು.

ಈ ಕೂಟ ಕೊಲ್ಲಿ ರಾಷ್ಟ್ರ ಕತಾರ್‌ಗೆ ಮಹತ್ವದ್ದು. ಈ ಪುಟ್ಟ ದೇಶ 2022ರಲ್ಲಿ ಇದಕ್ಕಿಂತ ದೊಡ್ಡ ಸವಾಲಾಗುವ ವಿಶ್ವ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಬೇಕಾಗಿದೆ.

ADVERTISEMENT

ಅಥ್ಲೆಟಿಕ್ಸ್‌ ಪ್ರಿಯರಿಗೆ, ಮುಂದಿನ ವರ್ಷದ ಟೋಕಿಯೊ ಚಾಂಪಿಯನ್‌ಷಿಪ್‌ನಲ್ಲಿ ಪ್ರಮುಖ ತಾರೆಗಳು ಯಾರಾಗಬಹುದೆಂಬ ಸುಳಿವನ್ನು ಈ ಕೂಟ ನೀಡಲಿದೆ.

ಜಮೈಕಾದ ಸೂಪರ್‌ಸ್ಟಾರ್‌ ಬೋಲ್ಟ್‌ 2017ರಲ್ಲಿ ನಿವೃತ್ತರಾದ ಮೇಲೆ ದೊಡ್ಡದೊಂದು ನಿರ್ವಾತ ಮೂಡಿದ್ದು, ಈಗ ಎಲ್ಲರ ಕಣ್ಣು ಅಲ್ಪ ಅಂತರದ ಓಟಗಳ ಮೇಲೆ ನೆಟ್ಟಿದೆ. ಅಮೆರಿಕದ ಓಟದ ತಾರೆ ನೋವ ಲೈಲ್ಸ್‌ ಅವರು ಬೋಲ್ಟ್‌ ಉತ್ತರಾಧಿಕಾರಿ ಆಗುವಂತೆ ಕಾಣುತ್ತಿದೆ. ಡೈಮಂಡ್‌ ಲೀಗ್‌ ಚಾಂಪಿಯನ್‌ ಆಗಿರುವ ಅವರು 200 ಮೀಟರ್ಸ್‌ ಓಟ ಗೆಲ್ಲುವ ‘ಹಾಟ್‌ ಫೇವರಿಟ್‌’ ಆಗಿದ್ದಾರೆ.

22 ವರ್ಷದ ಲೈಲ್ಸ್‌, ಟೋಕಿಯೊ ಒಲಿಂಪಿಕ್ಸ್‌ನಲ್ಲಿ 100 ಮೀ. ಮತ್ತು 200 ಮೀ. ಸ್ವರ್ಣ ‘ಡಬಲ್‌’ಗೆ ಗುರಿಯಿಡುವ ನಿರೀಕ್ಷೆಯಿದ್ದು, ದೋಹಾದಲ್ಲಿ 200 ಮೀ. ಓಟ ಮಾತ್ರ ಓಡಲಿದ್ದಾರೆ. ಹೀಗಾಗಿ, ಹೊರಾಂಗಣದಲ್ಲಿ 100 ಮೀ. ಓಟದಲ್ಲಿ ಮೊದಲ ಮಹತ್ವದ ಪ್ರಶಸ್ತಿಯ ಬೆನ್ನತ್ತಿರುವ ಕ್ರಿಸ್ಟಿಯನ್‌ ಕೋಲ್ಮನ್‌ ಅವರಿಗೆ ಹೆಚ್ಚಿನ ಅವಕಾಶಗಳು ತೆರೆದಿವೆ.

