ADVERTISEMENT

ಸಾಮಾಜಿಕ ‘ಜಾಲ’ತಾಣದಲ್ಲಿ ಕ್ರೀಡಾಪಟುಗಳು

ಸಾಮಾಜಿಕ ಜಾಲತಾಣಗಳ ಭರಾಟೆ, ತಲ್ಲಣ, ವಿವಾದಗಳ ಸಿಕ್ಕಿನಲ್ಲಿ ತಾರೆಗಳು

ಪೃಥ್ವಿರಾಜ್ ಎಂ ಎಚ್
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (ಮಧ್ಯ) ಹಾರ್ದಿಕ್ ಪಾಂಡ್ಯ (ಎಡ) ಮತ್ತು ಶಿಖರ್ ಧವನ್ ಅವರು ಸೆಲ್ಪಿ ಕ್ಲಿಕ್ಕಿಸಿಕೊಂಡ ಕ್ಷಣ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (ಮಧ್ಯ) ಹಾರ್ದಿಕ್ ಪಾಂಡ್ಯ (ಎಡ) ಮತ್ತು ಶಿಖರ್ ಧವನ್ ಅವರು ಸೆಲ್ಪಿ ಕ್ಲಿಕ್ಕಿಸಿಕೊಂಡ ಕ್ಷಣ.   

ಸಾಮಾಜಿಕ ಜಾಲತಾಣಗಳ ಆಗಮನದಿಂದ ಜನಪ್ರಿಯ ತಾರೆಗಳ ವರ್ಚಸ್ಸು ಗಗನಮುಖಿಯಾಗುತ್ತಿದೆ. ರಾಜಕೀಯ, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿನ ‘ವೈರಲ್‌’ ಎಂಬ ಪದ ಸಂಚಲನ ಮೂಡಿಸಿದರೆ, ವಿವಾದಗಳು ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿವೆ.

ಸೋಶಿಯಲ್‌ ಮೀಡಿಯಾ ಜನಪ್ರಿಯ ವ್ಯಕ್ತಿಗಳ ಪ್ರಚಾರಕ್ಕೆ ಜನ್ಮತಾಳಿದೆಯೋ ಎಂಬ ಅನುಮಾನದ ನಡುವೆಯೂ ಸೆಲೆಬ್ರಿಟಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ! ಕೆಲವರು ಎಡವಟ್ಟುಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಹಿಂಬಾಲಕರುಗಳಿಂದ ಟೀಕೆ, ಮುಖಭಂಗಕ್ಕೂ ಗುರಿಯಾಗುತ್ತಿದ್ದಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಳ ಜೊತೆ ನೇರವಾಗಿ ಸಂವಹನ ನಡೆಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಜಾಲತಾಣಗಳು! ಹಲವು ವೈರುಧ್ಯಗಳ ನಡುವೆಯೂ ಸೋಶಿಯಲ್‌ ಮೀಡಿಯಾಗಳಲ್ಲಿ ಕ್ರಿಕೆಟ್ ರನ್‌ಗಳಂತೆ ಹರಿಯುವ ಮಾಹಿತಿಗೆ ವಿಶ್ವಾಸಾರ್ಹತೆಯ ಪ್ರಶ್ನೆ ಎದುರಾಗಿದೆ. ಆದಾಗ್ಯೂ ವಿಶ್ವದೆಲ್ಲೆಡೆ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು ಸಿನಿಮಾ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ವ್ಯಕ್ತಿಗಳಿಗಿಂತಲೂ ಕ್ರೀಡಾತಾರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್‌ ಇರುವುದು ವಿಶೇಷ.

