ADVERTISEMENT

ಆಸ್ಟ್ರೇಲಿಯನ್ ಓಪನ್‌: ಅಲ್ಕರಾಜ್‌ಗೆ ಮಣಿದ ಸಿನ್ನರ್‌

ಪಿಟಿಐ
Published 10 ಜನವರಿ 2026, 14:28 IST
Last Updated 10 ಜನವರಿ 2026, 14:28 IST
ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ಪ್ರದರ್ಶನ ಪಂದ್ಯ ಆಡಿದ ಇಟಲಿಯ ಯಾನಿಕ್ ಸಿನ್ನರ್ ಮತ್ತು ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್.
ಎಎಫ್‌ಪಿ ಚಿತ್ರ
ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ಪ್ರದರ್ಶನ ಪಂದ್ಯ ಆಡಿದ ಇಟಲಿಯ ಯಾನಿಕ್ ಸಿನ್ನರ್ ಮತ್ತು ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್. ಎಎಫ್‌ಪಿ ಚಿತ್ರ    

ಇಂಚಿಯಾನ್ (ದಕ್ಷಿಣ ಕೊರಿಯಾ): ಆಸ್ಟ್ರೇಲಿಯನ್ ಓಪನ್‌ಗೆ ಮೊದಲು ವಿಶ್ವದ ಅಗ್ರ ಆಟಗಾರರಾದ ಕಾರ್ಲೋಸ್ ಅಲ್ಕರಾಜ್ ಮತ್ತು ಯಾನಿಕ್ ಸಿನ್ನರ್ ಅವರು ಶನಿವಾರ  ಪ್ರದರ್ಶನ ಪಂದ್ಯದಲ್ಲಿ ಮುಖಾಮುಖಿಯಾದರು. ಪ್ರೇಕ್ಷಕರಿಂದ ಭರ್ತಿಯಾಗಿದ್ದ ಕ್ರೀಡಾಂಗಣದಲ್ಲಿ ಅಲ್ಕರಾಜ್ ನೇರ ಸೆಟ್‌ಗಳಿಂದ ಇಟಲಿಯ ‘ಚಿರಪರಿಚಿತ’ ಎದುರಾಳಿಯನ್ನು ಸೋಲಿಸಿದರು.

ಈ ವರ್ಷ ಮೊದಲ ಬಾರಿ ಈ ತಾರೆಯಬ್ಬರಿಬ್ಬರು ಮುಖಾಮುಖಿಯಾಗಿದ್ದು, ವಿಶ್ವದ ಅಗ್ರಮಾನ್ಯ ಆಟಗಾರನಾಗಿರುವ ಸ್ಪೇನ್‌ನ ಅಲ್ಕರಾಜ್ 7–5, 7–6 (8/6) ರಿಂದ ಜಯಗಳಿಸಿದರು. ಇಂಚಿಯಾನ್‌ನ ಇನ್‌ಸ್ಪೈರ್ ಅರೇನಾದಲ್ಲಿ ನಡೆದ ಈ ಪಂದ್ಯವನ್ನು 12,000 ಉತ್ಸಾಹಿ ಪ್ರೇಕ್ಷಕರು ವೀಕ್ಷಿಸಿದರು. ಪಂದ್ಯ 1 ಗಂಟೆ 47 ನಿಮಿಷ ನಡೆಯಿತು.

ಇನ್ನು ಎಂಟು ದಿನಗಳಲ್ಲಿ ಆಸ್ಟ್ರೇಲಿಯನ್ ಓಪನ್‌ ಚಾಂಪಿಯನ್‌ಷಿಪ್‌ ಆರಂಭವಾಗಲಿದೆ. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸಿನ್ನರ್ ಹಾಲಿ ಚಾಂಪಿಯನ್ ಆಗಿದ್ದಾರೆ. 

ADVERTISEMENT

ಪ್ರದರ್ಶನ ಪಂದ್ಯದ ಮೂಲಕ ತಾರಾ ಆಟಗಾರರು ಎಷ್ಟು ಸಂಪಾದನೆ ಮಾಡಿದ್ದಾರೆ ಎಂಬುದರ ಬಗ್ಗೆ ದಕ್ಷಿಣ ಕೊರಿಯಾದ ಆಯೋಜಕರು ಏನೂ ಹೇಳಲಿಲ್ಲ. ಆದರೆ ಇಟಲಿಯ ವರದಿಗಳ ಪ್ರಕಾರ, ಅವರು ತಲಾ ₹18 ಕೋಟಿಗೂ ಹೆಚ್ಚು ಹಣ ಸಂಪಾದಿಸಿರುವ ಸಾಧ್ಯತೆಯಿದೆ.

ಪಂದ್ಯ ಇಡಿಯಾಗಿ ಗಂಭೀರ ರೀತಿಯಲ್ಲಿ ಸಾಗಲಿಲ್ಲ. ಗುಣಮಟ್ಟದ ರ್‍ಯಾಲಿಗಳ ಮಧ್ಯೆ, ಮುಗುಳ್ನಗುತ್ತಿದ್ದ ಆಟಗಾರರು ಆಗಾಗ ಚೆಂಡನ್ನು ಕಾಲುಗಳ ಮಧ್ಯದಿಂದ ಹೊಡೆದಟ್ಟಿ ಪ್ರೇಕ್ಷಕರಿಂದ ಹರ್ಷೋದ್ಗಾರ ಪಡೆದರು.

‘ಯಾನಿಕ್ ಮತ್ತು ನಾನು 2026ರಲ್ಲಿ ಜೊತೆಗೆ ಆಡಿ ವರ್ಷ ಮುಗಿಸಿದ್ದೆವು. ಈಗ ಮತ್ತೊಮ್ಮೆ ಆಡಿ ವರ್ಷ ಆರಂಭಿಸಿದ್ದೇವೆ’ ಎಂದು 22 ವರ್ಷ ವಯಸ್ಸಿನ ಅಲ್ಕರಾಜ್ ಪಂದ್ಯದ ನಂತರ ಹೇಳಿದರು.

‘ಪಂದ್ಯ ನಿಕಟ ಪೈಪೋಟಿಯಿಂದ ಕೂಡಿತ್ತು. ಸ್ವಲ್ಪ ಒತ್ತಡವೂ ಇತ್ತು’ ಎಂದು 24 ವರ್ಷ ವಯಸ್ಸಿನ ಸಿನ್ನರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.