ADVERTISEMENT

ಓಪನ್‌ ಎಟಿ‍‍ಪಿ ಚಾಲೆಂಜರ್‌ ಟೆನಿಸ್‌: ಸಾಕೇತ್‌–ಪ್ರಜ್ಞೇಶ್‌ ಫೈನಲ್‌ ‘ಫೈಟ್‌’

ಅಲೆಕ್ಸಾಂಡರ್‌ಗೆ ನಿರಾಸೆ

ಜಿ.ಶಿವಕುಮಾರ
Published 16 ನವೆಂಬರ್ 2018, 20:14 IST
Last Updated 16 ನವೆಂಬರ್ 2018, 20:14 IST
ಭಾರತದ ಸಾಕೇತ್‌ ಮೈನೇನಿ ಚೆಂಡನ್ನು ಹಿಂದಿರುಗಿಸಿದ ರೀತಿ -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.(ಎಡ ಬದಿ), ಬ್ರೇಡನ್‌ ಶುನರ್‌ ಎದುರಿನ ಪಂದ್ಯದಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ
ಭಾರತದ ಸಾಕೇತ್‌ ಮೈನೇನಿ ಚೆಂಡನ್ನು ಹಿಂದಿರುಗಿಸಿದ ರೀತಿ -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.(ಎಡ ಬದಿ), ಬ್ರೇಡನ್‌ ಶುನರ್‌ ಎದುರಿನ ಪಂದ್ಯದಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ    

ಬೆಂಗಳೂರು: ಭಾರತದ ಸಾಕೇತ್‌ ಮೈನೇನಿ ಮತ್ತು ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಈ ಬಾರಿಯ ಬೆಂಗಳೂರು ಓಪನ್‌ ಎ‍ಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಬಲಿಷ್ಠರ ನಡುವಣ ಈ ಹೋರಾಟದಲ್ಲಿ ಗೆಲುವಿನ ಸಿಹಿ ಸವಿಯುವವರು ಯಾರು ಎಂಬ ಕುತೂಹಲ ಈಗ ಗರಿಗೆದರಿದೆ.

ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸಾಕೇತ್‌ 4–6, 6–4, 6–4ರಲ್ಲಿ ಕಜಕಸ್ತಾನದ ಅಲೆಕ್ಸಾಂಡರ್‌ ನೆಡೊವ್ಯೆಸೋವ್‌ ಅವರ ಸದ್ದಡಗಿಸಿದರು.

ಆರಂಭದಲ್ಲಿ ಹಿನ್ನಡೆ ಕಂಡರೂ ಛಲ ಬಿಡದ ಸಾಕೇತ್, ದಿಟ್ಟತನದಿಂದ ಹೋರಾಡಿ ಸೆಂಟರ್‌ ಕೋರ್ಟ್‌ನಲ್ಲಿ ಸೇರಿದ್ದ ಅಭಿಮಾನಿಗಳ ಮನಗೆದ್ದರು.

ADVERTISEMENT

ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲೇ ‘ಏಸ್‌’ ಸಿಡಿಸಿದ ಭಾರತದ ಆಟಗಾರ 1–0 ಮುನ್ನಡೆ ಗಳಿಸಿದರು. ನಂತರ ಉಭಯ ಆಟಗಾರರು ಸರ್ವ್‌ ಉಳಿಸಿಕೊಂಡು ಸಾಗಿದ್ದರಿಂದ 2–2 ಸಮಬಲ ಕಂಡುಬಂತು. ಐದನೇ ಗೇಮ್‌ನಲ್ಲಿ ‘ಡಬಲ್‌ ಫಾಲ್ಟ್‌’ ಎಸಗಿದ್ದು ಸಾಕೇತ್‌ಗೆ ಮುಳುವಾಯಿತು. 2–3ರ ಹಿನ್ನಡೆ ಕಂಡ ಭಾರತದ ಆಟಗಾರ ನಂತರ ಮಂಕಾದರು.

