ಗೆಲುವಿನ ಸಂಭ್ರಮ.... ವಿಂಬಲ್ಡನ್ ಸೆಮಿಫೈನಲ್‌ನಲ್ಲಿ ಮೆಡ್ವೆಡೇವ್ ಅವರನ್ನು ಸೋಲಿಸಿದ ಕಾರ್ಲೋಸ್ ಅಲ್ಕರಾಜ್ ಸಂಭ್ರಮಿಸಿದ್ದು ಹೀಗೆ
ಲಂಡನ್: ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಜ್ ಅವರು ಶುಕ್ರವಾರ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರನ್ನು ಸೋಲಿಸಿ ವಿಂಬಲ್ಡನ್ ಪುರುಷ ಸಿಂಗಲ್ಸ್ ಫೈನಲ್ ತಲುಪಿದರು. ಇದು ಸ್ಪೇನ್ ಆಟಗಾರನಿಗೆ ನಾಲ್ಕನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ.
ವಿಶ್ವದ ಮೂರನೇ ಕ್ರಮಾಂಕದ ಅಲ್ಕರಾಜ್ 6–7 (1–7), 6–3, 6–4, 6–4 ರಿಂದ ಐದನೇ ಕ್ರಮಾಂಕದ ಮೆಡ್ವೆಡೇವ್ ಅವರನ್ನು ಹಿಮ್ಮೆಟ್ಟಿಸಿದರು. ಭಾನುವಾರ ನಡೆಯುವ ಫೈನಲ್‌ನಲ್ಲಿ ಅವರು ಏಳುಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಅಥವಾ ಇಟಲಿಯ ಲೊರೆಂಜೊ ಮುಸೆಟ್ಟಿ ಅವರನ್ನು ಎದುರಿಸಲಿದ್ದಾರೆ.
ಮೊದಲ ಸೆಟ್‌ನಲ್ಲಿ ಎರಡು ಬ್ರೇಕ್‌ಗಳೊಂದಿಗೆ ಮೆಡ್ವೆಡೇವ್ ಮುನ್ನಡೆ ಪಡೆದರೂ, ಅಲ್ಕರಾಜ್ ಹೋರಾಟ ತೋರಿದರು. ಮೆಡ್ವೆಡೇವ್ ಹತಾಶೆ ಎಷ್ಟಿತ್ತೆಂದರೆ ಒಮ್ಮೆ ಅವರು ಅಸಭ್ಯ ಪದ ಬಳಕೆಗಾಗಿ ಅಂಪೈರ್ ಇವಾ ಅಸ್ಡೆರಕಿ ಅವರಿಂದ ಎಚ್ಚರಿಕೆ ಪಡೆದರು. 9ನೇ ಗೇಮ್‌ನಲ್ಲಿ ಬ್ರೇಕ್‌ಗೆ ಒಳಗಾದರು.
ಅಸ್ಡೆರಕಿ ಅವರು ಟೂರ್ನಿಯ ರೆಫ್ರಿ ಅವರನ್ನು ಸೆಂಟರ್‌ಕೋರ್ಟ್‌ಗೆ ಕರೆಸಬೇಕಾಯಿತು. ಆದರೆ ಆ ಪ್ರಕರಣದ ನಂತರ ಸಮಾಧಾನವಹಿಸಿ ಆಡಿದ ಮೆಡ್ವೆಡೇವ್, ಟೈಬ್ರೇಕ್‌ನಲ್ಲಿ ಸುಲಭವಾಗಿ ಮೊದಲ ಸೆಟ್ ಪಡೆದರು. ಈ ಬಾರಿಯ ವಿಂಬಲ್ಡನ್‌ನಲ್ಲಿ ಅಲ್ಕರಾಜ್ ಮೊದಲ ಸೆಟ್ ಕಳೆದುಕೊಂಡಿದ್ದು ಇದು ಮೂರನೇ ಬಾರಿ.
ಎರಡನೆ ಸೆಟ್‌ನಲ್ಲಿ ಅಧಿಕಾರ ಯುತವಾಗಿ ಆಡಿದ ಸ್ಪೇನ್ ಆಟಗಾರ 3–1 ಮುನ್ನಡೆ ಪಡೆದರಲ್ಲದೇ, ಹೆಚ್ಚಿನ ಪ್ರಯಾಸವಿಲ್ಲದೇ ಸೆಟ್ ಪಡೆದರು. 21 ವರ್ಷದ ಅಲ್ಕರಾಜ್ ಮೂರನೇ ಸೆಟ್‌ನಲ್ಲಿ 14 ವಿನ್ನರ್‌ಗಳನ್ನು ಸಿಡಿಸಿದರು. ಮೂರನೇ ಗೇಮ್‌ನಲ್ಲಿ ಒಮ್ಮೆ ಮೆಡ್ವೆಡೇವ್ ಸರ್ವ್ ಬ್ರೇಕ್
ಮಾಡಿದರು.
ವಿಶ್ವದ ಅಗ್ರ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಹೊರದೂಡಿದ್ದ ಮೆಡ್ವೆಡೇವ್ ನಾಲ್ಕನೇ ಸೆಟ್‌ನಲ್ಲಿ ಆರಂಭದಲ್ಲೇ ಬ್ರೇಕ್ ಪಡೆದರು. ಆದರೆ ನಂತರ ಅಲ್ಕರಾಜ್ ಪ್ರಾಬಲ್ಯ ಮುಂದುವರಿಸಿ ಪಂದ್ಯ ಗೆದ್ದರು.
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹಿಂದಿನ ವರ್ಷದ ಸೆಮಿಫೈನಲ್ ನಲ್ಲೂ ಅಲ್ಕರಾಜ್ ಅವರು ಇದೇ ಎದುರಾಳಿಯನ್ನು ಸೋಲಿಸಿದ್ದರು. ನಂತರ ಫೈನಲ್‌ನಲ್ಲಿ ಜೊಕೊವಿಚ್ ಅವರನ್ನು ಪರಾಭವಗೊಳಿಸಿ ಮೊದಲ ಬಾರಿ ವಿಂಬಲ್ಡನ್ ಟ್ರೋಫಿ ಎತ್ತಿದ್ದರು.
ಅಲ್ಕರಾಜ್ 2022ರಲ್ಲಿ ಅಮೆರಿಕ ಓಪನ್, 2023ರಲ್ಲಿ ವಿಂಬಲ್ಡನ್, ಕಳೆದ ತಿಂಗಳು ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.