ADVERTISEMENT

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಟ್ರ್ಯಾಕ್‌ ನವೀಕರಣ ಕಾರ್ಯ ಚುರುಕು

ಪಿಟಿಐ
Published 11 ಆಗಸ್ಟ್ 2025, 16:13 IST
Last Updated 11 ಆಗಸ್ಟ್ 2025, 16:13 IST
ದೇವೇಂದ್ರ ಜಜಾರಿಯಾ
ದೇವೇಂದ್ರ ಜಜಾರಿಯಾ   

ನವದೆಹಲಿ: ‘ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಭರದ ಸಿದ್ಧತೆಗಳು ವೇಳಾಪಟ್ಟಿಯಂತೆ ನಡೆಯುತ್ತಿದೆ’ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಜಜಾರಿಯಾ ಸೋಮವಾರ ತಿಳಿಸಿದ್ದಾರೆ.

‌ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5 ರವರೆಗೆ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಕೂಟ ಆಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯ ಸ್ಟೇಡಿಯಂ ಮತ್ತು ಪಕ್ಕದ ತರಬೇತಿ ಸ್ಥಳದಲ್ಲಿನ ಟ್ರ್ಯಾಕ್‌ಗಳನ್ನು ನವೀಕರಿಸುವ ಕಾರ್ಯ ಚುರುಕಿನಿಂದ ಸಾಗಿದೆ.

‘ಮುಖ್ಯ ಕ್ರೀಡಾಂಗಣದ ಒಳಗೆ ಮತ್ತು ತರಬೇತಿ ಪ್ರದೇಶದೊಳಗೆ ಮಾಂಡೊ ಟ್ರ್ಯಾಕ್ ಹಾಕುವ ಕೆಲಸ ಶೇ 95ರಷ್ಟು ಮುಗಿದಿದೆ. ಬೇಸ್‌ನ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಸೆ.1ರೊಳಗೆ ಟ್ರ್ಯಾಕ್‌ ಸ್ಪರ್ಧೆಗೆ ಸಿದ್ಧವಾಗಲಿದೆ. ಅದರ ಬೆನ್ನಲ್ಲೇ ವಿಶ್ವ ಅಥ್ಲೆಟಿಕ್ಸ್ ತಜ್ಞರು ಬಂದು, ಟ್ರ್ಯಾಕ್‌ ವಿಶ್ವದರ್ಜೆಯ ಸ್ಪರ್ಧೆಗೆ ಯೋಗ್ಯವಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆ’ ಎಂದು ಮಾಹಿತಿ ನೀಡಿದ್ದಾರೆ. 

ADVERTISEMENT

‘ಕ್ರೀಡಾಪಟುಗಳ, ನೆರವು ಸಿಬ್ಬಂದಿಯ ಮತ್ತು ಅಧಿಕಾರಿಗಳ ಸಾರಿಗೆ, ಆತಿಥ್ಯ, ಲಾಜಿಸ್ಟಿಕ್ಸ್‌ನಂತಹ ಸಿದ್ಧತೆಗಳು ವೇಳಾಪಟ್ಟಿಯಂತೆ ನಡೆಯುತ್ತಿದೆ. ಈ ಚಾಂಪಿಯನ್‌ಷಿಪ್‌ ಅನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, 2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗಾಗಿ ಭಾರತದ ಬಿಡ್ ಅನ್ನು ಬಲಪಡಿಸುವುದು ನಮ್ಮ ಗುರಿ’ ಎಂದು ತಿಳಿಸಿದ್ದಾರೆ.

‘ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಇತಿಹಾಸದಲ್ಲೇ ಈ ಬಾರಿಯ ಅತಿ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 107 ದೇಶಗಳು ಪಾಲ್ಗೊಳ್ಳುವಿಕೆಯನ್ನು ಈಗಾಗಲೇ ಖಚಿತಪಡಿಸಿವೆ. ಭಾರತದ ನೂರು ಅಥ್ಲೀಟ್‌ಗಳನ್ನು ಕಣಕ್ಕೆ ಇಳಿಸುವ ಗುರಿ ಹೊಂದಿದ್ದೇವೆ’ ಎಂದು ಹೇಳಿದರು. 

2024ರಲ್ಲಿ ಜಪಾನ್‌ನ ಕೋಬೆಯಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ 103 ದೇಶಗಳಿಂದ 1073 ಪ್ಯಾರಾ ಅಥ್ಲೀಟ್‌ಗಳು ಭಾಗವಹಿಸಿದ್ದರು. ಭಾರತವನ್ನು ಪ್ರತಿನಿಧಿಸಿದ್ದ 40 ಪ್ಯಾರಾ ಅಥ್ಲೀಟ್‌ಗಳು 17 ಪದಕಗಳು (6 ಚಿನ್ನ, 5 ಬೆಳ್ಳಿ ಮತ್ತು 6 ಕಂಚು) ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.