ADVERTISEMENT

PV Web Exclusive: ಅಮೆರಿಕ ಓಪನ್‌ನ ಹೊಸ ಅಧಿಪತಿ ಡಾಮಿನಿಕ್‌ ಥೀಮ್

ಜಿ.ಶಿವಕುಮಾರ
Published 21 ಸೆಪ್ಟೆಂಬರ್ 2020, 4:36 IST
Last Updated 21 ಸೆಪ್ಟೆಂಬರ್ 2020, 4:36 IST
ಡಾಮಿನಿಕ್‌ ಥೀಮ್‌ ಆಟದ ವೈಖರಿ –ಎಎಫ್‌ಪಿ ಚಿತ್ರ 
ಡಾಮಿನಿಕ್‌ ಥೀಮ್‌ ಆಟದ ವೈಖರಿ –ಎಎಫ್‌ಪಿ ಚಿತ್ರ    

‘ನನ್ನಂತೆ ಆತನೂ ಮೂರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿಯ ಸನಿಹದಲ್ಲಿ ಎಡವಿದ್ದ. ಹೀಗಿದ್ದರೂ ಎಳ್ಳಷ್ಟೂ ಎದೆಗುಂದದೆ ಗುರಿ ಸಾಧನೆಗಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದ. ಈ ಪ್ರಶಸ್ತಿಗೆ ಆತ ನಿಜಕ್ಕೂ ಅರ್ಹ’......

ಸರಿಯಾಗಿ ಎಂಟು ದಿನಗಳ ಹಿಂದೆ (ಸೆ.14) ನ್ಯೂಯಾರ್ಕ್‌ ನಗರದ ಆರ್ಥರ್‌ ಆ್ಯಶ್‌ ಅಂಗಳದಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್,‌ ಅಮೆರಿಕ ಓಪನ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆಗ ರುಮೇನಿಯಾದ ಟೆನಿಸ್‌ ತಾರೆ ಸಿಮೊನಾ ಹಲೆಪ್‌ ಆಡಿದ್ದ ಮಾತುಗಳಿವು.

ಬಿಲ್ಲಿ ಜೀನ್‌ ಕಿಂಗ್‌ ರಾಷ್ಟ್ರೀಯ ಟೆನಿಸ್‌ ಕೇಂದ್ರದಲ್ಲಿ ನಡೆದ ಫೈನಲ್‌ ಹಣಾಹಣಿಯ ಆರಂಭದ ಎರಡು ಸೆಟ್‌ಗಳಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮೇಲುಗೈ ಸಾಧಿಸಿದ್ದಾಗ, ಥೀಮ್‌ ಕಥೆ ಮುಗಿಯಿತೆಂದೇ ಅನೇಕರು ಷರಾ ಬರೆದುಬಿಟ್ಟಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಆಸ್ಟ್ರಿಯಾದ 27ರ ಹರೆಯದ ಆ ಯುವಕ, ಜ್ವೆರೆವ್‌ ಆರ್ಭಟ ಕಂಡು ಕಿಂಚಿತ್ತೂ ಅಂಜಲಿಲ್ಲ. ಎದುರಾಳಿಯನ್ನು ಹಣಿಯಲು ಸಾವಧಾನದಿಂದಲೇ ರಣತಂತ್ರ ರೂಪಿಸಿದ ಥೀಮ್‌, ನಂತರದ ಮೂರು ಸೆಟ್‌ಗಳಲ್ಲಿ ಗರ್ಜಿಸಿ ಅಮೆರಿಕ ಓಪನ್‌ನ ‘ಅಧಿಪತಿ’ಯಾಗಿ ಹೊರಹೊಮ್ಮಿದರು. ನಾಲ್ಕು ಗಂಟೆ ಎರಡು ನಿಮಿಷಗಳ ಆ ರೋಚಕ ಹೋರಾಟದಲ್ಲಿ ಗೆದ್ದು ಹೊಸ ಮೈಲುಗಲ್ಲನ್ನೂ ಸ್ಥಾಪಿಸಿದರು.

