ADVERTISEMENT

ಆಸ್ಟ್ರೇಲಿಯಾ ಓಪನ್: ಸತತ ನಾಲ್ಕನೇ ಬಾರಿ ಪ್ರಶಸ್ತಿ ಸುತ್ತಿಗೆ ಸಬಲೆಂಕಾ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 19:34 IST
Last Updated 29 ಜನವರಿ 2026, 19:34 IST
<div class="paragraphs"><p>ಅರಿನಾ ಸಬಲೆಂಕಾ</p></div>

ಅರಿನಾ ಸಬಲೆಂಕಾ

   

ಮೆಲ್ಬರ್ನ್: ಉಕ್ರೇನಿನ ಎಲಿನಾ ಸ್ವಿಟೊಲಿನಾ ಅವರನ್ನು ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 6–2, 6–3 ರಿಂದ ನೇರ ಸೆಟ್‌ಗಳಲ್ಲಿ ಮಣಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ ಸತತ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಮುನ್ನುಗ್ಗಿದರು. ಈ ಎರಡು ದೇಶಗಳ ನಡುವಣ ರಾಜಕೀಯ ವೈಷಮ್ಯದ ನೆರಳು ಆಟದ ಮೇಲೂ ಆವರಿಸಿತು.

ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸಬಲೆಂಕಾ ಅವರು ಶನಿವಾರ ನಡೆಯುವ ಫೈನಲ್‌ನಲ್ಲಿ ‘ಪರಿಚಿತ ಎದುರಾಳಿ’ ಎಲಿನಾ ರಿಬಾಕಿನಾ ಅವರನ್ನು ಎದುರಿಸಲಿದ್ದಾರೆ. ಐದನೇ ಶ್ರೇಯಾಂಕದ ರಿಬಾಕಿನಾ ಇನ್ನೊಂದು ಸೆಮಿಫೈನಲ್‌ನಲ್ಲಿ 6–3, 7–6 (9–7) ರಿಂದ ಆರನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿ ಜೆಸಿಕಾ ಪೆಗುಲಾ ಅವರನ್ನು ಮಣಿಸಿದರು.

ADVERTISEMENT

ಸಬಲೆಂಕಾ ಮತ್ತು ರಿಬಾಕಿನಾ 2023ರ ಫೈನಲ್‌ ನಲ್ಲೂ ಮುಖಾಮುಖಿಯಾಗಿದ್ದರು. ಆ ಫೈನಲ್‌ನಲ್ಲಿ ಸಬಲೆಂಕಾ ಸೆಟ್‌ ಹಿನ್ನಡೆಯಿಂದ ಗೆದ್ದು ಮೊದಲ ಬಾರಿ ಇಲ್ಲಿ ಚಾಂಪಿಯನ್ ಆಗಿದ್ದರು. ಸಬಲೆಂಕಾ ಅವರಿಗೆ ಮೆಲ್ಬರ್ನ್ ಪಾರ್ಕ್ ಅಚ್ಚುಮೆಚ್ಚಿನ ತಾಣವಾಗಿದ್ದು, ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಇಲ್ಲಿ ಪ್ರಶಸ್ತಿ ಗೆಲ್ಲುವ
ಹಾದಿಯಲ್ಲಿದ್ದಾರೆ. ಒಟ್ಟಾರೆ ಐದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಅವರ ಕೈಎಟುಕಿನಲ್ಲಿದೆ.

26 ವರ್ಷ ವಯಸ್ಸಿನ ರಿಬಾಕಿನಾ ಈವರೆಗಿನ ಅಭಿಯಾನದಲ್ಲಿ ಒಂದೂ ಸೆಟ್‌ ಕಳೆದುಕೊಂಡಿಲ್ಲ. ರಾಡ್‌ ಲೇವರ್ ಅರೇನಾದಲ್ಲಿ ಇನ್ನೊಂದು ಸೆಮಿಫೈನಲ್ ಪಂದ್ಯವನ್ನು 1 ಗಂಟೆ 40 ನಿಮಿಷಗಳ ಹೋರಾಟದಲ್ಲಿ ಗೆದ್ದ ರಷ್ಯಾ ಸಂಜಾತ ಕಜಾಕಸ್ತಾನದ ಆಟಗಾರ್ತಿ ಈಗ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ವಿಶ್ವಾಸದಲ್ಲಿ ದ್ದಾರೆ. ಅವರು 2022ರಲ್ಲಿ ವಿಂಬಲ್ಡನ್‌ ಟೂರ್ನಿಯಲ್ಲಿ ವಿಜೇತೆಯಾಗಿದ್ದರು.