ಉದ್ದೀಪನ ಮದ್ದು ಸೇವನೆ ಕುಣಿಕೆಯಿಂದ 23 ವರ್ಷದ ಲೈಲ್ಸ್‌ ಸ್ಪಲ್ಪದರಲ್ಲಿ ಪಾರಾಗಿದ್ದಾರೆ. ಅವರು ಎರಡು ವರ್ಷದ ಶಿಕ್ಷೆಗೊಳಗಾಗುವ ಸಾಧ್ಯತೆಯಿತ್ತು. 12 ತಿಂಗಳ ಅವಧಿಯಲ್ಲಿ ಮೂರು ಸಲ ಅವರು ಮದ್ದು ಪರೀಕ್ಷೆಗೆತಮ್ಮ ಇರವನ್ನು ತೋರಿಸಿರಲಿಲ್ಲ. ಆದರೆ ತಾಂತ್ರಿಕ ಅಧಾರದ ಮೇಲೆ ಅವರು ನಿಷೇಧ ಶಿಕ್ಷೆಯಿಂದ ಪಾರಾದರು.

ಮಹಿಳೆಯರ ಸ್ಪ್ರಿಂಟ್‌ ಓಟದಲ್ಲಿ ಜಮೈಕಾದ ಶೆಲ್ಲಿ ಆ್ಯನ್‌ ಫ್ರೇಸರ್‌ ಪ್ರೈಸ್‌ ಅವರು 32ನೇ ವಯಸ್ಸಿನಲ್ಲಿ ದಾಖಲೆ ನಾಲ್ಕನೇ ಬಾರಿ 100 ಮೀ. ಚಿನ್ನ ಗೆಲ್ಲಲು ಹೊರಟಿದ್ದಾರೆ.

ಹರ್ಡಲ್ಸ್‌ನಲ್ಲಿ ದಾಖಲೆ ಸಾಧ್ಯತೆ:ಪುರುಷರ ಮತ್ತು ಮಹಿಳೆಯರ 400 ಮೀ. ಹರ್ಡಲ್ಸ್‌ ಓಟದಲ್ಲಿ ದಾಖಲೆಗಳು ಪತನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪುರುಷರ ವಿಭಾಗದಲ್ಲಿ ನಾರ್ವೆಯ ಕರ್ಸ್ಟೆನ್‌ ವಾರೊಲ್ಮ್‌ ಮತ್ತು ಅಮೆರಿಕದ ರೇ ಬೆಂಜಮಿನ್‌ ನಡುವಣ ತುರುಸಿನ ಸ್ಪರ್ಧೆಯಿದೆ. ಮಹಿಳಾ ವಿಭಾಗದಲ್ಲಿ ದಲಿಲಾ ಮುಹಮ್ಮದ್‌ ಜುಲೈನಲ್ಲಿ ಅಮೆರಿಕ ಟ್ರಯಲ್ಸ್‌ ವೇಳೆ ಸ್ಥಾಪಿಸಿದ್ದ ನೂತನ ವಿಶ್ವ ದಾಖಲೆಯನ್ನು (52.20 ಸೆ.) ಸುಧಾರಿಸುವ ತವಕದಲ್ಲಿದ್ದಾರೆ.

ದಕ್ಷಿಣ ಆಫ್ರಿಕದ ಕಾಸ್ಟರ್‌ ಸೆಮೆನ್ಯಾ ಅವರು ದೋಹಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಅವರಿಗೆ ಟೆಸ್ಟೊಸ್ಟೆರೊನ್‌ ಹಾರ್ಮೊನ್‌ ಮಟ್ಟ ಇಳಿಸಲು ಔಷಧಿ ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಈ ನಿಯಮದ ವಿರುದ್ಧ ಕಾನೂನು ಹೋರಾಟದಲ್ಲಿ ಅವರು ಯಶಸ್ಸು ಪಡೆದಿಲ್ಲ.

ಎಷ್ಟೇ ಪ್ರಯತ್ನಪಟ್ಟರೂ ಆಥ್ಲೆಟಿಕ್ ಕ್ಷೇತ್ರವನ್ನು ಉದ್ದೀಪನ ಮದ್ದು ಸೇವನೆಯಿಂದ ಪೂರ್ತಿ ತೊಳೆಯಲು ಸಾಧ್ಯವಾಗಿಲ್ಲ ಎಂಬುದು ಕೋಲ್ಮನ್ ವಿವಾದಿಂದ ಐಎಎಎಫ್‌ಗೆ ಅರಿವಾಗಿದೆ. 2015–16ರಲ್ಲಿ ಬೆಳಕಿಗೆ ಬಂದ ಮದ್ದು ಸೇವನೆ ಹಗರಣದಲ್ಲಿ ಭಾಗಿಯಾದ ಅಥ್ಲೀಟುಗಳ ಮೇಲೆ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ.

