
ಬಹರೇನ್: ಭಾರತದ ಸ್ಪರ್ಧಿಗಳು ಗುರುವಾರ ಯೂತ್ ಏಷ್ಯನ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿದರು. ಬಾಕ್ಸಿಂಗ್‌ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಬೀಚ್ ಕುಸ್ತಿಯಲ್ಲಿ ಮೂರು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದು ಪಾರಮ್ಯ ಮೆರೆದರು.
12 ಚಿನ್ನ, 15 ಬೆಳ್ಳಿ ಮತ್ತು 14 ಕಂಚು ಸೇರಿದಂತೆ 41 ಪದಕ ಗೆದ್ದ ಭಾರತ ಪದಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಚೀನಾ (136 ಪದಕ) ಅಗ್ರಸ್ಥಾನದಲ್ಲಿದೆ.
ಮಹಿಳಾ ಬಾಕ್ಸರ್‌ಗಳಾದ ಖುಷಿ ಚಂದ್, ಅಹಾನಾ ಶರ್ಮಾ ಮತ್ತು ಚಂದ್ರಿಕಾ ಪೂಜಾರಿ ಅವರು ಚಿನ್ನಕ್ಕೆ ಕೊರಳೊಡ್ಡಿದರು. ಲ್ಯಾಂಚೆನ್ಬಾ ಸಿಂಗ್ ಬೆಳ್ಳಿ ಪದಕವನ್ನು ಜಯಿಸಿದರು.
46 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಖುಷಿ 4–1ರಿಂದ ಚೀನಾದ ಲುವೊ ಜಿನ್ಸಿಯು ವಿರುದ್ಧ ಗೆಲುವು ಸಾಧಿಸಿದರು. ಚಂದ್ರಿಕಾ 54 ಕೆಜಿ ವಿಭಾಗದಲ್ಲಿ 5–0ಯಿಂದ ಉಜ್ಬೇಕಿಸ್ತಾನದ ಮುಹಮ್ಮದೋವಾ ಕುಮ್ರಿನಿಸೊ ಅವರನ್ನು ಮಣಿಸಿದರು. ಅಹಾನಾ 50 ಕೆ.ಜಿ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಆರ್‌ಎಸ್‌ಸಿ ಆಧಾರದಲ್ಲಿ ಮಾ ಜೊಂಗ್ ಹಯಾಂಗ್ ವಿರುದ್ಧ ಜಯ ಗಳಿಸಿದರು.
ಹರ್ನೂರ್ ಕೌರ್ (66 ಕೆಜಿ) ಮತ್ತು ಅಂಶಿಕಾ (80+ ಕೆಜಿ) ಅವರೂ ತಮ್ಮ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಚಿನ್ನದ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ.
ಪುರುಷರ 50 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಲ್ಯಾಂಚೆನ್ಬಾ (50 ಕೆಜಿ) ಅವರು ಕಜಕಿಸ್ತಾನದ ನೂರ್ಮಖಾನ್ ಜುಮಾಗಲಿ ವಿರುದ್ಧ ಪರಾಭವಗೊಂಡರು.
ಬೀಚ್ ಕುಸ್ತಿಯಲ್ಲಿ ಐದು ಪದಕ
ಬೀಚ್ ಕುಸ್ತಿಯಲ್ಲಿ ಅರ್ಜುನ್ ರುಹಿಲ್ (ಬಾಲಕರ 90 ಕೆಜಿ), ಸಾನಿ ಸುಭಾಷ್ ಫುಲ್ಮಾಲಿ (ಬಾಲಕರ 60 ಕೆಜಿ), ಅಂಜಲಿ (ಬಾಲಕಿಯರ 55 ಕೆಜಿ) ಚಿನ್ನದ ಸಾಧನೆ ಮಾಡಿದರು. ಸುಜಯ್ ನಾಗನಾಥ್ ತನ್ಪುರೆ (70 ಕೆ.ಜಿ) ಮತ್ತು ರವೀಂದರ್ (80 ಕೆ.ಜಿ) ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.