ADVERTISEMENT

ಯುರೋಪ್‌ನಲ್ಲಿ ಫುಟ್‌ಬಾಲ್‌ ಆಟಗಾರರು,  ಭಾರತದಲ್ಲಿ ಕ್ರಿಕೆಟ್ ತಾರೆಗಳು ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ. ಇವರನ್ನು ಮಾಧ್ಯಮಗಳು ಫಾಲೋ ಮಾಡುವುದರಿಂದ ಸುದ್ದಿಯ ಬಾಯಿಗೆ ಬಹುಬೇಗನೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ವೇದಿಕೆಯಲ್ಲಿ ಪ್ರಚಾರ ಮಾತ್ರವಲ್ಲದೇ ಹಾಸ್ಯ, ವಿಡಂಬನೆ, ಸಾಮಾಜಿಕ ಮತ್ತು ಆರ್ಥಿಕ ಚರ್ಚೆಗಳು ನಡೆಯುತ್ತವೆ. ಕೆಲವೊಮ್ಮೆ ಸಂವಾದಗಳು ಅತಿರೇಕಕ್ಕೆ ಹೋಗಿ ಕೆಲವರು ಇವುಗಳಿಂದ ದೂರವಾಗಿದ್ದಾರೆ. ಕ್ರಿಕೆಟಿಗ ಗೌತಮ್‌ ಗಂಭೀರ್ ಯೋಧರ ಚರ್ಚೆಯಲ್ಲಿ ಭಾಗವಹಿಸಿ, ಹಿಂಬಾಲಕರ ಟೀಕೆಗಳಿಗೆ ಬೇಸತ್ತು ಇಲ್ಲಿಂದ ದೂರವಾಗಿದ್ದರು. ಇತ್ತೀಚಿನ ದಿನಗಳಲ್ಲಿ ಟ್ವಿಟರ್‌ನಲ್ಲಿ ಇದ್ದರೂ ಹೆಚ್ಚಾಗಿ ಕಾಣಸಿಗುತ್ತಿಲ್ಲ!

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರ ಅಂಬೇಡ್ಕರ್ ಕುರಿತಾದ ಒಂದು ಟ್ವೀಟ್ ಅವರ ಮೇಲೆ ಎಫ್‌ಐಆರ್ ದಾಖಲಾಗುವಂತೆ ಮಾಡಿದೆ. ಆದರೆ ಈ ಟ್ವೀಟ್ ಪಾಂಡ್ಯ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರಕಟವಾಗಿಲ್ಲ ಎಂಬ ವರದಿಗಳು ಇವೆ. ಒಟ್ಟಿನಲ್ಲಿ ಆಟಗಾರರ ಹೆಸರಲ್ಲಿ ಸಾವಿರಾರು ನಕಲಿ ಖಾತೆಗಳು ಸೃಷ್ಟಿಯಾಗಿ ಆತಂಕ ಉಂಟುಮಾಡುತ್ತಿರುವುದು ಸುಳ್ಳಲ್ಲ!

ವೀರೇಂದ್ರ ಸೆಹ್ವಾಗ್‌ ಮಾತ್ರ ಪದೇ ಪದೇ ಸುದ್ದಿಯಲ್ಲಿರುವ ಸಾಮಾಜಿಕ ಜಾಲತಾಣ ಬಳಕೆದಾರ. ಹಿರಿಯ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್, ಅನಿಲ್‌ ಕುಂಬ್ಳೆ, ಸೌರವ್‌ ಗಂಗೂಲಿ, ರವಿಶಾಸ್ತ್ರಿ ಅವರ ಕಾಲೆಳೆಯುವುದು ಎಂದರೆ ನನಗೆ ಅತೀವ ಇಷ್ಟ ಎಂದು ವೀರೂ ಬರೆದುಕೊಂಡಿದ್ದರು. ಸೆಹ್ವಾಗ್ ಅವರ ‘ತ್ರಿಶತಕ ಹೊಡೆದದ್ದು ನಾನಲ್ಲ, ನನ್ನ ಬ್ಯಾಟ್‌’ ಎಂಬ ಟ್ವೀಟ್‌ ದೇಶದೆಲ್ಲೆಡೆ ಸದ್ದು ಮಾಡಿತ್ತು. ಯುವರಾಜ್‌ ಸಿಂಗ್,  ಕೊಹ್ಲಿ ಮತ್ತು ರೈನಾ ಅವರನ್ನು ಕಿಚಾಯಿಸಿದರೆ,   ಮಹೇಂದ್ರ ಸಿಂಗ್ ದೋನಿ, ರವೀಂದ್ರ ಜಡೇಜ ಅವರನ್ನು ಕಾಡುವುದರಲ್ಲಿ ಸಿದ್ದಹಸ್ತರು. ದೋನಿ, ಜಡೇಜ‌ಗೆ ‘ಸರ್’ ಎಂಬ ಬಿರುದನ್ನೇ ನೀಡಿದ್ದಾರೆ.