ದುಬೈನಲ್ಲಿ ನೆಲಸಿರುವ ರಿಬಾಕಿನಾ ನವೆಂಬರ್‌ನಲ್ಲಿ ನಡೆದ ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಸಬಲೆಂಕಾ ವಿರುದ್ಧ ಜಯಗಳಿಸಿದ್ದರು. ಉತ್ತಮ ಲಯದಲ್ಲಿರುವ ಅವರು ಕೊನೆಯ 20 ಪಂದ್ಯಗಳಲ್ಲಿ 19ರಲ್ಲಿ ಜಯಗಳಿಸಿದ್ದಾರೆ.

ಆರಂಭದಲ್ಲೇ ಹಿಡಿತ ಸಾಧಿಸಿದ ರಿಬಾಕಿನಾ ಎದುರಾಳಿಯ ಮೊದಲ ಗೇಮ್ ಬ್ರೇಕ್ ಮಾಡಿದರಲ್ಲದೇ ಬೇಗನೇ 3–0 ಮುನ್ನಡೆ ಗಳಿಸಿದರು. ಕೆಲಸಮಯದ ನಂತರ ಪೆಗುಲಾ ಲಯಕಂಡುಕೊಂಡರು. ಬೇಸ್‌ಲೈನ್ ರ‍್ಯಾಲಿಗಳ ಮೂಲಕ ಎದುರಾಳಿಗೆ ಸವಾಲೊಡ್ಡಿದರು. ಮುಂದಿನ ಸರ್ವ್‌ ಉಳಿಸಿಕೊಂಡರು. ಆದರೆ ಐದನೇ ಗೇಮ್‌ನಲ್ಲಿ ಒಂದೂ ಪಾಯಿಂಟ್ ಗಳಿಸಲು ಆಗಲಿಲ್ಲ. ಕಜಾಕ್ ಆಟಗಾರ್ತಿ ಮೊದಲ ಸೆಟ್ಟನ್ನು 32 ನಿಮಿಷಗಳಲ್ಲಿ ಪಡೆದರು.

ಎರಡನೇ ಸೆಟ್‌ನಲ್ಲಿ ಪೆಗುಲಾ ಹೋರಾಟ ನಡೆಸಿದರು. 3–5 ಹಿನ್ನಡೆಯಲ್ಲಿದ್ದಾಗ ಮೂರು ಬಾರಿ ಮ್ಯಾಚ್‌ ಪಾಯಿಂಟ್‌ ರಕ್ಷಿಸಿಕೊಂಡ ಅಮೆರಿಕದ ಆಟಗಾರ್ತಿ ಚೇತರಿಕೆಯೊಂದಿಗೆ ಪಂದ್ಯವನ್ನು ಟೈಬ್ರೇಕರ್‌ಗೆ ಒಯ್ಯುವಲ್ಲಿ ಯಶಸ್ವಿಯಾದರು. ಆದರೆ ಟೈಬ್ರೇಕರ್‌ನಲ್ಲಿ ಶಾಂತಚಿತ್ತರಾಗಿ ಆಡಿದ ರಿಬಾಕಿನಾ ಮೂರನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿ ಫೈನಲ್ ತಲುಪಿದರು.

ನಡೆಯದ ಹಸ್ತಲಾಘವ 

ವಿಶ್ವದ ಅಗ್ರ ಆಟಗಾರ್ತಿ ಸಬಲೆಂಕಾ ಅವರು ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ಆಟಗಾರ್ತಿ ಸ್ವಿಟೋಲಿನಾ ಅವರನ್ನು ಸೋಲಿಸಿದ ನಂತರ ಸಾಂಪ್ರದಾಯಿಕ ಹಸ್ತಲಾಘವ ನಡೆಯಲಿಲ್ಲ.

ಸಬಲೆಂಕಾ– ಸ್ವಿಟೋಲಿನಾ ಹಣಾಹಣಿಗೆ ಮೊದಲು, ರಾಡ್‌ ಲೇವರ್‌ ಅರೇನಾದಲ್ಲಿ ಮಾಡಲಾದ ಘೋಷಣೆಯಲ್ಲಿ ‘ಪಂದ್ಯದ ನಂತರ ಹಸ್ತಲಾಘವ ಇರುವುದಿಲ್ಲ. ಅಭಿಮಾನಿಗಳು ಇದನ್ನು ಗೌರವಿಸಬೇಕು’ ಎಂದು ವಿನಂತಿಸಲಾಯಿತು. ಕೋರ್ಟ್ ಬಳಿಯ ದೊಡ್ಡ ಪರದೆಯಲ್ಲೂ ಈ ಹೇಳಿಕೆ ಮೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.