ಅಡಿಲೇಡ್ : ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌ಗೆ ಸಜ್ಜಾಗುತ್ತಿರುವಾಗಲೇ ಏಂಜಲಿಕ್ ಕರ್ಬರ್‌ಗೆ ಹಿನ್ನಡೆಯಾಗಿದೆ. ಬೆನ್ನುನೋವಿನಿಂದ ಬಳಲಿದ ಅವರು ಇಲ್ಲಿ ನಡೆಯುತ್ತಿರುವ ಅಡಿಲೇಡ್ ಅಂತರರಾಷ್ಟ್ರೀಯ ಟೂರ್ನಿಯಿಂದ ಹಿಂದೆ ಸರಿದರು. ಹೀಗಾಗಿ ಆಸ್ಟ್ರೇಲಿಯಾ ಓಪನ್‌ನ ಸಿದ್ಧತೆ ಮೇಲೆ ಕರಿನೆರಳು ಮೂಡಿದೆ.
ಈ ಹಿಂದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನ ಗಳಿಸಿದ್ದ ಮತ್ತು 2016ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಚಾಂಪಿಯನ್ ಆಗಿದ್ದ ಜರ್ಮನಿಯ ಕರ್ಬರ್, ಅಡಿಲೇಡ್ ಓಪನ್‌ನ ಎರಡನೇ ಸುತ್ತಿನ ಎರಡನೇ ಸೆಟ್‌ನಲ್ಲಿ ಸೆಣಸುತ್ತಿದ್ದಾಗ ಬೆನ್ನುನೋವು ಕಾಡಿತು. ಉಕ್ರೇನ್‌ನ ಡಯಾನ ಯಸ್‌ಟ್ರೀಂಕಾ ಎದುರಿನ ಪಂದ್ಯದಲ್ಲಿ ಕರ್ಬರ್ 6–3, 2–0ಯ ಮುನ್ನಡೆ ಗಳಿಸಿದ್ದರು.
ಎರಡನೇ ಸೆಟ್‌ನ ಆರಂಭದಲ್ಲೇ ಕರ್ಬರ್ ನೋವಿನಿಂದ ಬಳಲುತ್ತಿದ್ದರು. ಎರಡು ಗೇಮ್‌ಗಳನ್ನು ಗೆದ್ದ ಅವರು ಮೂರನೇ ಗೇಮ್‌ಗಾಗಿ ಸರ್ವ್ ಮಾಡಲು ಮುಂದಾದಾಗ ನೋವು ತೀವ್ರಗೊಂಡಿತು. ತಕ್ಷಣ ಟ್ರೇನರ್ ಬಂದು ಚಿಕಿತ್ಸೆ ನೀಡಿದರು. ಆ ಮೇಲೆ ವೈದ್ಯಕೀಯ ತಂಡವೂ ಬಂದಿತು. ನಂತರ ಪಂದ್ಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.