ADVERTISEMENT

ವಿಶ್ವಕಪ್‌ ಚೆಸ್‌ ಟೂರ್ನಿ: ಡ್ರಾ ಪಂದ್ಯಗಳಲ್ಲಿ ಭಾರತದ ಆಟಗಾರರು

ಪಿಟಿಐ
Published 11 ನವೆಂಬರ್ 2025, 16:03 IST
Last Updated 11 ನವೆಂಬರ್ 2025, 16:03 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಪಣಜಿ: ವಿಶ್ವಕಪ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಆಡುತ್ತಿರುವ ಭಾರತದ ಐದೂ ಆಟಗಾರರು ಮಂಗಳವಾರ ಎದುರಾಳಿಗಳ ವಿರುದ್ಧ ತಮ್ಮ ಮೊದಲ ಕ್ಲಾಸಿಕಲ್ ಆಟವನ್ನು ಡ್ರಾ ಮಾಡಿಕೊಂಡರು. ಆ ಮೂಲಕ ಮುಂದಿನ ಸುತ್ತಿಗೆ ಮುನ್ನಡೆಯುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ನಾಲ್ಕನೇ ಸುತ್ತಿನ ಒಟ್ಟು 16 ಪಂದ್ಯಗಳಲ್ಲಿ ಎರಡರಲ್ಲಷ್ಟೇ ನಿರ್ಣಾಯಕ ಫಲಿತಾಂಶಗಳು ಬಂದವು. ಹೆಚ್ಚಿನ ಆಟಗಾರರು ಜಯಕ್ಕೆ ಯತ್ನಿಸಿ ಅಪಾಯ ಮೈಮೇಲೆ ಎಳೆದುಕೊಳ್ಳಲು ಹೋಗದೇ ಸುರಕ್ಷಿತ ಡ್ರಾಕ್ಕೆ ಒಲವು ತೋರಿದರು.

ಎರಡನೇ ಶ್ರೇಯಾಂಕದ ಅರ್ಜುನ್‌ ಇರಿಗೇಶಿ, ಹಿರಿಯ ಆಟಗಾರ ಪೀಟರ್ ಲೆಕೊ (ಹಂಗೆರಿ) ಜೊತೆ ಕೇವಲ 19 ನಡೆಗಳಲ್ಲಿ ಡ್ರಾ ಸಾಧಿಸಿದರು. ಮೂರನೇ ಶ್ರೇಯಾಂಕದ ಪ್ರಜ್ಞಾನಂದ ಅವರು ಫಿಡೆ ಪ್ರತಿನಿಧಿಸಿರುವ ರಷ್ಯಾದ ಡೇನಿಯಲ್ ದುಬೋವ್ ಜೊತೆ ಪಾಯಿಂಟ್ ಹಂಚಿಕೊಂಡರು.

ADVERTISEMENT

ಅನುಭವಿ ಪಿ.ಹರಿಕೃಷ್ಣ ಅವರು ಸ್ವೀಡನ್‌ನ ನಿಲ್ಸ್‌ ಗ್ರಾಂಡೆಲಿಯಸ್‌ ಜೊತೆ ಡ್ರಾಕ್ಕೆ ಬೇಗ ಸಮ್ಮತಿಸಿದರು. ವಿಯೆಟ್ನಾಮಿನ ಪ್ರಬಲ ಆಟಗಾರ ಲೀ ಕ್ವಾಂಗ್‌ ಲೀಮ್‌ ಅವರು ಕಾರ್ತಿಕ್ ವೆಂಕಟರಾಮನ್ ಜೊತೆ ಡ್ರಾ ಮಾಡಿಕೊಂಡರು.

ವಿ. ಪ್ರಣವ್ ಮತ್ತು ಉಜ್ಬೇಕಿಸ್ತಾನದ ನದಿರ್ಬೆಕ್ ಯಾಕುಬ್ಬೊಯೆವ್ ಕೂಡ ಪಾಯಿಂಟ್ ಹಂಚಿಕೊಂಡರು. ಜರ್ಮನಿಯ ಫ್ರೆಡರಿಕ್ ಸ್ವೇನ್ ಮತ್ತು ಅರ್ಮೇನಿಯಾದ ಶಾಂತ್‌ ಸರ್ಗಿಸ್ಯಾನ್ ನಡುವಣ ಆಟ ಡ್ರಾ ಆಯಿತು.

ಅಮೆರಿಕದ ಲೆವೊನ್ ಅರೋನಿಯನ್‌, ಪೋಲೆಂಡ್‌ನ ವೊಜ್ತಾಝೆಕ್‌ ರಡೊಸ್ಲಾವ್ ಅವರನ್ನು ಸೋಲಿಸಿದರೆ, ಮೆಕ್ಸಿಕೊದ ಮಾರ್ಟಿನೆಜ್‌ ಅಲ್ಕಾಂತರ ಎಡ್ವರ್ಡೊ, ಸರ್ಬಿಯಾದ ಅಲೆಕ್ಸಿ ಸರನ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.