ADVERTISEMENT

Australian Open 2025 | ಗೆಲುವಿನ ಹಾದಿಯಲ್ಲಿ ಜೊಕೊ ದಾಖಲೆ

ಏಜೆನ್ಸೀಸ್
Published 16 ಜನವರಿ 2025, 0:09 IST
Last Updated 16 ಜನವರಿ 2025, 0:09 IST
<div class="paragraphs"><p>ಗೆದ್ದ ಸಂಭ್ರಮದಲ್ಲಿ ಜೊಕೊವಿಚ್‌</p></div>

ಗೆದ್ದ ಸಂಭ್ರಮದಲ್ಲಿ ಜೊಕೊವಿಚ್‌

   

(ಪಿಟಿಐ ಚಿತ್ರ)

ಮೆಲ್ಬರ್ನ್: ಅನುಭವಿ ನೊವಾಕ್ ಜೊಕೊವಿಚ್‌ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿಗೆ ಹೋಗುವ ಹಾದಿಯಲ್ಲಿ ಗ್ರ್ಯಾನ್‌ಸ್ಲಾಮ್‌ ಇತಿಹಾಸದಲ್ಲಿ ದಾಖಲೆಯೊಂದನ್ನು ಸ್ಥಾಪಿಸಿದರು. ಆದರೆ ಕಳೆದ ಬಾರಿಯ ಮಹಿಳಾ ವಿಭಾಗದ ರನ್ನರ್ ಅಪ್ ಝೆಂಗ್ ಕ್ವಿನ್ವೆನ್ ಅವರು ಬುಧವಾರ ಹೊರಬಿದ್ದಿದ್ದು ಈವರೆಗಿನ ದೊಡ್ಡ ಅನಿರೀಕ್ಷಿತ ಫಲಿತಾಂಶವೆನಿಸಿತು.

ADVERTISEMENT

ಹಾಲಿ ಚಾಪಿಯನ್ ಅರಿನಾ ಸಬಲೆಂಕಾ, ಉತ್ತಮ ಲಯದಲ್ಲಿರುವ ಕೊಕೊ ಗಾಫ್‌, ಮಾಜಿ ಚಾಂಪಿಯನ್ ನವೊಮಿ ಒಸಾಕಾ ಮತ್ತು ಪುರುಷರ ವಿಭಾಗದಲ್ಲಿ ಕಾರ್ಲೋಸ್ ಅಲ್ಕರಾಜ್ ಸುಲಭ ಗೆಲುವುಗಳನ್ನು ದಾಖಲಿಸಿದರು. ನಾಲ್ಕನೇ ದಿನ ಕೆಲಕಾಲ ಮಳೆಯಿಂದ ಪಂದ್ಯಗಳಿಗೆ ಅಡ್ಡಿಯಾಯಿತು.

ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್ ಕೂಡ ಮೂರನೇ ಸುತ್ತಿಗೆ ಮುನ್ನಡೆದರು. ಆದರೆ ಆರನೇ ಶ್ರೇಯಾಂಕದ ಕ್ಯಾಸ್ಪರ್‌ ರುಡ್‌ (ನಾರ್ವೆ) ನಾಲ್ಕು ಸೆಟ್‌ಗಳ ಪಂದ್ಯದಲ್ಲಿ ಹದಿವಯಸ್ಸಿನ ಆಟಗಾರ ಜಾಕುಬ್ ಮೆನ್ಸಿಕ್ ಅವರಿಗೆ ಮಣಿದರು. ಪುರುಷರ ಸಿಂಗಲ್ಸ್‌ನಲ್ಲಿ ಈವರೆಗೆ ಹೊರಬಿದ್ದ ಅತಿಹೆಚ್ಚಿನ ಶ್ರೇಯಾಂಕ ಆಟಗಾರ ಎನಿಸಿದರು.