ADVERTISEMENT

ಡಾಮಿನಿಕ್‌ ಅವರದ್ದು ಅಪ್ಪಟ ಕ್ರೀಡಾ ಕುಟುಂಬ. ಅಪ್ಪ ವೂಲ್ಸ್‌ಗ್ಯಾಂಗ್ ಥೀಮ್‌‌. ಅಮ್ಮನ ಹೆಸರು ಕ್ಯಾರಿನ್‌‌. ಇಬ್ಬರೂ ಟೆನಿಸ್‌ ಕೋಚ್‌ಗಳು. ಕಿರಿಯ ಸಹೋದರ ಮೋರಿಚ್‌ ಕೂಡ ಟೆನಿಸ್‌ ಪ್ರತಿಭೆ.

ಆರನೆವಯಸ್ಸಿನಲ್ಲೇ ಟೆನಿಸ್‌ ರ‍್ಯಾಕೆಟ್‌ ಹಿಡಿದ ಡಾಮಿನಿಕ್‌ಗೆ ತಂದೆಯೇ ಮೊದಲ ಗುರು. ವಿಯೆನ್ನಾದಲ್ಲಿರುವ ಗುಂಟರ್‌ ಬ್ರೆಸ್ನಿಕ್‌ ಅಕಾಡೆಮಿಯಲ್ಲಿ ಕೋಚ್‌ ಆಗಿ ಕೆಲಸ ಮಾಡುತ್ತಿದ್ದ ವೂಲ್ಸ್‌ಗ್ಯಾಂಗ್, ಅಲ್ಲಿ‌ಯೇ ಮಗನಿಗೆ‌ ಟೆನಿಸ್‌ ಪಾಠ ಹೇಳಿಕೊಡುತ್ತಿದ್ದರು. ಡಾಮಿನಿಕ್‌‌ ಪ್ರತಿಭೆಯನ್ನು ಕಂಡ ಗುಂಟರ್,‌ ಬಳಿಕ ತಾವೇ ಆತನಿಗೆ ಟೆನಿಸ್‌ ಪಟ್ಟುಗಳನ್ನು ಕಲಿಸಲು ನಿರ್ಧರಿಸಿದರು.

ಗುಂಟರ್‌ ಗರಡಿಯಲ್ಲಿ ಪಳಗಿದ ಡಾಮಿನಿಕ್‌, 2011ರಲ್ಲಿ ಎಟಿಪಿ ಟೂರ್‌ಗೆ ಅಡಿಯಿಟ್ಟರು. ಆ ವರ್ಷ ಕಿಟ್ಜ್‌ಬುಹೆಲ್‌ ಟೂರ್ನಿಗೆ ‘ವೈಲ್ಡ್‌ ಕಾರ್ಡ್‌’ ಅರ್ಹತೆ ಗಳಿಸಿದ್ದ ಅವರು ಡೇನಿಯಲ್‌ ಗಿಮೆನೊ ಟ್ರೇವರ್‌ ಎದುರಿನ ಮೊದಲ ಸುತ್ತಿನ ಹಣಾಹಣಿಯಲ್ಲೇ ಮುಗ್ಗರಿಸಿದ್ದರು. ಬಳಿಕ ಹಂತ ಹಂತವಾಗಿ ಆಟದಲ್ಲಿ ಪಕ್ವತೆ ಸಾಧಿಸುತ್ತಾ ಸಾಗಿದ ಅವರು 2014ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುವ ಮೂಲಕ ಗ್ರ್ಯಾನ್‌ಸ್ಲಾಮ್‌ಗೆ ಪಾದಾರ್ಪಣೆ ಮಾಡಿದರು. ಆ ಟೂರ್ನಿಯ ಎರಡನೇ ಸುತ್ತಿನಲ್ಲಿ ಕೆವಿನ್‌ ಆ್ಯಂಡರ್‌ಸನ್‌ ಎದುರು ಸೋತರು. ಆದರೆ ವರ್ಷಾಂತ್ಯದಲ್ಲಿ ನಡೆದ ಕಿಟ್ಜ್‌ಬುಹೆಲ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಸಾಧನೆ ಮಾಡಿ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ 50ರೊಳಗೆ ಸ್ಥಾನ ಗಳಿಸಿದ್ದು ಅವರ ಛಲಕ್ಕೆ ಸಾಕ್ಷಿ.