ರಷ್ಯದ ಅಥ್ಲೀಟುಗಳು ಮದ್ದು ಸೇವನೆ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಜರ್ಮನಿಯ ಟಿ.ವಿ. ಚಾನೆಲ್‌ ಒಂದು ಕೆನ್ಯಾದ ಅಥ್ಲೀಟುಗಳು ಮದ್ದುಸೇವನೆ ಮಾಡುತ್ತಿರುವ ವಿಷಯವನ್ನು ಬಹಿರಂಗಪಡಿಸಿತ್ತು. ಒಲಿಂಪಿಕ್ ಹ್ಯಾಮರ್‌ ಥ್ರೊ ಚಾಂಪಿಯನ್‌ ದಿಲ್‌ಶೊದ್‌ ನಜರೋವ್‌ ನಿಷೇಧಿತ ಮದ್ದುಸೇವನೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಬುಧವಾರ ಐಎಎಎಫ್‌ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಸೆಬಾಸ್ಟಿಯನ್‌ ಕೊ ಅವರು ಇದೆಲ್ಲದರ ನಡುವೆಯೂ ಆಶಾವಾದದ ಮಾತುಗಳನ್ನಾಡಿದ್ದಾರೆ. ಡೋಪಿಂಗ್ ವಿರುದ್ಧ ಹೋರಾಟದಲ್ಲಿ ಅಥ್ಲೆಟಿಕ್‌ ಇಂಟಗ್ರಿಟಿ ಯೂನಿಟ್‌ನ ಸ್ಥಾಪನೆ ಒಂದು ಹೆಜ್ಜೆ ಎಂದು ಹೇಳಿದ್ದಾರೆ.

38 ಡಿಗ್ರಿ ಸೆಲ್ಷಿಯಸ್‌ನಷ್ಟು ತಾಪಮಾನ ಕತಾರ್‌ನಲ್ಲಿ ಸಾಮಾನ್ಯ. ಆದರೆ ಮುಖ್ಯ ಕ್ರೀಡಾಂಗಣದಲ್ಲಿರುವ ಹವಾನಿಯಂತ್ರಿತ ವ್ಯವಸ್ಥೆಯಿಂದ ಈ ತಾಪಮಾನ 23 ರಿಂದ 25 ಡಿಗ್ರಿ ಸೆಲ್ಷಿಯಸ್‌ನಷ್ಟು ಆಗಲಿದೆ. ‘ದೋಹಾದಲ್ಲಿ ಅಳವಡಿಸಿರುವ ತಂತ್ರಜ್ಞಾನ ಅಚ್ಚರಿ ಮೂಡಿಸುವಂಥದ್ದು’ ಎಂದಿದ್ದಾರೆ ಸೆಬಾಸ್ಟಿಯನ್‌ ಕೊ.

ಕತಾರ್‌ಗೆ ಸವಾಲಿನ ಕೂಟ

ಬಹು ನಿರೀಕ್ಷಿತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಶುಕ್ರವಾರ ಚಾಲನೆ ದೊರೆಯಲಿದೆ. ಆ ಮೂಲಕ 2022ರ ಫುಟ್‌ಬಾಲ್‌ ವಿಶ್ವ ಕಪ್‌ಗೆ ನಡೆಸಿರುವ ಸಿದ್ಧತೆ, ನೆರೆಯ ರಾಷ್ಟ್ರಗಳು ಹೇರಿದ್ದ ಬಹಿಷ್ಕಾರವನ್ನು ಈ ರಾಷ್ಟ್ರಹೇಗೆ ತಾಳಿಕೊಂಡಿದೆ ಎನ್ನುವುದನ್ನೂ ಕಾಣಲೂ ಅವಕಾಶ ಆಗಲಿದೆ ಎನ್ನುತ್ತಾರೆ ತಜ್ಞರು.