ಜೋಕೊ ದಾಖಲೆ:

ರಾಡ್‌ಲೇವರ್ ಅರೇನಾದಲ್ಲಿ ಜೊಕೊವಿಚ್‌ ಸತತ ಎರಡನೇ ಬಾರಿ ನಾಲ್ಕು ಸೆಟ್‌ಗಳ ಪಂದ್ಯ ಆಡಿ, ಪೋರ್ಚುಗಲ್‌ನ ಕ್ವಾಲಿಫೈರ್‌ ಜೇಮಿ ಫರಿಯಾ ಅವರನ್ನು 6–1, 6–7 (4–7), 6–3, 6–2 ರಿಂದ ಹಿಮ್ಮೆಟ್ಟಿಸಿದರು.

ಇದು ಜೊಕೊವಿಚ್‌ ಅವರಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ 430ನೇ ಪಂದ್ಯ. ಗ್ರ್ಯಾನ್‌ಸ್ಲಾಮ್ ಇತಿಹಾಸದ ಓಪನ್ ಯುಗದಲ್ಲಿ ಆಟಗಾರನೊಬ್ಬ ಆಡಿದ ಗರಿಷ್ಠ ಪಂದ್ಯ ಇದು. ಅವರು ರೋಜರ್ ಫೆಡರರ್‌ (429 ಪಂದ್ಯ) ಅವರನ್ನು ಹಿಂದೆಹಾಕಿದರು. ಸೆರೆನಾ ವಿಲಿಯಮ್ಸ್ (423) ನಂತರದ ಸ್ಥಾನದಲ್ಲಿದ್ದಾರೆ.

ಸರ್ಬಿಯಾದ ತಾರೆ ಇಲ್ಲಿ 11ನೇ ಬಾರಿ ಚಾಂಪಿಯನ್ ಆಗುವ ಪ್ರಯತ್ನದಲ್ಲಿದ್ದಾರೆ. ಈ ಬಾರಿ ಗೆದ್ದರೆ ಅದು 37 ವರ್ಷ ವಯಸ್ಸಿ ದಿಗ್ಗಜ ಆಟಗಾರನಿಗೆ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಕಿರೀಟವೂ ಆಗಲಿದೆ. ಅವರು ಮುಂದಿನ ಸುತ್ತಿನಲ್ಲಿ 26ನೇ ಶ್ರೇಯಾಂಕದ ಥಾಮಸ್ ಮಚಾಕ್ (ಝೆಕ್‌ ರಿಪಬ್ಲಿಕ್‌) ಅವರನ್ನು ಎದುರಿಸಲಿದ್ದಾರೆ.

ಮೂರನೇ ಶ್ರೇಯಾಂಕದ ಅಲ್ಕರಾಜ್ 6–0, 6–1, 6–4 ರಿಂದ ಜಪಾನ್‌ನ ಯೋಶಿಹಿಟೊ ನಿಶಿಯೊಕ ಅವರನ್ನು ಸದೆಬಡಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ ಐದನೇ ಪ್ರಶಸ್ತಿಯ ಬೆನ್ನತ್ತಿರುವ ಸ್ಪೇನ್‌ನ ಆಟಗಾರ, ಮೆಲ್ಬರ್ನ್‌ನಲ್ಲಿ ಎಂಟರ ಘಟ್ಟ ದಾಟಿಲ್ಲ.

ಎರಡನೇ ಶ್ರೇಯಾಂಕದ ಅಲೆ ಕ್ಸಾಂಡರ್‌ ಜ್ವರೇವ್ ನೇರ ಸೆಟ್‌ಗಳಿಂದ ಸ್ಪೇನ್‌ನ ಪೆಡ್ರೊ ಮಾರ್ಟಿನೆಝ್ ಅವರನ್ನು ಮಣಿಸಿದರು.

