ADVERTISEMENT

ಬೆಂಗಳೂರು ಓಪನ್‌ ಟೆನಿಸ್‌: ತವರಲ್ಲಿ ಪೇಸ್‌ ಪಯಣ ಅಂತ್ಯ

ಫೈನಲ್‌ನಲ್ಲಿ ಎಡವಿದ ಭಾರತ–ಆಸ್ಟ್ರೇಲಿಯಾ ಜೋಡಿ; ಪುರವ–ರಾಮಕುಮಾರ್‌ಗೆ ಗರಿ

ಜಿ.ಶಿವಕುಮಾರ
Published 15 ಫೆಬ್ರುವರಿ 2020, 19:45 IST
Last Updated 15 ಫೆಬ್ರುವರಿ 2020, 19:45 IST
ಪುರುಷರ ಡಬಲ್ಸ್‌ನಲ್ಲಿ ರನ್ನರ್ಸ್‌ ಅಪ್‌ ಆದ (ಎಡದಿಂದ) ಮ್ಯಾಥ್ಯೂ ಎಬ್ಡೆನ್‌ ಮತ್ತು ಲಿಯಾಂಡರ್‌ ಪೇಸ್‌, ಪ್ರಶಸ್ತಿ ಜಯಿಸಿದ ರಾಮಕುಮಾರ್‌ ರಾಮನಾಥನ್‌ ಹಾಗೂ ಪುರವ ರಾಜ ಅವರು ಟ್ರೋಫಿಯೊಂದಿಗೆ –ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌
ಪುರುಷರ ಡಬಲ್ಸ್‌ನಲ್ಲಿ ರನ್ನರ್ಸ್‌ ಅಪ್‌ ಆದ (ಎಡದಿಂದ) ಮ್ಯಾಥ್ಯೂ ಎಬ್ಡೆನ್‌ ಮತ್ತು ಲಿಯಾಂಡರ್‌ ಪೇಸ್‌, ಪ್ರಶಸ್ತಿ ಜಯಿಸಿದ ರಾಮಕುಮಾರ್‌ ರಾಮನಾಥನ್‌ ಹಾಗೂ ಪುರವ ರಾಜ ಅವರು ಟ್ರೋಫಿಯೊಂದಿಗೆ –ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌   

ಬೆಂಗಳೂರು: ಮಾಂತ್ರಿಕ ಆಟದ ಮೂಲಕ ಸತತ ಮೂರು ದಿನ ‘ಸಿಲಿಕಾನ್‌ ಸಿಟಿ’ಯ ಟೆನಿಸ್‌ ಪ್ರಿಯರನ್ನು ಖುಷಿಯ ಕಡಲಲ್ಲಿ ತೇಲಿಸಿದ್ದ ಲಿಯಾಂಡರ್‌ ಪೇಸ್‌, ಶನಿವಾರ ಸಂಪೂರ್ಣವಾಗಿ ಮಂಕಾದರು.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ತವರಿನಲ್ಲಿ ಟೆನಿಸ್‌ ಪಯಣ ಅಂತ್ಯಗೊಳಿಸುವ ಅವರ ಕನಸು ಕೂಡ ಕಮರಿತು.

46 ವರ್ಷ ವಯಸ್ಸಿನ ಪೇಸ್‌, ಭಾರತದಲ್ಲಿ ಆಡಿದ ಕೊನೆಯ ಟೂರ್ನಿ ಇದಾಗಿತ್ತು. ಹೀಗಾಗಿ ಅವರ ಆಟ ಕಣ್ತುಂಬಿಕೊಳ್ಳಲು ಕಬ್ಬನ್‌ ಉದ್ಯಾನದಲ್ಲಿರುವ ಕೆಎಸ್‌ಎಲ್‌ಟಿಎ ಅಂಗಳಕ್ಕೆ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಕಿರಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪೇಸ್‌ ಗೆಲುವನ್ನೇ ಎದುರು ನೋಡುತ್ತಿದ್ದರು. ಅವರೆಲ್ಲರಿಗೆ ಕೊನೆಯಲ್ಲಿ ನಿರಾಸೆ ಕಾಡಿತು.

ADVERTISEMENT

ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡಿದ ಪೇಸ್‌ ಫೈನಲ್‌ನಲ್ಲಿ 0–6, 3–6ರಲ್ಲಿ ಭಾರತದ ರಾಮಕುಮಾರ್‌ ರಾಮನಾಥನ್‌ ಮತ್ತು ಪುರವ ರಾಜ ವಿರುದ್ಧ ಸುಲಭವಾಗಿ ಸೋತರು. ಈ ಹೋರಾಟ 55 ನಿಮಿಷಗಳಲ್ಲೇ ಅಂತ್ಯವಾಯಿತು.

