ADVERTISEMENT

ವಿಶ್ವ ತಂಡ ಚೆಸ್‌: ಭಾರತ ಪರಾಭವ

ಪಿಟಿಐ
Published 25 ನವೆಂಬರ್ 2022, 11:00 IST
Last Updated 25 ನವೆಂಬರ್ 2022, 11:00 IST
   

ಜೆರುಸಲೇಂ: ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫಿಡೆ ವಿಶ್ವ ತಂಡ ಚೆಸ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 1–3 ರಲ್ಲಿ ಉಜ್ಬೆಕಿಸ್ತಾನ ಎದುರು ಪರಾಭವಗೊಂಡಿತು. ತಲಾ ನಾಲ್ಕು ಗೇಮ್‌ಗಳನ್ನು ಒಳಗೊಂಡ ಎರಡು ಸೆಟ್‌ಗಳ ಸೆಮಿಫೈನಲ್‌ನ ಮೊದಲ ಸೆಟ್‌ 2–2 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. ಎರಡನೇ ಸೆಟ್‌ನಲ್ಲಿ ಉಜ್ಬೆಕಿಸ್ತಾನ 2.5–1.5 ರಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿತು.

ಉಜ್ಬೆಕಿಸ್ತಾನ ಪ್ರಶಸ್ತಿಗಾಗಿ ಚೀನಾ ತಂಡದ ಸವಾಲು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಚೀನಾ ತಂಡ ಸ್ಪೇನ್‌ ವಿರುದ್ಧ ಗೆದ್ದಿತು. ಭಾರತ ತಂಡದವರು ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಪೈಪೋಟಿ ನಡೆಸುವರು.

ADVERTISEMENT

ಉಜ್ಬೆಕಿಸ್ತಾನ ಎದುರಿನ ಮೊದಲ ಸೆಟ್‌ನ ಗೇಮ್‌ನಲ್ಲಿ ಎಸ್‌.ಎಲ್‌.ನಾರಾಯಣನ್‌ ಅವರು ಶಂಸುದೀನ್ ವೊಖಿದೊವ್‌ ವಿರುದ್ಧ ಗೆದ್ದರು. ಆದರೆ ಎಸ್‌.ಪಿ.ಸೇತುರಾಮನ್‌, ಎದುರಾಳಿ ತಂಡದ ಜಾಖೊಂಗಿರ್‌ ವೊಖಿದೊವ್‌ ಕೈಯಲ್ಲಿ ಸೋತರು. ವಿದಿತ್‌ ಸಂತೋಷ್‌ ಗುಜರಾತಿ– ನೊದಿರ್ಬೆಕ್‌ ಯಾಕುಬೊವ್‌ ಹಾಗೂ ನಿಹಾಲ್‌ ಸರಿನ್– ಜಾಖೊವಿರ್‌ ಸಿಂದರೊವ್‌ ನಡುವಣ ಪಂದ್ಯ ಡ್ರಾದಲ್ಲಿ ಕೊನೆಗೊಂಡವು. ಇದರಿಂದ ಉಭಯ ತಂಡಗಳು 2–2 ರಲ್ಲಿ ಸಮಬಲ ಸಾಧಿಸಿದವು.

ಎರಡನೇ ಸೆಟ್‌ನ ಗೇಮ್‌ಗಳಲ್ಲಿ ಗುಜರಾತಿ ಹಾಗೂ ಸರಿನ್‌ ಅವರು ಕ್ರಮವಾಗಿ ಯಾಕುಬೊವ್‌ ಮತ್ತು ಸಿಂದರೊವ್‌ ಎದುರು ಸೋತರು. ನಾರಾಯಣನ್ 44 ನಡೆಗಳಲ್ಲಿ ವೊಖಿದೊವ್‌ ವಿರುದ್ಧ ಗೆದ್ದರು. ಆದರೆ ನಾಲ್ಕನೇ ಬೋರ್ಡ್‌ನಲ್ಲಿ ಆಡಿದ ಶಶಿಕಿರಣ್‌ ಎದುರಾಳಿ ಜತೆ ಡ್ರಾ ಮಾಡಿಕೊಂಡರು. ಉಜ್ಬೆಕಿಸ್ತಾನ 2.5–1.5 ಪಾಯಿಂಟ್ಸ್‌ಗಳಿಂದ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.