ADVERTISEMENT

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌: ಸಾಕೇತ್‌ ಎದುರು ಸೋತ ಸುಮಿತ್‌

ಸೆಮಿಫೈನಲ್‌ಗೆ ಪ್ರಜ್ಞೇಶ್‌

ಜಿ.ಶಿವಕುಮಾರ
Published 15 ನವೆಂಬರ್ 2018, 19:45 IST
Last Updated 15 ನವೆಂಬರ್ 2018, 19:45 IST
ಸುಮಿತ್‌ ನಗಾಲ್‌ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಾಕೇತ್‌ ಮೈನೇನಿ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದ ರೀತಿ -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.
ಸುಮಿತ್‌ ನಗಾಲ್‌ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಾಕೇತ್‌ ಮೈನೇನಿ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದ ರೀತಿ -ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್.   

ಬೆಂಗಳೂರು: ಸೆಂಟರ್‌ ಕೋರ್ಟ್‌ನಲ್ಲಿ ಗುರುವಾರ ಸಾಕೇತ್‌ ಮೈನೇನಿ ಸಿಡಿಸಿದ ಶರವೇಗದ ಸರ್ವ್‌ ಮತ್ತು ಬಲಿಷ್ಠ ಬೇಸ್‌ಲೈನ್‌ ಹೊಡೆತಗಳಿಗೆ ಹಾಲಿ ಚಾಂಪಿಯನ್‌ ಸುಮಿತ್‌ ನಗಾಲ್‌ ಬೆದರಿದರು.

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿರುವ ಸಾಕೇತ್‌ ಈ ಹಾದಿಯಲ್ಲಿ ಇನ್ನೆರಡು ಹೆಜ್ಜೆ ಇಡಬೇಕಿದೆ.

ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸಾಕೇತ್‌ 6–4, 6–4 ನೇರ ಸೆಟ್‌ಗಳಿಂದ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ADVERTISEMENT

ಭಾರತದ ಇಬ್ಬರು ಪ್ರತಿಭಾನ್ವಿತ ಆಟಗಾರರ ಪೈಪೋಟಿಗೆ ವೇದಿಕೆಯಾಗಿದ್ದ ಈ ಪಂದ್ಯ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿತ್ತು.

ಈ ಹಣಾಹಣಿಯಲ್ಲಿ ಸಾಕೇತ್‌ ಉತ್ತಮ ಆರಂಭ ಕಂಡರು. ಪ್ರಥಮ ಸೆಟ್‌ನ ಮೊದಲ ಗೇಮ್‌ನಲ್ಲೇ ಸುಮಿತ್‌ ಸರ್ವ್‌ ಮುರಿದ ಅವರು ಮರು ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡು 2–0 ಮುನ್ನಡೆ ಪಡೆದರು.

ನಾಲ್ಕು ಮತ್ತು ಐದನೇ ಗೇಮ್‌ಗಳಲ್ಲಿ ಉಭಯ ಆಟಗಾರರು ‘ಏಸ್‌’ಗಳನ್ನು ಸಿಡಿಸಿ ಟೆನಿಸ್‌ ಪ್ರಿಯರ ಚಪ್ಪಾಳೆ ಗಿಟ್ಟಿಸಿದರು. ನಂತರ ಸಾಕೇತ್‌ ಮೇಲುಗೈ ಸಾಧಿಸಿದರು. 10ನೇ ಗೇಮ್‌ನಲ್ಲಿ ಬಿರುಸಿನ ಸರ್ವ್‌ಗಳನ್ನು ಮಾಡಿದ ಅವರು ನೆಟ್‌ನ ಸಮೀಪದಲ್ಲಿ ಚೆಂಡನ್ನು ಡ್ರಾಪ್‌ ಮಾಡುವ ತಂತ್ರ ಅನುಸರಿಸಿ ಯಶಸ್ಸು ಗಳಿಸಿದರು.

ಎರಡನೇ ಸೆಟ್‌ನ ಆರಂಭದಲ್ಲಿ ಇಬ್ಬರೂ ಸಮಬಲದಿಂದ ಹೋರಾಡಿದರು. ಆದರೆ ಐದನೇ ಗೇಮ್‌ನಲ್ಲಿ ‘ಡಬಲ್‌ ಫಾಲ್ಟ್‌’ ಎಸಗಿದ ಸುಮಿತ್‌ 2–3ರಲ್ಲಿ ಹಿನ್ನಡೆ ಕಂಡರು. ಮರು ಗೇಮ್‌ನಲ್ಲಿ ಬ್ರೇಕ್‌ ಪಾಯಿಂಟ್‌ ಕಲೆಹಾಕಿದ ಅವರು 3–3ರಲ್ಲಿ ಸಮಬಲ ಸಾಧಿಸಿದರು. ಆದರೆ ಏಳು ಮತ್ತು ಒಂಬತ್ತನೇ ಗೇಮ್‌ಗಳಲ್ಲೂ ‘ಡಬಲ್‌ ಫಾಲ್ಟ್‌’ಗಳನ್ನು ಮಾಡಿದ್ದು ಅವರಿಗೆ ಮುಳುವಾಯಿತು. 10ನೇ ಗೇಮ್‌ನಲ್ಲಿ ಸಾಕೇತ್‌ ಚುರುಕಿನ ಆಟ ಆಡಿ ಖುಷಿಯ ಕಡಲಲ್ಲಿ ತೇಲಿದರು.