ಮರು ವರ್ಷ (2015) ಮೂರು ಎಟಿಪಿ ಟೂರ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದರು. ಅದರೊಂದಿಗೆ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರೊಳಗೆ ಸ್ಥಾನ ಪಡೆದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಭಾಜನರಾದರು. 2016ರಲ್ಲೂ ಡಾಮಿನಿಕ್‌ ಅಬ್ಬರ ಜೋರಾಗಿಯೇ ಇತ್ತು. ಬ್ಯೂನಸ್‌ ಐರಿಸ್‌, ಅಕಾಪುಲ್ಕೊ, ನೈಸ್‌ ಹಾಗೂ ಸ್ಟಟ್‌‌ಗರ್ಟ್‌ ಟೂರ್ನಿಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡು ಮೊದಲ ಬಾರಿಗೆ ಎಟಿಪಿ ಫೈನಲ್ಸ್‌ಗೆ‌ ಅರ್ಹತೆ ಗಿಟ್ಟಿಸಿದರು.

ಮಣ್ಣಿನಂಕಣದ ಕಲಿ: ಗಟ್ಟಿ ಮಣ್ಣಿನಂಕಣದಲ್ಲಿ (ಕ್ಲೇ ಕೋರ್ಟ್‌) ಅಬ್ಬರದ ಆಟ ಆಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಬಲ್ಲ ಚಾಣಾಕ್ಷ ಆಟಗಾರ ಥೀಮ್‌. ಒತ್ತಡದ ಸನ್ನಿವೇಶದಲ್ಲಿ ದಿಟ್ಟ ಆಟ ಆಡುವ ಕಲೆಯನ್ನೂ ಚೆನ್ನಾಗಿಯೇ ಕರಗತಮಾಡಿಕೊಂಡಿದ್ದಾರೆ.

2018 ಮತ್ತು 2019ರ ಫ್ರೆಂಚ್‌ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ರಫೆಲ್‌ ನಡಾಲ್‌ ಎದುರು ಎಡವಿದರೂ ಅವರು ಛಲಬಿಡಲಿಲ್ಲ.2019ರಇಂಡಿಯನ್‌ ವೆಲ್ಸ್‌ ಟೂರ್ನಿಯ ಫೈನಲ್‌ನಲ್ಲಿ ರೋಜರ್‌ ಫೆಡರರ್‌ಗೆ ಸೋಲುಣಿಸಿ, ಭವಿಷ್ಯದಲ್ಲಿ ತಾನು ಟೆನಿಸ್‌ ಲೋಕವನ್ನು ಆಳಬಲ್ಲೆ, ಆ ಕಸುವು ತನ್ನಲ್ಲಿದೆ ಎಂಬ ಸಂದೇಶ ರವಾನಿಸಿದ್ದರು. ಈ ವರ್ಷದ ಆರಂಭದಲ್ಲಾದರೂಅವರ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಕನಸು ಕೈಗೂಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದೂ ಹುಸಿಯಾಯಿತು. ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಅವರು ನೊವಾಕ್‌ ಜೊಕೊವಿಚ್‌ ವಿರುದ್ಧ ಶರಣಾದರು.

ಹೊಸ ತಲೆಮಾರಿನ ಆಟಗಾರರ ಪೈಕಿ ಹೆಚ್ಚು ಆಕ್ರಮಣಕಾರಿಯಾಗಿ ಆಡಬಲ್ಲ ಸಾಮರ್ಥ್ಯ ಹೊಂದಿರುವ ಪ್ರತಿಭೆ ಥೀಮ್. ಸಿಂಗಲ್‌ ಹ್ಯಾಂಡ್‌ ಬ್ಯಾಕ್‌ಹ್ಯಾಂಡ್ ಮೂಲಕ ಎದುರಾಳಿಯ ಆವರಣಕ್ಕೆ ಲೀಲಾಜಾಲವಾಗಿ ಚೆಂಡು ಅಟ್ಟಬಲ್ಲರು.ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಎದುರಾಳಿಗಳನ್ನು ಕಂಗೆಡಿಸಿ ಪಾಯಿಂಟ್ಸ್‌ ಕಲೆಹಾಕಬಲ್ಲ ಚತುರತೆಯೂ ಅವರಲ್ಲಿದೆ.

