ಬಟುಮಿ (ಜಾರ್ಜಿಯಾ): ಗ್ರ್ಯಾಂಡ್‌ಮಾಸ್ಟರ್ ಆಗಲು ಕಾಯುತ್ತಿರುವ ಅಂತರರಾಷ್ಟ್ರೀಯ ಮಾಸ್ಟರ್ ದಿವ್ಯಾ ದೇಶಮುಖ್ ಅವರು ಗುರುವಾರ ಇಲ್ಲಿ ನಡೆದ ಫಿಡೆ ವಿಶ್ವ ಮಹಿಳಾ ಚೆಸ್ ಕಪ್ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್‌ನ ರಿಟರ್ನ್ ಪಂದ್ಯದಲ್ಲಿ ಚೀನಾದ ಜುನೆರ್ ಝು ಅವರಿಗೆ ಸೋತರು.
ಪ್ರತಿಷ್ಠಿತ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆಯುವ ಗುರಿ ಹೊಂದಿರುವ ಭಾರತದ ಆಟಗಾರ್ತಿಗೆ ಈ ಸೋಲು ಕೊಂಚ ಹಿನ್ನಡೆಯಾಯಿತು. ಚೀನಾದ ಆಟಗಾರ್ತಿ ವಿರುದ್ಧ ಮೊದಲ ಗೆದ್ದಿರುವ ದಿವ್ಯಾ ಅವರು ನಿರ್ಣಾಯಕ ಫಲಿತಾಂಶಕ್ಕಾಗಿ ಟೈಬ್ರೇಕರ್ ಆಡಬೇಕಿದೆ.
ಭಾರತದ ಉಳಿದ ಮೂವರು ಆಟಗಾರ್ತಿಯರೂ ತಮ್ಮ ತಮ್ಮ ಎದುರಾಳಿಗಳೊಂದಿಗೆ ಡ್ರಾ ಸಾಧಿಸಿದ್ದು, ಫಲಿತಾಂಶಕ್ಕಾಗಿ ಟೈಬ್ರೇಕರ್ ಆಡಲಿದ್ದಾರೆ.
ಕೋನೆರು ಹಂಪಿ ಅವರು ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ (ಸ್ವಿಟ್ಜರ್ಲೆಂಡ್) ವಿರುದ್ಧ ಮತ್ತೊಂದು ಡ್ರಾ ಸಾಧಿಸಿದರು. ಡಿ. ಹಾರಿಕಾ ಅವರು ರಷ್ಯನ್ ಆಟಗಾರ್ತಿ ಕ್ಯಾಥರಿನಾ ಲಾಗ್ನೊ ಜೊತೆ ಅಂಕ ಹಂಚಿಕೊಂಡರು. ಆರ್. ವೈಶಾಲಿ ಅವರು ಅವರು ಕಜಕಸ್ತಾನದ ಮೆರಯುರ್ಟ್ ಕಮಲಿದೆನೋವಾ ಜೊತೆ ಡ್ರಾ ಮಾಡಿಕೊಂಡರು.
ಈ ಮಧ್ಯೆ ಚೀನಾದ ಮೂವರು ಆಟಗಾರ್ತಿಯರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.