ಹಿಂದೆ ಸರಿದ ಮುಕುಂದ್‌: ನಾಲ್ಕನೇ ಶ್ರೇಯಾಂಕದ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಕೂಡಾ ಸೆಮಿಫೈನಲ್‌ ಪ್ರವೇಶಿಸಿದರು.

ದಿನದ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪ್ರಜ್ಞೇಶ್‌ ಮತ್ತು ಶಶಿಕುಮಾರ್‌ ಮುಕುಂದ್‌ ಮುಖಾಮುಖಿಯಾಗಿದ್ದರು.

ಮೊದಲ ಸೆಟ್‌ನ ‍ಪ್ರಥಮ ಗೇಮ್‌ನ ವೇಳೆ ಮುಕುಂದ್‌ ಬೆನ್ನು ನೋವಿನಿಂದ ಬಳಲಿದರು. ಹೀಗಾಗಿ ಸ್ವಯಂ ನಿವೃತ್ತಿ ಪಡೆದು ಅಂಗಳ ತೊರೆದರು.

ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಕಜಕಸ್ತಾನದ ಅಲೆಕ್ಸಾಂಡರ್‌ ನೆಡೊವ್ಯೆಸೋವ್‌ 6–4, 6–2ರಲ್ಲಿ ಪೋರ್ಚುಗಲ್‌ನ ಫ್ರೆಡರಿಕೊ ಪೆರೇರಾ ಸಿಲ್ವಾ ಎದುರೂ, ಕೆನಡಾದ ಬ್ರೇಡನ್‌ ಶನುರ್‌ 6–3, 6–4ರಲ್ಲಿ ಟರ್ಕಿಯ ಸೆಮ್‌ ಇಲ್ಕೆಲ್‌ ವಿರುದ್ಧವೂ ವಿಜಯಿಯಾದರು.

ಫೈನಲ್‌ಗೆ ಪುರವ ಜೋಡಿ

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಪುರವ ರಾಜಾ ಮತ್ತು ಕ್ರೊವೇಷ್ಯಾದ ಆ್ಯಂಟೋನಿಯೊ ಸ್ಯಾನ್‌ಸಿಕ್‌ ಅವರು ಫೈನಲ್‌ಗೆ ಲಗ್ಗೆ ಇಟ್ಟರು.

ಸೆಮಿಫೈನಲ್‌ ಹಣಾಹಣಿ ಯಲ್ಲಿ ಎರಡನೇ ಶ್ರೇಯಾಂಕದ ಪುರವ ಮತ್ತು ಆ್ಯಂಟೋನಿಯೊ 3–6, 6–2, 10–8ರಲ್ಲಿ ಭಾರತದ ಅರ್ಜುನ್‌ ಖಾಡೆ ಮತ್ತು ಸಾಕೇತ್‌ ಮೈನೇನಿ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್‌ ಪರ್ಸೆಲ್‌ ಮತ್ತು ಲ್ಯೂಕ್‌ ಸೆವಿಲ್‌ 6–3, 6–4ರಲ್ಲಿ ಚೀನಾ ತೈಪೆಯ ಚೆಂಗ್‌ ಪೆಂಗ್‌ ಹ್ಸಿ ಮತ್ತು ಸಂಗ್‌ ಹುವಾ ಯಾಂಗ್‌ ಅವರನ್ನು ಪರಾಭವಗೊಳಿಸಿದರು.

ಶುಕ್ರವಾರದ ಪಂದ್ಯಗಳು

ಪುರುಷರ ಸಿಂಗಲ್ಸ್‌ ಸೆಮಿಫೈನಲ್‌

ಪ್ರಜ್ಞೇಶ್‌ ಗುಣೇಶ್ವರನ್‌–ಬ್ರೇಡನ್‌ ಶನುರ್‌

ಸಾಕೇತ್‌ ಮೈನೇನಿ–ಅಲೆಕ್ಸಾಂಡರ್‌ ನೆಡೊವ್ಯೆಸೋವ್‌

**

ಪುರುಷರ ಡಬಲ್ಸ್‌ ಫೈನಲ್‌

ಪುರವ ರಾಜಾ ಮತ್ತು ಆ್ಯಂಟೋನಿಯೊ ಸ್ಯಾನ್‌ಸಿಕ್‌ –ಮ್ಯಾಕ್ಸ್‌ ಪರ್ಸೆಲ್‌ ಮತ್ತು ಲ್ಯೂಕ್‌ ಸೆವಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.