ವೇಗದ ಬೌಲರ್ ಮೊಹಮ್ಮದ್ ಶಮಿ, ಪತ್ನಿಯ ಉಡುಪಿನ ವಿಚಾರ, ಇತ್ತೀಚಿನ ಕಿರುಕುಳ ಹಾಗೂ ಮ್ಯಾಚ್‌ ಫಿಕ್ಸಿಂಗ್ ಆರೋಪ ಪ್ರಕರಣದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮೊಹಮ್ಮದ್ ಕೈಫ್ ಅವರು ಮಗನೊಂದಿಗೆ ಚೆಸ್‌ ಆಡಿದ್ದಕ್ಕೂ,  ತ್ರಿವಳಿ ತಲಾಖ್‌ ನೀಷೇಧವನ್ನು ಸ್ವಾಗತಿಸಿದ್ದಕ್ಕೂ ಹಾಗೂ ಸೂರ್ಯ ನಮಸ್ಕಾರ ಮಾಡಿದ ಫೋಟೊಗಳನ್ನು ಪ್ರಕಟಿಸಿದಕ್ಕೆ ನಿಂದನೆಗಳಿಗೆ ಒಳಗಾಗಿದ್ದರು. ರನ್‌ ಹೊಳೆ ಹರಿಸುವ ವಿರಾಟ್ ಕೊಹ್ಲಿಯ ಸಾಮಾಜಿಕ ಜಾಲತಾಣಗಳಲ್ಲಿನ ವಿವಾದಗಳನ್ನು ಸಂಗ್ರಹಿಸಿ ಒಂದು ಪುಸ್ತಕವನ್ನೇ ಬರೆಯಬಹುದು. ಐಪಿಎಲ್‌ನಲ್ಲಿ ಸೋತಾಗ,  ಅನುಷ್ಕಾ ಶರ್ಮಾ ಆಂಗಳದಲ್ಲಿ ಇದ್ದಾಗ ರನ್‌ ಗಳಿಸದೇ ಪರದಾಡಿ ಔಟಾದಾಗಲೂ ವಿವಾದಕ್ಕೆ ಗುರಿಯಾಗಿದ್ದರು. ಕೊಹ್ಲಿಯ ಹೆಚ್ಚು ವಿವಾದಿತ ಟ್ವೀಟ್‌ಗಳು ಅನುಷ್ಕಾಗೆ ಸಂಬಂಧಿಸಿದ್ದಾಗಿವೆ ಎಂಬುದು ವಿಶೇಷ.

ನಕಲಿ ಖಾತೆಗಳ ಹಾವಳಿ

ಆಟಗಾರರ ಹೆಸರನ್ನು ಗೂಗಲ್ ಮಾಡಿ ನೋಡಿದರೆ ಸಾವಿರಾರು ನಕಲಿ ಖಾತೆಗಳ ಪಟ್ಟಿಯೇ ತೆರೆದುಕೊಳ್ಳುತ್ತದೆ. ಕೊಹ್ಲಿ, ದೋನಿ,  ಜಡೇಜ, ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್‌ ಅವರ ಹೆಸರಲ್ಲಿ ಸಾವಿರಾರು ನಕಲಿ ಖಾತೆಗಳು ಚಾಲ್ತಿಯಲ್ಲಿವೆ.  ಆಟಗಾರರ ಹೆಸರಿನಲ್ಲಿ ನಕಲಿ ಇಮೇಲ್ ವಿಳಾಸ ನೀಡಿ ಆಟಗಾರರ ಚಿತ್ರಗಳನ್ನು ಬಳಸಿಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಇಂತಹ ಖಾತೆಗಳಿಗೆ ಮಾನ್ಯತೆ ಇರುವುದಿಲ್ಲ. ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗಳು ಅಧಿಕೃತ ಖಾತೆಗೆ ನೀಲಿ ಬಣ್ಣದ ರೈಟ್‌ ಮಾರ್ಕಿನ ಗುರುತನ್ನು ನೀಡಿರುತ್ತವೆ.