ಇರಾನ್‌ ಮತ್ತು ಇಸ್ಲಾಮಿಕ್‌ ಆಂದೋಲನಗಳನ್ನು ಬೆಂಬಲಿಸುತ್ತಿದೆ ಎಂಬ ಕಾರಣಕ್ಕೆ ಸೌದಿ, ಯುಎಇ ಮತ್ತು ಮಿತ್ರ ರಾಷ್ಟ್ರಗಳು 2017ರಲ್ಲಿ ಇರಾನ್‌ ಮೇಲೆ ಆರ್ಥಿಕ ದಿಗ್ಬಂಧನ ಹೇರಿದ್ದವು. ಈ ಆರೋಪಗಳನ್ನು ಕತಾರ್‌ ನಿರಾಕರಿಸುತ್ತ ಬಂದಿದೆ.

ಈ ಕೂಟಕ್ಕೆ ಸೌದಿ ಅರೇಬಿಯಾ ಮೂರು ಮಂದಿ ಅಥ್ಲೀಟುಗಳನ್ನು, ಈಜಿಪ್ಟ್‌ ಐವರನ್ನು, ಯುಎಇ ಒಬ್ಬರನ್ನು ಮತ್ತು ಬಹರೇನ್‌ 21 ಮಂದಿಯ ತಂಡವನ್ನು ಕಳುಹಿಸುತ್ತಿದೆ.

ಭಾರತಕ್ಕೆ ಹೆಚ್ಚಿನ ನಿರೀಕ್ಷೆಗಳಿಲ್ಲ

ದೋಹಾ: ಭಾರತ ಶುಕ್ರವಾರ ಆರಂಭವಾಗುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕದ ನಿರೀಕ್ಷೆಗಳನ್ನಿಟ್ಟುಕೊಂಡಿಲ್ಲ. ಗಾಯಾಳುಗಳಾದ ನೀರಜ್‌ ಚೋಪ್ರಾ ಮತ್ತು ಹಿಮಾ ದಾಸ್‌ ಅನುಪಸ್ಥಿತಿಯಲ್ಲಿ ವೈಯಕ್ತಿಕ ವಿಭಾಗಗಳಲ್ಲಿ ಫೈನಲ್‌ ತಲುಪುವುದು ದೂರದ ಮಾತಾಗಿ ಕಾಣಿಸುತ್ತಿದೆ.

ಜಾವೆಲಿನ್‌ನಲ್ಲಿ ವಿಶ್ವ ಮಟ್ಟದ ಸಾಧನೆ ಮಾಡಿರುವ ನೀರಜ್‌, ಮೇ ತಿಂಗಳಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ‌‌‌‌ಇನ್ನೂ ಗಂಭೀರವಾಗಿ ಅಭ್ಯಾಸ ಆರಂಭಿಸಿಲ್ಲ. ಈ ಚಾಂಪಿಯನ್‌ಷಿಪ್‌ಗೆ ಅವರು ಅರ್ಹತೆ ಪಡೆದಿದ್ದರು. ಹಿಮಾ ದಾಸ್‌, ಯುರೋಪಿನ ಕೆಲವು ಕೂಟಗಳಲ್ಲಿ ಮೊದಲ ಸ್ಥಾನ ಪಡೆದರೂ, ಬೆನ್ನು ನೋವಿನಿಂದ ಹಿಂದೆ ಸರಿದಿದ್ದಾರೆ.

ಭಾರತ 27 ಮಂದಿಯ ತಂಡವನ್ನು ಈ ಕೂಟಕ್ಕೆ ಕಳುಹಿಸಿದೆ. ಇವರಲ್ಲಿ 13 ಮಂದಿ ರಿಲೇ ತಂಡದಲ್ಲಿದ್ದಾರೆ. ಧರುನ್‌ ಅಯ್ಯಸಾಮಿ 400 ಮೀ. ಹರ್ಡಲ್ಸ್‌ನಲ್ಲಿ ಕೂಡ ಓಡಲಿದ್ದಾರೆ.