ರುಡ್‌ ನಿರ್ಗಮನ:

19 ವರ್ಷ ವಯಸ್ಸಿನ ಯಾಕುಬ್ ಮೆನ್ಸಿಕ್ ಎರಡನೇ ಸುತ್ತಿನ ಪಂದ್ಯದಲ್ಲಿ 6–2, 3–6,6–4, 6–4ರಿಂದ ರುಡ್‌ ಅವರನ್ನು ಹೊರದೂಡಿದರು. ಬ್ರೆಜಿಲಿನ ಯುವ ಆಟಗಾರ ಜೊವೊ ಫೋನ್ಸೆಕಾ ಇನ್ನೊಬ್ಬ ಶ್ರೇಯಾಂಕ ಆಟಗಾರ ಆಂದ್ರೆ ರುಬ್ಲೆವ್ ಅವರನ್ನು ಸೋಲಿಸಿ ಹೊಸಬರ ಆಗಮನ ಸಾರಿದ್ದರು.

ಝೆಂಗ್‌ಗೆ ಸೋಲು:

ಒಲಿಂಪಿಕ್ ಚಾಂಪಿಯನ್ ಝೆಂಗ್‌ ಅವರನ್ನು ವಿಶ್ವ ಕ್ರಮಾಂಕದಲ್ಲಿ 97ನೇ ಸ್ಥಾನದಲ್ಲಿರುವ ಜರ್ಮನಿಯ ಲಾರಾ ಸೀಜಿಮಂಡ್‌ 7–6  (7–3), 6–3 ರಿಂದ ಸೋಲಿಸಿದರು. ಲಾರಾ ಅವರು ಸಿಂಗಲ್ಸ್‌ನಲ್ಲಿ ಆಡುತ್ತಿರುವ ಎರಡನೇ ಅತಿ ಹಿರಿಯ ಆಟಗಾರ್ತಿ.

ಸಬಲೆಂಕಾ 6–3, 7–5 ರಿಂದ ಸ್ಪೇನ್‌ನ ಜೆಸಿಕಾ ಮನೀರೊ ವಿರುದ್ಧ ಜಯಗಳಿಸಿದರೆ, ಜಪಾನ್‌ನ ನವೊಮಿ ಒಸಾಕಾ 1–6, 6–1, 6–3 ರಿಂದ ಕರೊಲಿನಾ ಮುಚೊವಾ ಅವರನ್ನು ಹಿಮ್ಮೆಟ್ಟಿಸಿದರು. ಈ ಋತುವಿನಲ್ಲಿ ಅಮೋಘವಾಗಿ ಆಡುತ್ತಿರುವ, ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಕೊಕೊ ಗಾಫ್‌ 6–3, 7–5 ರಿಂದ ಬ್ರಿಟನ್‌ನ ಜೋಡಿ ಬುರಗೆ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ದಾಪುಗಾಲಿಟ್ಟರು.

ಯುಕಿ– ಒಲಿವೆಟ್ಟಿ ಜೋಡಿಗೆ ಸೋಲು

ಮೆಲ್ಬರ್ನ್: ಭಾರತದ ಯುಕಿ ಭಾಂಬ್ರಿ ಮತ್ತು ಅವರ ಫ್ರೆಂಚ್‌ ಜೊತೆಗಾರ ಆಲ್ಬನೊ ಒಲಿವೆಟ್ಟಿ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಆತಿಥೇಯ ಆಸ್ಟ್ರೇಲಿಯಾದ ಟ್ರಿಸ್ಟನ್ ಸ್ಕೂಲ್ಕೇಟ್‌– ಆ್ಯಡಂ ವಾಲ್ಟನ್ ಜೋಡಿ 6–2, 7–6 ರಿಂದ ಇಂಡೊ–ಫ್ರೆಂಚ್‌ ಜೋಡಿಯನ್ನು ಸೋಲಿಸಿದರು.

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ರೋಹನ್ ಬೋಪಣ್ಣ– ಕೊಲಂಬಿಯಾದ ನಿಕೊಲಸ್‌ ಬೇರಿನ್‌ಟೋಸ್‌ ಮಂಗಳವಾರ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.