ADVERTISEMENT

ಫಿಲಿಪ್ ಐಲ್ಯಾಂಡ್ ಟ್ರೋಫಿ: ಅಂಕಿತ ಜಯಭೇರಿ

ಪಿಟಿಐ
Published 14 ಫೆಬ್ರುವರಿ 2021, 16:50 IST
Last Updated 14 ಫೆಬ್ರುವರಿ 2021, 16:50 IST
ಅಂಕಿತ ರೈನಾ –ಎಎಫ್‌ಪಿ ಚಿತ್ರ
ಅಂಕಿತ ರೈನಾ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಭಾರತದ ಅಂಕಿತ ರೈನಾ ಇಲ್ಲಿ ನಡೆಯುತ್ತಿರುವ ಫಿಲಿಪ್ ಐಲ್ಯಾಂಡ್ ಟ್ರೋಫಿ ಟೆನಿಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದು ಡಬ್ಲ್ಯುಟಿಎ ಟೂರ್ನಿಯೊಂದರ ಮುಖ್ಯ ಸುತ್ತಿನಲ್ಲಿ ತಮ್ಮ ಮೊದಲ ಗೆಲುವು ದಾಖಲಿಸಿಕೊಂಡರು. ಇಟಲಿಯ ಎಲಿಜಬೆಟಾ ಕೊಸಿಯಾರೆಟೊ ಎದುರು ಭಾನುವಾರ ನಡೆದ ಪಂದ್ಯದಲ್ಲಿ ಅವರು 5-7, 6-1, 6-2ರಲ್ಲಿ ಜಯ ಗಳಿಸಿದರು.

ಎರಡು ತಾಸು ಮತ್ತು 11 ನಿಮಿಷ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸ್ವಲ್ಪ ಹಿನ್ನಡೆ ಅನುಭಿವಿಸಿದರೂ ನಂತರ ಹಿಡಿತ ಸಾಧಿಸುವಲ್ಲಿ ಅಂಕಿತ ಯಶಸ್ವಿಯಾದರು. ಈ ಗೆಲುವಿನೊಂದಿಗೆ ಅವರು ಸಿಂಗಲ್ಸ್ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಗರಿಷ್ಠ ಮಟ್ಟಕ್ಕೇರಿದರು. 181ನೇ ಸ್ಥಾನದಲ್ಲಿದ್ದ ಅವರು ಈಗ 156ಕ್ಕೇರಿದ್ದಾರೆ. ಈ ಟೂರ್ನಿಯಲ್ಲಿ ಇನ್ನಷ್ಟು ಸಾಧನೆ ಮಾಡಿದರೆ 150ರ ಒಳಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈಚೆಗೆ ನಡೆದ ಯಾರಾ ವ್ಯಾಲಿ ಕ್ಲಾಸಿಕ್ ಮತ್ತು ಥಾಯ್ಲೆಂಡ್ ಓಪನ್ ಡಬ್ಲ್ಯುಟಿಎ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದ ಅಂಕಿತ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ADVERTISEMENT

ಸ್ಥಳೀಯ ‘ಯುವತಿ’ಗೆ ಮಣಿದ ಕೆನಿನ್

ಮೂರು ದಿನಗಳ ಹಿಂದೆ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದ ಹಾಲಿ ಚಾಂಪಿಯನ್ ಅಮೆರಿಕದ ಸೋಫಿಯಾ ಕೆನಿನ್‌ ಭಾನುವಾರ ಮತ್ತೊಂದು ಆಘಾತ ಅನುಭವಿಸಿದರು. ಫಿಲಿಪ್ ಐಲ್ಯಾಂಡ್ ಟ್ರೋಫಿ ಟೂರ್ನಿಯಲ್ಲೂ ಅವರು ಎರಡನೇ ಸುತ್ತಿನಲ್ಲಿ ಹೊರಬಿದ್ದರು.

ಆಸ್ಟ್ರೇಲಿಯಾ ಓಪನ್‌ನಲ್ಲಿ 65ನೇ ರ‍್ಯಾಂಕ್‌ನ ಆಟಗಾರ್ತಿ ಎಸ್ಟೋನಿಯಾದ ಕಯಾ ಕನೆಪಿಗೆ6-3, 6-2ರಲ್ಲಿ ಮಣಿದಿದ್ದ ಸೋಫಿಯಾ ಭಾನುವಾರ ಸ್ಥಳೀಯ ಆಟಗಾರ್ತಿ, ಇನ್ನೂ ರ‍್ಯಾಂಕಿಂಗ್ ಪಟ್ಟಿಯಲ್ಲೇ ಕಾಣಿಸಿಕೊಳ್ಳದ ಒಲಿವಿಯಾ ಗಡೆಕಿ ಎದುರು ಸೋಲುಂಡರು. ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಕೆನಿನ್ ಅವರನ್ನು 18 ವರ್ಷದ ಗಡೆಕಿ 2-6, 7-6(4), 6-4ರಲ್ಲಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.