ಆರಂಭಿಕ ನಿರಾಸೆಯಿಂದ ವಿಶ್ವಾಸ ಕಳೆದುಕೊಳ್ಳದ ಸಾಕೇತ್‌, ಎರಡನೇ ಸೆಟ್‌ನಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದರು. ಮೂರು ಗೇಮ್‌ಗಳ ಆಟ ಮುಗಿದಾಗ 1–2ರಿಂದ ಹಿಂದಿದ್ದ ಅವರು ಆರನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು 3–3ರಲ್ಲಿ ಸಮಬಲ ಸಾಧಿಸಿದರು. ನಂತರ ಆಕರ್ಷಕ ‘ಬೇಸ್‌ಲೈನ್‌’ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಗೇಮ್‌ ಜಯಿಸಿ 5–4 ರ ಮುನ್ನಡೆ ಪಡೆದರು. 10ನೇ ಗೇಮ್‌ನ ಸಾಕೇತ್‌ ಅಬ್ಬರಿಸಿದರು. ಬಲಿಷ್ಠ ಹಿಂಗೈ ಹೊಡೆತಗಳನ್ನು ಬಾರಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಹೀಗಾಗಿ ಮೂರನೇ ಸೆಟ್‌ ಉಭಯ ಆಟಗಾರರ ಪಾಲಿಗೂ ಮಹತ್ವದ್ದೆನಿಸಿತ್ತು. ಸೆಟ್‌ನ ಆರಂಭದಲ್ಲಿ ಸಾಕೇತ್‌ ಮೋಡಿ ಮಾಡಿದರು. ಸತತ ಐದು ಗೇಮ್‌ಗಳನ್ನು ಗೆದ್ದ ಅವರು ಬಳಿಕ ‘ಮ್ಯಾಚ್‌ ಪಾಯಿಂಟ್‌’ ಕಲೆಹಾಕಲು ಪರದಾಡಿದರು!

0–5ರಿಂದ ಹಿನ್ನಡೆ ಕಂಡರೂ ಎದೆಗುಂದದ ಅಲೆಕ್ಸಾಂಡರ್‌ ಸತತ ನಾಲ್ಕು ಗೇಮ್‌ ಜಯಿಸಿ ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು. ಆದರೆ ಸಾಕೇತ್‌ ಇದಕ್ಕೆ ಅವಕಾಶ ನೀಡಲಿಲ್ಲ. 10ನೇ ಗೇಮ್‌ನಲ್ಲಿ ಮಿಂಚಿನ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯ ಸರ್ವ್‌ ಮುರಿದ ಅವರು ಕ್ರೀಡಾಂಗಣದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಪ್ರಜ್ಞೇಶ್‌ಗೆ ಶರಣಾದ ಶುನರ್‌: ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಪ್ರಜ್ಞೇಶ್‌ 6–4, 6–1 ನೇರ ಸೆಟ್‌ಗಳಿಂದ ಕೆನಡಾದ ಬ್ರೇಡನ್‌ ಶುನರ್‌ಗೆ ಸೋಲುಣಿಸಿದರು.

ಆರಂಭಿಕ ಸೆಟ್‌ನ ಮೊದಲ ಗೇಮ್‌ನಲ್ಲೇ ಬ್ರೇಕ್‌ ಪಾಯಿಂಟ್‌ ಗಳಿಸಿದ ಎಡಗೈ ಆಟಗಾರ ಪ್ರಜ್ಞೇಶ್‌ 1–0 ಮುನ್ನಡೆ ಪಡೆದರು. ನಂತರ ದೀರ್ಘ ರ‍್ಯಾಲಿಗಳನ್ನು ಆಡಿದ ಅವರು ಮುನ್ನಡೆಯನ್ನು 4–2ಕ್ಕೆ ಹೆಚ್ಚಿಸಿಕೊಂಡು ಸೆಟ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು. ನಂತರವೂ ತುಂಬು ವಿಶ್ವಾಸದಿಂದ ಹೋರಾಡಿದ ಭಾರತದ ಆಟಗಾರ 32ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸೆಟ್‌ನ ಮೊದಲ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಪ್ರಜ್ಞೇಶ್‌, ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದರು. ಮೂರನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಶುನರ್‌ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡರು. ನಂತರ ‍ಪ್ರಜ್ಞೇಶ್‌ ಪಾರಮ್ಯ ಮೆರೆದರು. ಸತತ ನಾಲ್ಕು ಗೇಮ್‌ ಜಯಿಸಿದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.