ADVERTISEMENT

Asian Games | ಅರುಣಾಚಲ ಆಟಗಾರ್ತಿಯರಿಗೆ ಯಶಸ್ಸಿನ ಅರ್ಪಣೆ: ರೋಶಿಬಿನಾ

ವುಶು ಫೈನಲ್‌ಗೆ ರೋಶಿಬಿನಾ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 23:30 IST
Last Updated 27 ಸೆಪ್ಟೆಂಬರ್ 2023, 23:30 IST
ನವೊರೆಮ್ ರೊಶಿಬಿನಾ ದೇವಿ
ಪಿಟಿಐ ಚಿತ್ರ
ನವೊರೆಮ್ ರೊಶಿಬಿನಾ ದೇವಿ ಪಿಟಿಐ ಚಿತ್ರ   

ಹಾಂಗ್‌ಝೌ: ಪ್ರತಿಭಾನ್ವಿತೆ ರೋಶಿಬಿನಾ ದೇವಿ ಅವರು ಮಹಿಳೆಯರ ವುಶು 60 ಕೆ.ಜಿ. ಸ್ಪರ್ಧೆಯಲ್ಲಿ ಬುಧವಾರ ವಿಯೆಟ್ನಾಮಿನ ಥಿ ತು ಎನ್‌ಗುಯೆನ್ ಅವರನ್ನು ಮಣಿಸಿ ಫೈನಲ್ ತಲುಪಿದರು. ಇದರಿಂದ ಅವರಿಗೆ ಚಿನ್ನ ಅಥವಾ ರಜತ ಖಚಿತವಾಯಿತು.

ಎದುರಾಳಿಗೆ ಒಂದಿನಿತೂ ಅವಕಾಶ ನೀಡದ ರೋಶಿಬಿನಾ ಅವರು 2–0ಯಿಂದ ಸೆಣಸಾಟ ಗೆದ್ದರು. ಅವರು ಗುರುವಾರ ನಡೆಯಲಿರುವ ಚಿನ್ನದ ಪದಕದ ಸ್ಪರ್ಧೆಯಲ್ಲಿ ಚೀನಾದ ವು ಕ್ಸಿಯಾವೊವಿ ಅವರನ್ನು ಎದುರಿಸಲಿದ್ದಾರೆ.

ವುಶು ಫೈನಲ್ ತಲುಪಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ರೋಶಿಬಿನಾ ಅವರದಾಯಿತು. 2010ರ ಗುವಾಂಗ್‌ಝೌ ಗೇಮ್ಸ್‌ನಲ್ಲಿ ಸಂಧ್ಯಾರಾಣಿ ದೇವಿ ಮೊದಲಿಗರು. ಅವರು ಬೆಳ್ಳಿ ಗೆದ್ದಿದ್ದರು. ಆದರೆ ರೋಶಿಬಿನಾ ದೇವಿ 2018ರ ಕ್ರೀಡೆಗಳಲ್ಲಿ ಇದೇ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ADVERTISEMENT

ಆದರೆ ತಮ್ಮ ಫೈನಲ್ ಪ್ರವೇಶದ ಸಾಧನೆಯನ್ನು ರೋಶಿಬಿನಾ ಅವರು ಅರುಣಾಚಲ ಪ್ರದೇಶದ ಮೂವರು ವುಶು ಆಟಗಾರ್ತಿಯರಿಗೆ ಸಮರ್ಪಿಸಿದ್ದಾರೆ. ಚೀನಾ ವೀಸಾ ಸಿಗದೇ ಈ ಆಟಗಾರ್ತಿಯರು ಭಾಗವಹಿಸಲು ಆಗಿರಲಿಲ್ಲ.

‘ಇಲ್ಲಿಗೆ ಬರಲಾಗದ ನನ್ನ ಮೂವರು ಸ್ನೇಹಿತೆಯರಿಗಾಗಿ ನಾನು (ಚಿನ್ನ) ಗೆಲ್ಲಬಯಸಿದ್ದೇನೆ. ಒನಿಲು ತೇಗಾ ನನ್ನ ಜೊತೆಗೇ ಇರುತ್ತಿದ್ದರು.  ನಾವೆಲ್ಲ ಜೊತೆೆಗೆ ತರಬೇತಿ ಪಡೆಯುತ್ತಿದ್ದು, ಒಳ್ಳೆಯ ಸ್ನೇಹಿತೆಯರು. ಇಂಥ ದೊಡ್ಡ ಕ್ರೀಡಾಕೂಟದಲ್ಲಿ ಆತ್ಮೀಯರಿದ್ದರೆ ಉಲ್ಲಾಸವಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.