ADVERTISEMENT

ಶರವೇಗಿ ಜಾಫರ್

ಪ್ರಸನ್ನಕುಮಾರ ಹಿರೇಮಠ
Published 26 ನವೆಂಬರ್ 2017, 19:30 IST
Last Updated 26 ನವೆಂಬರ್ 2017, 19:30 IST
ಜಾಫರ್‌ ಬೈಕ್ ರೇಸಿಂಗ್ ಮಾಡಿದಾಗ (ಒಳಚಿತ್ರದಲ್ಲಿ ಜಾಫರ್)
ಜಾಫರ್‌ ಬೈಕ್ ರೇಸಿಂಗ್ ಮಾಡಿದಾಗ (ಒಳಚಿತ್ರದಲ್ಲಿ ಜಾಫರ್)   

ಟಿವಿಯಲ್ಲಿ ಬರುತ್ತಿದ್ದ ರೇಸ್‌ಗಳು ಈ ಹುಡುಗನಿಗೆ ರೋಮಾಂಚನ. ದಿನಗಟ್ಟಲೆ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಮೈಮರೆಯುತ್ತಿದ್ದ ತುಮಕೂರಿನ ಜಾಫರ್‌ ಈಗ ರೇಸ್‌ ಅಂಗಳಕ್ಕೆ ಇಳಿದರೆ ನೂರಾರು ಜನ ಚಪ್ಪಾಳೆ ತಟ್ಟಿ, ಕೇಕೆ ಹಾಕುತ್ತಾರೆ.

ದಿನಕಳೆದಂತೆ ರೇಸ್‌ನಲ್ಲಿಯೇ ಮುಳುಗಿದ ಆ ಹುಡುಗ ಬೈಕ್ ಓಡಿಸಬೇಕು ಎಂದರೂ ಈತನ ಬಳಿ ಒಂದು ಬೈಕ್ ಇರಲಿಲ್ಲ. ಆದರೆ, ಛಲ ಬಿಡಲಿಲ್ಲ. ಉತ್ಸಾಹ ಕುಗ್ಗಲಿಲ್ಲ. ಒಂದು ದಿನ ಬೇರೆಯವರ ಬೈಕ್ ಹತ್ತಿ ಸರ್ಕಸ್ ಮಾಡಿಯೇ ಬಿಟ್ಟ. ಇದು ಆತನ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿಬಿಟ್ಟಿತ್ತು.

ಅಂದಿನಿಂದ ರೇಸ್ ಹವ್ಯಾಸ ಬೆಳೆಸಿಕೊಂಡ ಆ ಯುವಕ ಈಗ ನಾಡಿನ ರೇಸ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಒತ್ತಿದ್ದಾರೆ. ಇಂತಹ ವಿಶಿಷ್ಟ ಮತ್ತು ಬಡತನದಲ್ಲಿ ಅರಳಿತ ರೇಸ್ ಪ್ರತಿಭೆ ತುಮಕೂರಿನ ಜಾಫರ್.

ADVERTISEMENT

ಇವರು ಮೂಲತಃ ತುಮಕೂರಿನ ಬಾರ್‌ಲೈನ್‌ ನಿವಾಸಿ. ಕಳೆದ 5 ವರ್ಷದಿಂದ ಬೈಕ್‌ ರೇಸ್‌ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲು ಬೇರೆಯವರು ಗಾಡಿ ಓಡಿಸುವುದನ್ನು ನೋಡಿ ತಾನು ಬೈಕ್‌ ಓಡಿಸಬೇಕು ಎಂಬ ಹಂಬಲ ಹೊಂದಿದ್ದರು. ಆ ಪ್ರಕಾರ ಬೈಕ್‌ ಓಡಿಸುವುದನ್ನು ಕಲಿತಿದ್ದಾರೆ. ಇವರಿಗೆ ಮೊದಲು ತುಮಕೂರಿನ ಪವರ್‌ ರ‍್ಯಾಕ್‌ ಫಜಲ್‌–ಉಲ್ಲಾ ಅವರು ನನಗೆ ಮೊದಲು ಬೈಕ್‌ ತಯಾರಿಸಿಕೊಟ್ಟಿದ್ದರು. ತರಬೇತಿ ಇಲ್ಲದೆ ಜಾಫರ್‌ ಅವರು ಟಿವಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಬೈಕ್‌ ರೇಸ್‌ಗಳನ್ನು ನೋಡುತ್ತಾ ಬೈಕ್‌ ಓಡಿಸುವುದನ್ನು ಕಲಿತಿದ್ದಾರೆ.

