ತನ್ವಿ ಶರ್ಮಾ
ಪಿಟಿಐ ಚಿತ್ರ
ಗುವಾಹಟಿ: ಸ್ಫೂರ್ತಿಯುತ ಆಟ ಮುಂದುವರಿಸಿದ ಭಾರತದ ಉದಯೋನ್ಮುಖ ಆಟಗಾರ್ತಿಯರಾದ ತನ್ವಿ ಶರ್ಮಾ ಮತ್ತು ಉನ್ನತಿ ಹೂಡಾ ಅವರು ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು. ಬಾಲಕರ ಸಿಂಗಲ್ಸ್‌ನಲ್ಲಿ ಶ್ರೇಯಾಂಕರಹಿತ ಆಟಗಾರ ಜ್ಞಾನದತ್ತು ಟಿ.ಟಿ. ಸಹ ಎಂಟರ ಘಟ್ಟ ತಲುಪಿದರು.
ಬಾಲಕಿಯರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ತನ್ವಿ 15–8, 15–5 ರಿಂದ ಚೀನಾದ ಸನ್ ಲಿ ಯುವಾನ್ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದರೆ, ಎಂಟನೆ ಶ್ರೇಯಾಂಕದ ಉನ್ನತಿ ಆರಂಭದಲ್ಲಿ ಒಂದಿಷ್ಟು ಪರದಾಡಿದರೂ ಬೇಗನೇ ಲಯಕ್ಕೆ ಮರಳಿ 15–10, 15–7 ರಿಂದ ಮಲೇಷ್ಯಾದ ಕೆರಿನ್ ಟೀ ವಿರುದ್ಧ ಗೆಲುವು ಸಾಧಿಸಿದರು.
ಎಂಟರ ಘಟ್ಟದ ಪಂದ್ಯದಲ್ಲಿ ತನ್ವಿ, ಜಪಾನ್‌ನ ಸಾಕಿ ಮಾತ್ಸುಮೊಟೊ ವಿರುದ್ಧ, ಉನ್ನತಿ, ಎರಡನೇ ಶ್ರೇಯಾಂಕದ ಅನ್ಯಪತ್ ಫಿಚಿಟ್‌ಪ್ರೀಚಸಕ್ (ಥಾಯ್ಲೆಂಡ್) ಅವರನ್ನು ಎದುರಿಸಲಿದ್ದಾರೆ.
ಆದರೆ ಹತ್ತನೇ ಶ್ರೇಯಾಂಕದ ರಕ್ಷಿತಾಶ್ರೀ ನಿರ್ಗಮಿಸಬೇಕಾಯಿತು. ನಾಲ್ಕನೇ ಶ್ರೇಯಾಂಕದ ರನಿತ್ಮಾ ಲಿಯಾನಗೆ (ಶ್ರೀಲಂಕಾ) ಅವರು 15–11, 15–9 ರಲ್ಲಿ ಭಾರತದ ಆಟಗಾರ್ತಿ ವಿರುದ್ಧ ಜಯಗಳಿಸಿದರು.
ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿರುವ ಜ್ಞಾನದತ್ತು ಯಶಸ್ಸಿನ ಓಟ ಮುಂದುವರಿಸಿದ ಅಮೆರಿಕದ ಗರೆತ್ ತಾನ್ ಅವರನ್ನು 15–12, 15–13 ರಿಂದ ಸೋಲಿಸಿದರು. ಗರೆತ್ ಈ ಟೂರ್ನಿಯಲ್ಲಿ ಎಂಟನೆ ಶ್ರೇಯಾಂಕ ಪಡೆದಿದ್ದರು.
ಮಿಶ್ರ ಡಬಲ್ಸ್‌ನಲ್ಲಿ ಭವ್ಯಾ ಮತ್ತು ವಿಶಾಖ ಜೋಡಿ ಮೊದಲ ಗೇಮ್ ಸೋತರೂ ಚೇತರಿಸಿಕೊಂಡು 12–15, 15–11, 15–12 ರಿಂದೆ ಫ್ರಾನ್ಸ್‌ನ ಥಿಬಾಲ್ ಗಾರ್ಡನ್– ಅಘಾಥೆ ಕೆವಾಸ್ ಜೋಡಿಯನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿತು.
ಮಹಿಳೆಯರ ಡಬಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ವೆನ್ನಲ ಕೆ– ರೆಶಿಕಾ ಯು ಜೋಡಿ 16–14, 12–15, 8–15 ರಲ್ಲಿ ಸಲ್ಸಬಿಲಾ ಔಲಿಯಾ– ಜೆನಿಯಾ ಸಿಟುಮೊರಾಂಗ್ ಜೋಡಿಗೆ ಮಣಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.