ADVERTISEMENT

Australian Open 2025: ಪ್ರಿ ಕ್ವಾರ್ಟರ್‌ಗೆ ಜೊಕೊ, ಸಬಲೆಂಕಾ

ಏಜೆನ್ಸೀಸ್
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
<div class="paragraphs"><p>ನೊವಾಕ್‌ ಜೊಕೊವಿಕ್‌</p></div>

ನೊವಾಕ್‌ ಜೊಕೊವಿಕ್‌

   

ಮೆಲ್ಬರ್ನ್‌: ಹತ್ತು ಬಾರಿಯ ಚಾಂಪಿಯನ್‌ ಸರ್ಬಿಯಾದ ನೊವಾಕ್‌ ಜೊಕೊವಿಕ್‌, ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಅವರು ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಕ್ರವಾರ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್‌ ಕಿರೀಟದ ಮೇಲೆ ಕಣ್ಣಿಟ್ಟಿರುವ ಬೆಲಾರಸ್‌ನ ಅರಿನಾ ಸಬಲೆಂಕಾ, ಅಮೆರಿಕದ ಕೊಕೊ ಗಾಫ್‌ ಅವರೂ 16ರ ಘಟ್ಟಕ್ಕೆ ಮುನ್ನಡೆದರು. ಆದರೆ, ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿದ್ದ ಜಪಾನ್‌ನ ನವೋಮಿ ಒಸಾಕಾ ಗಾಯಾಳಾಗಿ ಮೂರನೇ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.

ADVERTISEMENT

ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಕಿರೀಟದ ಹೊಸ್ತಿಲಲ್ಲಿರುವ ಏಳನೇ ಶ್ರೇಯಾಂಕದ ಜೊಕೊವಿಚ್‌ ಮೂರನೇ ಸುತ್ತಿನ ಹಣಾಹಣಿಯಲ್ಲಿ 6-1, 6-4, 6-4ರಲ್ಲಿ ನೇರ ಸೆಟ್‌ಗಳಿಂದ 26ನೇ ಶ್ರೇಯಾಂಕದ ಥಾಮಸ್ ಮಚಾಕ್ ಅವರನ್ನು ಹಿಮ್ಮೆಟ್ಟಿಸಿದರು. 

ಹೊಸ ಕೋಚ್‌ ಆ್ಯಂಡಿ ಮರ್‍ರೆ ಮಾರ್ಗದರ್ಶನದಲ್ಲಿ ಕಣಕ್ಕೆ ಇಳಿದಿರುವ 37 ವರ್ಷ ವಯಸ್ಸಿನ ಜೊಕೊವಿಕ್‌ಗೆ ಯಾವುದೇ ಹಂತದಲ್ಲೂ ಝೆಕ್‌ ರಿಪಬ್ಲಿಕ್‌ನ ಥಾಮಸ್‌ ಸರಿಸಾಟಿಯಾಗಲಿಲ್ಲ. ಸರ್ಬಿಯಾ ಆಟಗಾರ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಝೆಕ್‌ ರಿಪಬ್ಲಿಕ್‌ನ ಮತ್ತೊಬ್ಬ ಆಟಗಾರ, 24ನೇ ಶ್ರೇಯಾಂಕದ ಜಿರಿ ಲೆಹೆಕಾ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದವರು ಮುಂದಿನ ಸುತ್ತಿನಲ್ಲಿ ಅಲ್ಕರಾಜ್‌ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ಮೂರನೇ ಶ್ರೇಯಾಂಕದ ಅಲ್ಕರಾಜ್‌ 6-2, 6-4, 6-7 (3–7), 6-2ರಿಂದ ಪೋರ್ಚುಗಲ್‌ನ ನುನೊ ಬೋರ್ಗೆಸ್ ಅವರನ್ನು ಮಣಿಸಿದರು. ಐದನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ವಿಶ್ವಾಸದಲ್ಲಿರುವ ಸ್ಪೇನ್‌ನ 21 ವರ್ಷ ವಯಸ್ಸಿನ ಆಟಗಾರನಿಗೆ ಮೂರನೇ ಸೆಟ್‌ನಲ್ಲಿ ಶ್ರೇಯಾಂಕರಹಿತ ಆಟಗಾರ ಬೋರ್ಗೆಸ್ ಅವರಿಂದ ಕಠಿಣ ಸವಾಲು ಎದುರಾಯಿತು. ಟೈ ಬ್ರೇಕರ್‌ನಲ್ಲಿ ಆ ಸೆಟ್‌ ಕಳೆದುಕೊಂಡ ಅಲ್ಕರಾಜ್‌, ನಂತರ ಚೇತರಿಸಿಕೊಂಡು ಮುಂದಿನ ಸುತ್ತಿಗೆ ಮುನ್ನಡೆದರು.

