ADVERTISEMENT

ಜಾವೆಲಿನ್ ಥ್ರೋ: ವಿಶ್ವ ವೇದಿಕೆಯಲ್ಲಿ ಭಾರತದ ನೀರಜ್, ಪಾಕಿಸ್ತಾನದ ನದೀಂ ಪೈಪೋಟಿ

ಭಾರತದ ‘ಚಾಂಪಿಯನ್ ಅಥ್ಲೀಟ್‌’ಗೆ ಕಠಿಣ ಪೈಪೋಟಿ

ಪಿಟಿಐ
Published 17 ಸೆಪ್ಟೆಂಬರ್ 2025, 18:54 IST
Last Updated 17 ಸೆಪ್ಟೆಂಬರ್ 2025, 18:54 IST
<div class="paragraphs"><p>ಭಾರತದ ನೀರಜ್ ಚೋಪ್ರಾ&nbsp;</p></div>

ಭಾರತದ ನೀರಜ್ ಚೋಪ್ರಾ 

   

ಪಿಟಿಐ ಚಿತ್ರ

ಟೋಕಿಯೊ: ವಿಶ್ವ ಅಥ್ಲೆಟಿಕ್ಸ್ ಅಂಗಳದಲ್ಲಿ ‘ಬದ್ಧ ಎದುರಾಳಿ’ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಂ ಅವರು ಮುಖಾಮುಖಿಯಾಗಲಿದ್ಧಾರೆ.

ADVERTISEMENT

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀರಜ್ ಮತ್ತು ಹೋದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕೂಟದಲ್ಲಿ ಚಾಂಪಿಯನ್ ಆಗಿದ್ದ ಅರ್ಷದ್ ಅವರಿಬ್ಬರ ಪೈಪೋಟಿಯು ಈಗ ಕುತೂಹಲಕ್ಕೆ ಕಾರಣವಾಗಿದೆ. 

ಬುಧವಾರ ನಡೆದ ಎ ಗುಂಪಿನ ಅರ್ಹತಾ ಸುತ್ತಿನ ಮೊದಲ ಥ್ರೋನಲ್ಲಿಯೇ ನೀರಜ್ ಅವರು 84.50 ಮೀಟರ್ಸ್ ಸಾಧನೆ ಮಾಡಿ ಫೈನಲ್‌ ಸುತ್ತಿಗೆ ಲಗ್ಗೆ ಇಟ್ಟರು.  27 ವರ್ಷ ವಯಸ್ಸಿನ ನೀರಜ್ ಅವರು ಈ ಸುತ್ತಿನ ಮೊದಲ ಸ್ಪರ್ಧಿಯೂ ಆಗಿದ್ದು ತಮ್ಮ ಪ್ರಥಮ ಥ್ರೋನಲ್ಲಿಯೇ ಫೈನಲ್ ಅರ್ಹತೆ ಪಡೆದರು. 

ಬಿ ಗುಂಪಿನಲ್ಲಿ ಸ್ಪರ್ಧಿಸಿದ್ದ ನದೀಂ ಅವರ ಫೈನಲ್ ಹಾದಿ ಸುಲಭವಾಗಿರಲಿಲ್ಲ. ಅವರು ಮೂರನೇ ಥ್ರೋನಲ್ಲಿ 85.28 ಮೀ ಸಾಧನೆ ಮಾಡಿ ಪದಕ ಸುತ್ತಿಗೆ ಲಗ್ಗೆಯಿಟ್ಟರು. ಅವರು ಇಲ್ಲಿ ಮೊದಲ ಥ್ರೋನಲ್ಲಿ 76.99 ಮೀ ಮತ್ತು ಎರಡನೇಯದ್ದರಲ್ಲಿ 74.17 ಮೀ ಥ್ರೋ ಮಾಡಿದರು. ಮೂರನೇ ಪ್ರಯತ್ನದಲ್ಲಿ ಅವರು ಅರ್ಹತಾ ಮಟ್ಟವನ್ನು ಸಾಧಿಸುವಲ್ಲಿ ಯಶಸ್ವಿಯಾದರು. 2023ರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚಿನ್ನ ಮತ್ತು ನದೀಂ ಬೆಳ್ಳಿ ಜಯಿಸಿದ್ದರು. 