ಎಎಫ್‌ಐ, 4x400 ಮೀ. ರಿಲೇ ಓಟಗಳಲ್ಲಿ ಹೆಚ್ಚು ಭರವಸೆ ಇಟ್ಟುಕೊಂಡಿದೆ. ವಿಶೇಷವಾಗಿ, ಮೊದಲ ಬಾರಿ ಪರಿಚಯಿಸಲಾಗುತ್ತಿರುವ ಮಿಶ್ರ ರಿಲೇಯಲ್ಲಿ ತಂಡ ಸ್ವಲ್ಪ ವಿಶ್ವಾಸದಿಂದ ಇದೆ. ರಿಲೇಯಲ್ಲಿ ಮೊದಲ ಎಂಟು ಸ್ಥಾನ ಗಳಿಸುವ ತಂಡಗಳು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯಲಿವೆ.

ಅಂಜು ಬಾಬಿ ಜಾರ್ಜ್ 2003ರ ಪ್ಯಾರಿಸ್‌ ವಿಶ್ವ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡ ನಂತರ ಭಾರತಕ್ಕೆ ಪದಕ ಗಗನಕುಸುಮವಾಗಿದೆ.ಕಳೆದ ಬಾರಿಯ (2017 ಲಂಡನ್‌) ಚಾಂಪಿಯನ್‌ಷಿಪ್‌ನಲ್ಲಿ ದೇವಿಂದರ್‌ ಸಿಂಗ್ ಕಾಂಗ್‌ ಪುರುಷರ ಜಾವೆಲಿನ್‌ನಲ್ಲಿ ಫೈನಲ್‌ ತಲುಪಿದ್ದೇ ಸಾಧನೆ ಎನಿಸಿತು.

400 ಮೀ. ಓಟದಲ್ಲಿ ಅರ್ಹತೆ ಗಳಿಸಿದ್ದರೂ, ಪುರುಷರ ರಿಲೇ ತಂಡದ ಕಡೆ ಗಮನ ಕೇಂದ್ರೀಕರಿಸಲು ಮೊಹಮ್ಮದ್‌ ಅನಾಸ್‌, ವೈಯಕ್ತಿಕ ಓಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಧ್ಯುತಿ ಚಾಂದ್‌ 100 ಮೀ. ಓಟದಲ್ಲಿ ಸೆಮಿಫೈನಲ್‌ ತಲುಪುವ ವಿಶ್ವಾಸದಲ್ಲಿದ್ದಾರೆ.ಶುಕ್ರವಾರ ಲಾಂಗ್‌ಜಂಪ್‌ ಅರ್ಹತಾ ಸುತ್ತಿನಲ್ಲಿ ಕೇರಳದ ಶ್ರೀಶಂಕರ್‌ ಪಾಲ್ಗೊಳ್ಳುವರು. ಫೈನಲ್‌ಗೆ ಅರ್ಹತಾ ಮಟ್ಟ 8.15 ಮೀ. ಎಂದು ನಿಗದಿಪಡಿಸಲಾಗಿದೆ. ಕಳೆದ ವರ್ಷದ ಓಪನ್‌ ರಾಷ್ಟ್ರೀಯ ಕೂಟದಲ್ಲಿ ಅವರ ಅತ್ಯುತ್ತಮ ಸಾಧನೆ 8.20 ಮೀ. ಮೂಡಿಬಂದಿತ್ತು. ಈ ವರ್ಷ ಅವರ ಉತ್ತಮ ಸಾಧನೆ 8.00 ಮೀ. ಆಗಿದೆ.

ದಿನದ ಕೊನೆಯಲ್ಲಿ ಅಯ್ಯಸಾಮಿ ಮತ್ತು ಎಂ.ಪಿ.ಜಬೀರ್‌ ಪುರುಷರ 400 ಮೀ. ಹೀಟ್ಸ್‌ನಲ್ಲಿ ಓಡಲಿದ್ದಾರೆ. 48.80 ಸೆ.ಗಳ ಸಾಧನೆ ದಾಖಲಿಸಿರುವ ಅಯ್ಯಸಾಮಿ ಸೆಮಿಫೈನಲ್‌ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.