‘ಬಿಗ್‌ ತ್ರಿ’ಗೆ ಶಾಕ್‌: ಸದ್ಯ ಟೆನಿಸ್‌ ಲೋಕವನ್ನು ಆಳುತ್ತಿರುವವರು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌. ‘ಬಿಗ್‌ ತ್ರಿ’ ಎಂದೇ ಗುರುತಿಸಿಕೊಂಡಿರುವ ಈ ದಿಗ್ಗಜರಿಗೆ ಸರಿಸಾಟಿಯಾಗಬಲ್ಲ ಸಾಮರ್ಥ್ಯವಿರುವುದು ಆರಡಿ ಎತ್ತರದ ಥೀಮ್‌ಗೆ ಮಾತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ಅದಕ್ಕೆ ಕಾರಣ ಹೋದ ವರ್ಷದ ಫಲಿತಾಂಶಗಳು. 2019ರಲ್ಲಿ ಎಟಿಪಿ ಟೂರ್‌ ಆರಂಭವಾದ ನಂತರ ಈ ತ್ರಿವಳಿಗಳ ಎದುರು ಒಟ್ಟು ಹತ್ತು ಪಂದ್ಯಗಳನ್ನು ಆಡಿದ್ದ ಥೀಮ್,‌ ಈ ಪೈಕಿ ಏಳರಲ್ಲಿ ಗೆದ್ದಿದ್ದರು. ಫೆಡರರ್‌ ಎದುರಿನ ಮೂರೂ ಹಣಾಹಣಿಗಳಲ್ಲೂ ಪ್ರಾಬಲ್ಯ ಮೆರೆದಿದ್ದರು.

ಫುಟ್‌ಬಾಲ್‌ ಪ್ರೀತಿ: ಥೀಮ್ ಅವರು‌ ಟೆನಿಸ್‌ ಅಂಗಳದಲ್ಲಷ್ಟೇ ಅಲ್ಲ ಫುಟ್‌ಬಾಲ್‌ ಮೈದಾನದಲ್ಲೂ ಚಾಕಚಕ್ಯತೆ ತೋರಬಲ್ಲರು. ಅವರು ಚೆಲ್ಸಿ ಎಫ್‌ಸಿ ತಂಡದ ಬಹುದೊಡ್ಡ ಅಭಿಮಾನಿ. 2015ರಲ್ಲಿ ಸ್ಟ್ಯಾಮ್‌ಫೋರ್ಡ್‌ ಬ್ರಿಡ್ಜ್‌ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತು ಚೆಲ್ಸಿ ತಂಡದ ಪಂದ್ಯ ವೀಕ್ಷಿಸಿದ್ದರು.

ಟಿಎಫ್‌ಸಿ ಮ್ಯಾಟ್ಜೆಂಡೊರ್ಫ್‌ ಫುಟ್‌ಬಾಲ್‌ ಕ್ಲಬ್‌ ಸ್ಥಾಪಿಸಿರುವ ಥೀಮ್‌‌, 2018ರಲ್ಲಿ ಸ್ಲೊವೇನಿಯಾದಲ್ಲಿ ಆಯೋಜನೆಯಾಗಿದ್ದ ಫುಟ್‌ಬಾಲ್‌ ಪಂದ್ಯದಲ್ಲಿ ಈ ತಂಡದ ಪರ ಕಣಕ್ಕಿಳಿದು ಕಾಲ್ಚಳಕ ತೋರಿದ್ದರು. ಪರಿಸರ ಸಂರಕ್ಷಣೆಯ ಬಗ್ಗೆ ಅವರು ಹೊಂದಿರುವ ಕಾಳಜಿ ಇತರರಿಗೂ ಸ್ಫೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.