ತಮ್ಮ ಮೆಚ್ಚಿನ ಆಟಗಾರರ ಖಾತೆಯನ್ನು ಮೊದಲು ಖಚಿತಪಡಿಸಿಕೊಂಡು ಅವರನ್ನು ಪಾಲೋ ಮಾಡಬೇಕು ಎಂದು ಸೋಶಿಯಲ್ ಮೀಡಿಯಾ ಕಂಪನಿಗಳು ಹೇಳುತ್ತವೆ. ನಕಲಿ ಖಾತೆಗಳನ್ನು ಹಿಂಬಾಲಿಸಿದರೆ ಪ್ರಮಾದಗಳಿಗೆ ಗುರಿಯಾಗಬೇಕಾಗುತ್ತದೆ.  ನಕಲಿ ಖಾತೆಗಳಲ್ಲಿರುವ ವಿವಾದಾತ್ಮಕ ಪೋಸ್ಟ್‌ ಅನ್ನು ಲೈಕ್‌ ಅಥವಾ ಶೇರ್ ಮಾಡಿದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಳಕೆದಾರರು ಎಚ್ಚರಿಕೆ ವಹಿಸುವುದು ಅಗತ್ಯ. →→v

**

ಕ್ರೀಡಾಪಟುಗಳ ಬಳಸುವ ಸಾಮಾಜಿಕ ಜಾಲತಾಣಗಳು

ಭಾರತದಲ್ಲಿ ಕ್ರಿಕೆಟ್‌ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಂತೆ ಮೇಲ್ನೋಟಕ್ಕೆ ಕಾಣುತ್ತದೆ.  ಆದರೆ ಅವುಗಳಲ್ಲಿ ಸಕ್ರಿಯರಾಗಿರುವವರ ಸಂಖ್ಯೆ ಇಪ್ಪತ್ತನ್ನೂ ದಾಟುವುದಿಲ್ಲ. ವಿರಾಟ್ ಕೊಹ್ಲಿ, ಮಹೇಂದ್ರಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್‌, ಸೌರವ್ ಗಂಗೂಲಿ, ಹರಭಜನ್‌ ಸಿಂಗ್‌,  ರವೀಂದ್ರ ಜಡೇಜ, ಹಾರ್ದಿಕ್ ‍ಪಾಂಡ್ಯ ಹೀಗೆ ಪಟ್ಟಿ ಬೆಳೆಯುತ್ತದೆ. ಇವರು ಪ್ರಮುಖವಾಗಿ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ಮತ್ತು ಜಿ+ ಬಳಕೆ ಮಾಡುತ್ತಾರೆ. ಕೊಹ್ಲಿ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರೆ, ಯುವಿ, ದೋನಿ, ಪಾಂಡ್ಯ, ರೋಹಿತ್ ಶರ್ಮಾ ಹೆಚ್ಚು ಫೇಸ್‌ಬುಕ್‌ನಲ್ಲಿ ಇರುತ್ತಾರೆ. ಇನ್ನೂ ವಿರೇಂದ್ರ ಸೆಹ್ವಾಗ್‌, ಗಂಗೂಲಿ ಟ್ವಿಟರ್ ಖಾತೆಯನ್ನು, ಇಶಾಂತ್ ಶರ್ಮಾ, ಸುರೇಶ್ ರೈನಾ  ಜಿ+ ಬಳಕೆ ಮಾಡುತ್ತಾರೆ. ದಿನವೊಂದಕ್ಕೆ ಐದಾರು ಪೋಸ್ಟ್‌ಗಳು ಇವರ ಗೋಡೆ ಮೇಲೆ ಕಾಣಸಿಗುತ್ತವೆ.