ಎರಡನೇ ಶ್ರೇಯಾಂಕದ ಜ್ವೆರೇವ್‌ 6-3, 6-4, 6-4ರಿಂದ ಬ್ರಿಟನ್‌ನ ಜಾಕೋಬ್ ಫರ್ನ್ಲಿ ಅವರನ್ನು ಮಣಿಸಿದರು. ಅವರಿಗೆ ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕದ ಉಗೊ ಹಂಬರ್ಟ್‌ (ಫ್ರಾನ್ಸ್‌) ಎದುರಾಳಿಯಾಗಿದ್ದಾರೆ. ಹಾಲಿ ಚಾಂಪಿಯನ್ ಮತ್ತು ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ (ಇಟಲಿ) ಅವರು ಶನಿವಾರ ಮೂರನೇ ಸುತ್ತಿನಲ್ಲಿ ಅಮೆರಿಕದ ಮಾರ್ಕೋಸ್ ಗಿರಾನ್ ವಿರುದ್ಧ ಸೆಣಸಲಿದ್ದಾರೆ.

ಸಬಲೆಂಕಾ ಮುನ್ನಡೆ:

ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸಬಲೆಂಕಾ 7-6 (7/5), 6-4ರಿಂದ ಡೆನ್ಮಾರ್ಕ್‌ನ ಕ್ಲಾರಾ ಟೌಸನ್ ಅವರನ್ನು ಮಣಿಸಿದರು. ಅವರು ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕದ ಮಿಯೆರಾ ಆಂಡ್ರೀವಾ (ರಷ್ಯಾ) ಅವರನ್ನು ಎದುರಿಸುವರು. 17 ವರ್ಷ ವಯಸ್ಸಿನ ಮಿಯೆರಾ 6–2, 1–6, 6–2ರಿಂದ 23ನೇ ಶ್ರೇಯಾಂಕದ ಮ್ಯಾಗ್ಡಲೀನಾ ಫ್ರೆಚ್‌ ಅವರನ್ನು ಹಿಮ್ಮೆಟ್ಟಿಸಿದರು. 

ಒಸಾಕಾ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಗಾಫ್ ಅವರೊಂದಿಗೆ ಸೆಣಸುವ
ಹಾದಿಯಲ್ಲಿದ್ದರು. ಆದರೆ, ಬೆಲಿಂಡಾ ಬೆನ್ಸಿಕ್ (ಸ್ವಿಜರ್ಲೆಂಡ್‌) ವಿರುದ್ಧ ಆಡುವ ವೇಳೆ ಒಸಾಕಾ ಹೊಟ್ಟೆಯ ಸ್ನಾಯುನೋವಿಗೆ ಒಳಗಾದರು. ಟೈಬ್ರೇಕರ್‌ನಲ್ಲಿ ಮೊದಲ ಸೆಟ್‌ ಕಳೆದುಕೊಂಡಿದ್ದ ಒಸಾಕಾ ನಂತರ ಸ್ಪರ್ಧೆಯಿಂದ ಹಿಂದೆ ಸರಿದರು.

ಮೂರನೇ ಶ್ರೇಯಾಂಕದ ಗಾಫ್‌ 6-4, 6-2ರಿಂದ ಕೆನಡಾದ 30ನೇ ಶ್ರೇಯಾಂಕದ ಲೇಯ್ಲಾ ಫೆರ್ನಾಂಡಿಸ್ ಅವರನ್ನು ಮಣಿಸಿದರು.

ಬೋಪಣ್ಣ ಜೋಡಿ ಮುನ್ನಡೆ

ಮೆಲ್ಬರ್ನ್‌: ಪುರುಷರ ಡಬಲ್ಸ್‌ನಲ್ಲಿ ನಿರಾಸೆ ಮೂಡಿಸಿದ ಭಾರತದ ಅನುಭವಿ ಆಟಗಾರ ರೋಹನ್‌ ಬೋಪಣ್ಣ ಅವರು ಚೀನಾದ ಜೊತೆಗಾರ್ತಿ ಶುವಾಯ್ ಜಾಂಗ್ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಬೋಪಣ್ಣ– ಶುವಾಯ್ ಜೋಡಿಯು ಮೊದಲ ಸುತ್ತಿನಲ್ಲಿ 6-4, 6-4ರಿಂದ ಇವಾನ್ ದೋಡಿಗ್ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ ಅವರನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.