ADVERTISEMENT

ತವರಿಗೆ ಮರಳಿದ ಯಶ್‌

ಪಿಟಿಐ
Published 26 ಮೇ 2020, 20:30 IST
Last Updated 26 ಮೇ 2020, 20:30 IST
ಯಶ್‌ ಫಡ್ತೆ –ಟ್ವಿಟರ್‌ ಚಿತ್ರ 
ಯಶ್‌ ಫಡ್ತೆ –ಟ್ವಿಟರ್‌ ಚಿತ್ರ    

ಪಣಜಿ: ಲಾಕ್‌ಡೌನ್‌ ಕಾರಣ ಇಂಗ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದ ಭಾರತದ ಯುವ ಸ್ಕ್ವಾಷ್‌ ಆಟಗಾರ ಯಶ್‌ ಫಡ್ತೆ ಅವರು ಸೋಮವಾರ ತಮ್ಮ ತವರೂರು ಪಣಜಿಗೆ ಮರಳಿದ್ದಾರೆ.

ಸೋಲಿಹಲ್‌ ಆರ್ಡೆನ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುವ ಹಾಗೂ ಕೆಲ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಾರ್ಚ್‌ ಏಳರಂದು ಇಂಗ್ಲೆಂಡ್‌ಗೆ ತೆರಳಿದ್ದ ಯಶ್‌, ಏಪ್ರಿಲ್‌ 29ರಂದು ಭಾರತಕ್ಕೆ ಹಿಂದಿರುಗಬೇಕಿತ್ತು.

‘ನಿಗದಿಯಂತೆ ಮಾರ್ಚ್‌ 7ರಿಂದ ಸೋಲಿಹಲ್‌ ಕ್ಲಬ್‌ನಲ್ಲಿ ತರಬೇತಿ ಆರಂಭಿಸಿದ್ದೆ. ಎರಡು ವಾರಗಳ ಕಾಲ ಎಲ್ಲವೂ ಸುಸೂತ್ರವಾಗಿ ನಡೆಯಿತು. ಕೊರೊನಾ ಬಿಕ್ಕಟ್ಟು ಉಲ್ಬಣಿಸಿದ ಕಾರಣ ಮಾರ್ಚ್‌ 22ರಂದು ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಇದರ ಬೆನ್ನಲ್ಲೇ ಭಾರತ ಮತ್ತು ಇಂಗ್ಲೆಂಡ್‌ ಸರ್ಕಾರಗಳು ಅಂತರರಾಷ್ಟ್ರೀಯ ವಿಮಾನಯಾನ ರದ್ದು ಮಾಡಿದವು. ಹೀಗಾಗಿ ತವರಿಗೆ ಹಿಂದಿರುಗಲು ಆಗಲಿಲ್ಲ. ಅಲ್ಲಿದ್ದಷ್ಟು ಕಾಲ ಬಾಡಿಗೆ ಕೊಠಡಿಯಲ್ಲಿ ಆತಂಕದಿಂದಲೇ ದಿನ ದೂಡುವಂತಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಪ್ರತಿನಿತ್ಯ ಧ್ಯಾನ ಮತ್ತು ಯೋಗಾಭ್ಯಾಸ ಮಾಡುತ್ತಿದ್ದೆ. ಅದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಯಿತು. ಮನೆಯವರು ನಿತ್ಯವೂ ವಿಡಿಯೊ ಕರೆಗಳನ್ನು ಮಾಡಿ ಧೈರ್ಯ ತುಂಬುತ್ತಿದ್ದರು’ ಎಂದಿದ್ದಾರೆ.

‘ಇದೇ ತಿಂಗಳ 23ರಂದು ಇಂಗ್ಲೆಂಡ್‌ನಿಂದ ಹೊರಟು ಮರುದಿನ ಮುಂಬೈಗೆ ಬಂದೆ. ಅಲ್ಲಿಂದ ಬಸ್‌ ಮೂಲಕ ಗೋವಾ ತಲುಪಿದೆ. ಅದೊಂದು ಕೆಟ್ಟ ಅನುಭವ. ಬಸ್‌ನಲ್ಲಿ ಅಂತರ ಕಾಯ್ದುಕೊಳ್ಳುವುದು ದೂರದ ಮಾತಾಗಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

18 ವರ್ಷ ವಯಸ್ಸಿನ ಯಶ್‌, ಈ ವರ್ಷದ ಫೆಬ್ರುವರಿಯಲ್ಲಿ ನಡೆದಿದ್ದ ಫ್ರೆಂಚ್‌ ಓಪನ್‌ ಜೂನಿಯರ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.