ನಿಯಮದ ಪ್ರಕಾರ; 84.50 ಮೀ ಗುರಿಯನ್ನು ಸಾಧಿಸಿದವರು ಅಥವಾ ಅರ್ಹತಾ ಸುತ್ತಿನಲ್ಲಿ ಗರಿಷ್ಠ ಎಸೆತಗಳ ಸಾಧನೆ ಮಾಡಿದ 12 ಮಂದಿ ಫೈನಲ್‌  ಅರ್ಹತೆ ಪಡೆಯುತ್ತಾರೆ. ಗುರುವಾರ ಫೈನಲ್ ನಡೆಯಲಿದೆ.

ನದೀಂ ಅವರು ಪ್ಯಾರಿಸ್‌ ಕೂಟದ ನಂತರ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಾತ್ರ ಭಾಗವಹಿಸಿದ್ದರು. ಕೊರಿಯಾದಲ್ಲಿ ನಡೆದಿದ್ದ ಆ ಕೂಟದಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು. ಜುಲೈನಲ್ಲಿ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 

ಸಚಿನ್ ಫೈನಲ್‌ಗೆ

ಭಾರತದ ಮತ್ತೊಬ್ಬ ಅಥ್ಲೀಟ್ ಸಚಿನ್ ಯಾದವ್ ಅವರು ಎ ಗುಂಪಿನಲ್ಲಿ ಆರನೇ ಹಾಗೂ ಒಟ್ಟಾರೆಯಾಗಿ 10ನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆ ಇಟ್ಟರು. ಅವರು 83.67 ಮೀ ಥ್ರೋ ಮಾಡಿದ್ದರು.

ಭಾರತದ ಇನ್ನಿಬ್ಬರು ಅಥ್ಲೀಟ್‌ಗಳಾದ ರೋಹಿತ್ ಯಾದವ್ ಮತ್ತು ಯಶ್‌ವೀರ್ ಸಿಂಗ್ ಅವರು ಕ್ರಮವಾಗಿ 28 ಮತ್ತು 30ನೇ ಸ್ಥಾನ ಪಡೆದರು. ಎರಡೂ ಗುಂಪುಗಳಿಂದ ಒಟ್ಟು 37 ಸ್ಪರ್ಧಿಗಳು ಕಣದಲ್ಲಿದ್ದರು. 

ಪೀಟರ್ಸ್‌ಗೆ ಅಗ್ರಸ್ಥಾನ

ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (89.53ಮೀ) ಫೈನಲ್‌ಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಅತಿ ಹೆಚ್ಚು ದೂರ ಥ್ರೋ ಮಾಡಿದ ಸಾಧನೆ ಮಾಡಿದ್ದಾರೆ. ಅವರ ನಂತರದ ಸ್ಥಾನಗಳಲ್ಲಿ;

ಜರ್ಮನಿಯ ಜೂಲಿಯನ್ ವೆಬರ್ (ಜರ್ಮನಿ; 87.21ಮೀ), ಜೂಲಿಯಸ್ ಯೆಗೊ (ಕೆನ್ಯಾ; 85.96ಮೀ), ಡೇವಿಡ್ ವೆಗ್ನರ್ (ಪೋಲೆಂಡ್; 85.67ಮೀ), ಅರ್ಷದ್ ನದೀಂ (ಪಾಕಿಸ್ತಾನ; 85.28 ಮೀ), ನೀರಜ್ ಚೋಪ್ರಾ (ಭಾರತ; 84.85ಮೀ),  ಅಮೆರಿಕದ ಕರ್ಟಿಸ್ ಥಾಂಪ್ಸನ್ (84.72ಮೀ), ಯಾಕೂಬ್ ವಾಡ್ಲೆಚ್ (ಜೆಕ್ ಗಣರಾಜ್ಯ; 84.11ಮೀ), ಕೆಶೊಮ್ ವಾಲ್ಕಾಟ್ (ಟ್ರಿನಿಡಾಡ್–ಟೊಬ್ಯಾಗೊ; 83.93ಮೀ), ಸಚಿನ್ ಯಾದವ್ (ಭಾರತ; 83.67ಮೀ), ಕ್ಯಾಮೆರಾನ್ ಎಂಸೆನ್‌ಟೈರ್ (ಆಸ್ಟ್ರೇಲಿಯಾ; 83.03ಮೀ), ರುಮೇಶ್ ತರಂಗಾ ಪಥಿರಾಗೆ (ಶ್ರೀಲಂಕಾ; 82.80ಮೀ)  ಅವರು ಪೈಪೋಟಿ ನಡೆಸಲಿದ್ದಾರೆ. 

ಸ್ಪರ್ಧೆ ಸಮಯ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.