ಮೊದಲ ಸೆಟ್‌ನಲ್ಲಿ ಪೇಸ್‌ ಮತ್ತು ಮ್ಯಾಥ್ಯೂ ಅನೇಕ ತಪ್ಪುಗಳನ್ನು ಮಾಡಿದರು. ಪಂದ್ಯದ ಮೊದಲ ಸರ್ವ್‌ ಮಾಡಿದ ರಾಮಕುಮಾರ್‌ ಆರಂಭದಲ್ಲೇ ‘ಡಬಲ್‌ ಫಾಲ್ಟ್‌’ ಎಸಗಿದರು. ಹೀಗಾಗಿ ಪೇಸ್‌ ಮತ್ತು ಮ್ಯಾಥ್ಯೂ ಖಾತೆಗೆ 15 ಪಾಯಿಂಟ್ಸ್‌ ಸೇರ್ಪಡೆಯಾಯಿತು. ಆದರೆ ನಂತರ ರಾಮಕುಮಾರ್‌ ರ‍್ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಮಿಂಚಿನ ಸರ್ವ್‌ಗಳನ್ನು ಹಿಂತಿರುಗಿಸಲು ಭಾರತ ಮತ್ತು ಆಸ್ಟ್ರೇಲಿಯಾದ ಜೋಡಿ ಪರದಾಡಿತು.

ಎರಡನೇ ಗೇಮ್‌ನಲ್ಲಿ ಎಬ್ಡೆನ್‌ ಎರಡು ಬಾರಿ ‘ಡಬಲ್‌ ಫಾಲ್ಟ್‌’ ಮಾಡಿ ಸರ್ವ್‌ ಬಿಟ್ಟುಕೊಟ್ಟರು. ನಾಲ್ಕನೇ ಗೇಮ್‌ನಲ್ಲಿ ಪೇಸ್‌ ಸರ್ವ್‌ ಮುರಿದ ರಾಮಕುಮಾರ್‌ ಮತ್ತು ಪುರವ 4–0 ಮುನ್ನಡೆ ಪಡೆದು ಸೆಟ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು.

ನಂತರದ ಗೇಮ್‌ನಲ್ಲಿ ರಾಮಕುಮಾರ್‌ ಸರ್ವ್‌ ಮುರಿಯುವ ಮತ್ತೊಂದು ಅವಕಾಶವನ್ನೂ ಪೇಸ್‌ ಜೋಡಿ ಹಾಳುಮಾಡಿತು. ಎಂಟನೇ ಗೇಮ್‌ನಲ್ಲಿ ಮ್ಯಾಥ್ಯೂ ಅವರಿಂದ ಮತ್ತವೇ ತಪ್ಪುಗಳು ಮರುಕಳಿಸಿದವು. ಸರ್ವ್‌ ಮಾಡುವ ವೇಳೆ ಚೆಂಡನ್ನು ಪದೇ ಪದೇ ನೆಟ್‌ಗೆ ಬಾರಿಸಿದ ಅವರು ಗೇಮ್‌ ಕೈಚೆಲ್ಲಿದರು. ಹೀಗಾಗಿ ಕೇವಲ 21 ನಿಮಿಷಗಳಲ್ಲಿ ಮೊದಲ ಸೆಟ್‌ ಮುಗಿಯಿತು.

ಎರಡನೇ ಸೆಟ್‌ನಲ್ಲಿ ಪೇಸ್‌ ಮತ್ತು ಮ್ಯಾಥ್ಯೂ ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಸುಳ್ಳಾಯಿತು. ಎರಡನೇ ಗೇಮ್‌ನಲ್ಲೇ ಸರ್ವ್‌ ಕಳೆದುಕೊಂಡ ಈ ಜೋಡಿ 0–2 ಹಿನ್ನಡೆ ಕಂಡಿತು. ಹಿಂದಿನ ಮೂರು ಪಂದ್ಯಗಳಲ್ಲಿ ಉತ್ಸಾಹದ ಚಿಲುಮೆಯಂತೆ ಆಡಿದ್ದ ಪೇಸ್‌ ಮತ್ತು ‍ಮ್ಯಾಥ್ಯೂ ಕೊನೆಯಲ್ಲಿ ಎದುರಾಳಿಗಳಿಗೆ ಅಲ್ಪ ಪ್ರತಿರೋಧ ಒಡ್ಡಿದರು. ಅಷ್ಟರಲ್ಲಾಗಲೇ ಅವರ ಪ್ರಶಸ್ತಿಯ ಹಾದಿ ಮುಚ್ಚಿತ್ತು. ಗಂಟೆಗೆ 220, 230 ಕಿಲೊ ಮೀಟರ್ಸ್‌ ವೇಗದಲ್ಲಿ ಸರ್ವ್‌ಗಳನ್ನು ಮಾಡಿದ 25ರ ಹರೆಯದ ರಾಮಕುಮಾರ್‌ ಮತ್ತು ನೆಟ್‌ನ ಸಮೀಪದಲ್ಲಿ ಚುರುಕಾಗಿ ಓಡಾಡುತ್ತಾ ಆಕರ್ಷಕ ಡ್ರಾಪ್‌ಗಳನ್ನು ಮಾಡುತ್ತಿದ್ದ 34 ವರ್ಷ ವಯಸ್ಸಿನ ಪುರವ ರಾಜ ಅವರ ಆಟ ಅಭಿಮಾನಿಗಳ ಮನ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.