ಕೊಹ್ಲಿ ಮತ್ತು ಮಹೇಂದ್ರಸಿಂಗ್‌ ದೋನಿಗೆ  ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕೊಹ್ಲಿಗೆ ಟ್ವಿಟರ್‌ನಲ್ಲಿ 2.4 ಕೋಟಿ, ಫೇಸ್‌ಬುಕ್‌ನಲ್ಲಿ 3.7 ಕೋಟಿ, ಇನ್‌ಸ್ಟಾಗ್ರಾಂನಲ್ಲಿ 2 ಕೋಟಿ ಹಿಂಬಾಲಕರಿದ್ದಾರೆ. ದೋನಿಗೆ ಟ್ವಿಟರ್‌ನಲ್ಲಿ 70 ಲಕ್ಷ, ಫೇಸ್‌ಬುಕ್‌ನಲ್ಲಿ 2 ಕೋಟಿ ಫಾಲೋವರ್ಸ್‌ಗಳು ಇದ್ದಾರೆ. ದೋನಿಗೆ ಮಗಳು ಹುಟ್ಟಿದ ಸುದ್ದಿ ಮತ್ತು ಕೊಹ್ಲಿಯ ವಿವಾಹ ಸುದ್ದಿಯನ್ನು ಬ್ರೇಕ್ ಮಾಡಿದ್ದು ಈ ಸಾಮಾಜಿಕ ಜಾಲತಾಣಗಳೇ!

ಕ್ರಿಕೆಟ್ ಹೊರತುಪಡಿಸಿ ಹೇಳುವುದಾದರೆ ಬ್ಯಾಡ್ಮಿಂಟನ್‌ ಮತ್ತು ಟೆನಿಸ್‌ ತಾರೆಗಳು  ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಇವರ ಪ್ರಮಾಣ ಕ್ರಿಕೆಟಿಗರಷ್ಟು ಇಲ್ಲ. ಕ್ರಿಕೆಟಿಗರು ಹೊಂದಿರುವಷ್ಟು ಹಿಂಬಾಲಕರನ್ನು ಇವರು ಹೊಂದಿಲ್ಲ!  ಸೈನಾ ನೆಹ್ವಾಲ್  ಟ್ವಿಟರ್‌ನಲ್ಲಿ 74 ಲಕ್ಷ, ಫೇಸ್‌ಬುಕ್‌ನಲ್ಲಿ 80 ಲಕ್ಷ, ಇನ್‌ಸ್ಟಾಗ್ರಾಂನಲ್ಲಿ 97 ಸಾವಿರ ಅಭಿಮಾನಿಗಳನ್ನು ಹೊಂದಿದ್ದಾರೆ.  ಪಿ.ವಿ ಸಿಂಧುಗೆ 24 ಲಕ್ಷ, ಜ್ವಾಲಾ ಗುಟ್ಟಾಗೆ 14 ಲಕ್ಷ ಟ್ವಿಟರ್ ಅಭಿಮಾನಿಗಳು ಇದ್ದಾರೆ.  ಟೆನಿಸ್‌ ತಾರೆ ಸಾನಿಯಾ ಮಿರ್ಜಾ ತಮ್ಮ ಟ್ವಿಟರ್‌ ಖಾತೆಯಲ್ಲಿ  80 ಲಕ್ಷ , ಫೇಸ್‌ಬುಕ್‌ನಲ್ಲಿ 1.2 ಕೋಟಿ, ಇನ್‌ಸ್ಟಾಗ್ರಾಂನಲ್ಲಿ 42 ಲಕ್ಷ  ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.  ಹಾಕಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಇತರೆ ಕ್ರೀಡೆಗಳ ಆಟಗಾರರು ಮತ್ತು ಅಥ್ಲೀಟ್‌ಗಳು ಹಲವು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಾರಾದರೂ ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಇಲ್ಲ.

**

ಹಣ ನೀಡುವ ಎಟಿಎಂಗಳು..

ಸಾಮಾಜಿಕ ಜಾಲತಾಣಗಳು ಪ್ರಚಾರದ ವೇದಿಕೆಗೆ ಸೀಮಿತವಾಗಿರದೇ ಕೋಟಿಗಟ್ಟಲೇ ಹಣ ತಂದು ಕೊಡುವ ಆದಾಯದ ಮೂಲವಾಗಿವೆ. ವಿರಾಟ್ ಕೊಹ್ಲಿ, ದೋನಿ, ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್, ಪಿ.ವಿ.ಸಿಂಧು ಸೋಶಿಯಲ್ ಮೀಡಿಯಾಗಳಿಂದ ಆದಾಯ ಪಡೆಯುತ್ತಿದ್ದಾರೆ. 2017ರಲ್ಲಿ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಟೊ ಪ್ರಕಟಿಸಲು 3.2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.