ಸಮಿವುಲ್ಲಾ , ದಿಲ್‌ಶಾದ್‌ ದಂಪತಿ ಮಗನಾಗಿರುವ ಜಾಫರ್‌ಗೆ ಇಮ್ರಾನ್‌ ಖಾನ್‌ ಎಂಬ ಸಹೋದರ ಇದ್ದಾರೆ. ಅಣ್ಣ ಶೋರೂಂ ಒಂದರಲ್ಲಿ ಸರ್ವೀಸ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಾರೆ. ಜಾಫರ್‌ ತುಮಕೂರಿನ ಅಂತರಸನಹಳ್ಳಿಯಲ್ಲಿ ಫಿಕ್‌ ಟೂಲ್‌ ಆ್ಯಂಡ್‌ ಫೋರ್‌ಜಿ ಲಿಮಿಟೆಡ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ.

15 ವರ್ಷದವನಿದ್ದಾಗಿನಿಂದ ಬೈಕ್‌ ರೇಸ್‌ ಹವ್ಯಾಸ ಬೆಳೆಸಿಕೊಂಡಿದ್ದಾನೆ. ನಗರದ ಹೊವಲಯದಲ್ಲಿರುವ ಗೂಳೂರು ಕೆರೆಯ ಪಕ್ಕದಲ್ಲಿರುವ ಜಾಗದಲ್ಲಿ ವಾರಕ್ಕೊಮ್ಮೆ ಪ್ರ್ಯಾಕ್ಟಿಸ್‌ ಮಾಡುತ್ತಾನೆ. ರಜಾದಿನ ಭಾನುವಾರ ಬಂದರೆ ಜಾಫರ್‌ಗೆ ಖುಷಿ.  ದಿನಪೂರ್ತಿ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ.

ಬೆಂಗಳೂರು, ನಾಗಮಂಗಲ, ಹಾಸನ, ಚಿಕ್ಕಮಗಳೂರು, ಚನ್ನರಾಯನಪಟ್ಟಣ, ತುಮಕೂರು ಸೇರಿದಂತೆ ವಿವಿಧ ಕಡೆ ನಡೆದ ಸ್ಪರ್ಧೆಗಳಲ್ಲಿ ಪ್ರತಿಭೆ ಮೆರೆದು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ತುಮಕೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ರೇಸ್‌ನಲ್ಲಿ ಬೇಸ್ಟ್‌ರೈಡರ್‌ ಆಗಿ ಹೊರಹೊಮ್ಮಿದ್ದರು.

‘ರಸ್ತೆಗಳ ಯುವಕರು ವೇಗವಾಗಿ ವಾಹನ ಓಡಿಸುವುದು, ವ್ಹೀಲಿಂಗ್ ಮಾಡುವುದನ್ನು ಸಂಚಾರ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಇಷ್ಟಪಡುವುದಿಲ್ಲ. ಆದರೆ, ನಾನು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಮೆರೆಯುವುದನ್ನು ಕಂಡು ಸಂಭ್ರಮಿಸುತ್ತಾರೆ. ನಾವು ಸಾಗುವ ದಾರಿ ಸರಿಯಾಗಿದ್ದರೆ ಗುರುತಿಸಿ ಪ್ರೋತ್ಸಾಹಿಸುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ’ ಎಂದು ಜಾಫರ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

‘ನನ್ನ ಹತ್ತಿರ ಹೀರೊ ಕಂಪೆನಿಯ ಸೆಕೆಂಡ್‌ ಹ್ಯಾಂಡ್‌ ಇಂಪಲ್ಸ್‌ ಬೈಕ್‌ ಈಗ ನನ್ನ ಬಳಿ ಇದು. ಹೊಸ ಬೈಕ್‌ ತೆಗೆದುಕೊಳ್ಳಬೇಕು ಎಂಬ ಆಸೆ ಇದೆ. ಅಷ್ಟೊಂದು ದುಡ್ಡು ಇಲ್ಲ. ಹೀಗಾಗಿ, ಈಗ ನಾನು ದುಡಿಯುತ್ತಿರುವ ಹಣ ನನ್ನ ಜೀವನಕ್ಕೆ ಹಾಗೂ ನನ್ನ ಈ ಬೈಕ್‌ ರೇಸ್‌ಗೆ ಸಾಕುಗುತ್ತದೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಮಹಾದಾಸೆ ಇದೆ’ ಎನ್ನುತ್ತಾರೆ ಜಾಫರ್‌.

(ಇಂಡಿಯನ್‌ ಓಪನ್‌ ಪ್ರಶಸ್ತಿ ಪಡೆದ ಸತೀಶ್‌, ಜಾಫರ್‌ ಸದ್ದು, ಎಂ.ಡಿ.ಜಹೀರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.