ಕಾರ್ಲೋಸ್ ಅಲ್ಕರಾಜ್
ಕೃಪೆ: @AustralianOpen
ಮೆಲ್ಬರ್ನ್: ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರು ಮಂಗಳವಾರ ಪ್ರಕಟಗೊಂಡ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಅವರ ಅಗ್ರಸ್ಥಾನವೂ ಅಬಾಧಿತವಾಗಿದೆ.
ಸ್ಪೇನ್‌ನ 22 ವರ್ಷದ ಅಲ್ಕರಾಜ್ ಅವರು ಭಾನುವಾರ ನಡೆದ ಫೈನಲ್‌ನಲ್ಲಿ ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿ ತಮ್ಮ ಮೊದಲ ಆಸ್ಟ್ರೇಲಿಯಾ ಓಪನ್ ಕಿರೀಟ ಗೆದ್ದರು. ಮಾತ್ರವಲ್ಲ, ನಾಲ್ಕೂ ಗ್ರ್ಯಾನ್‌ಸ್ಲಾಮ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಬರೆದರು.
ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಜೊಕೊವಿಚ್ ಅವರಿಗೆ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆಯಾದರೂ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನದ ಬಡ್ತಿಯೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಹಿಂದೆಹಾಕಿದ್ದಾರೆ. ಇಟಲಿಯ ಯಾನಿಕ್ ಸಿನ್ನರ್ ಅವರು ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಕಜಾಕಸ್ತಾನದ ಎಲಿನಾ ರಿಬಾಕಿನಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ ಸೋತರೂ ಅಗ್ರಸ್ಥಾನಕ್ಕೆ ಕುತ್ತು ಬಂದಿಲ್ಲ. ರಿಬಾಕಿನಾ ಅವರು ಎರಡು ಸ್ಥಾನಗಳ ಬಡ್ತಿಯೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ.
ಪೋಲೆಂಡ್ ತಾರೆ ಇಗಾ ಶ್ವಾಂಟೆಕ್ ಎರಡನೇ ಸ್ಥಾನದಲ್ಲಿ ಮುಂದುವರಿ ದಿದ್ದಾರೆ. ಅಮೆರಿಕದ ಅಮಂಡಾ ಅನಿಸಿಮೋವಾ, ಕೊಕೊ ಗಾಫ್ ಮತ್ತು ಜೆಸಿಕಾ ಪೆಗುಲಾ ಅವರು ಕ್ರಮವಾಗಿ ನಾಲ್ಕರಿಂದ ಆರನೇ ಸ್ಥಾನದಲ್ಲಿದ್ದಾರೆ.
ಭಾಂಬ್ರಿಗೆ ಜೀವನ ಶ್ರೇಷ್ಠ ರ‍್ಯಾಂಕಿಂಗ್
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದ್ದ ಭಾರತದ ಅನುಭವಿ ಡಬಲ್ಸ್ ಆಟಗಾರ ಯುಕಿ ಭಾಂಬ್ರಿ ಅವರು ಎರಡು ಸ್ಥಾನಗಳ ಬಡ್ತಿಯೊಂದಿಗೆ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 18ನೇ ಸ್ಥಾನಕ್ಕೇರಿದ್ದಾರೆ.
ದಿಗ್ಗಜ ರೋಹನ್ ಬೋಪಣ್ಣ ನಂತರ ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಮೊದಲ ಡಬಲ್ಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 33 ವರ್ಷದ ಭಾಂಬ್ರಿ ಮತ್ತು ಅವರ ಸ್ವೀಡನ್‌ನ ಜತೆಗಾರ ಆ್ಯಂಡ್ರೆ ಗೊರಾನ್ಸನ್ ಜೋಡಿಯು ಮೆಲ್ಬರ್ನ್ ಪಾರ್ಕ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿತ್ತು.
ಈ ಋತುವಿನ ಆರಂಭದಲ್ಲಿ, ಭಾಂಬ್ರಿ ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರನಾಗಿ ಹೊರಹೊಮ್ಮಿದರು. ಕನ್ನಡಿಗ ಬೋಪಣ್ಣ ಅವರು ನಿವೃತ್ತಿ ಘೋಷಿಸಿ, 286 ವಾರಗಳ ಅಗ್ರಸ್ಥಾನದ ಆಧಿಪತ್ಯವನ್ನು ಕೊನೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.