ADVERTISEMENT

Australian Open: ಮೊದಲ ಸುತ್ತಿನಲ್ಲೇ ಬೋಪಣ್ಣ–ಬರಿಯಾಂಟೋಸ್ ಜೋಡಿ ಹೊರಕ್ಕೆ

ಪಿಟಿಐ
Published 14 ಜನವರಿ 2025, 6:49 IST
Last Updated 14 ಜನವರಿ 2025, 6:49 IST
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ   

ಮೆಲ್ಬರ್ನ್: ವಿಶ್ವದ ಮಾಜಿ ನಂ.1 ಶ್ರೇಯಾಂಕಿತ ಆಟಗಾರ ರೋಹನ್ ಬೋಪಣ್ಣ ಮತ್ತು ಕೊಲಂಬಿಯಾದ ಅವರ ಹೊಸ ಜೊತೆಗಾರ ನಿಕೋಲಸ್ ಬ್ಯಾರಿಯೆಂಟೋಸ್ ಅವರು ಆಸ್ಟ್ರೇಲಿಯನ್ ಓಪನ್‌ ಪುರುಷರ ಡಬಲ್ಸ್‌ನ ಆರಂಭಿಕ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ಸ್ಪೇನ್ ಜೋಡಿ ಪೆಡ್ರೊ ಮಾರ್ಟಿನೆಜ್ ಮತ್ತು ಜೌಮ್ ಮುನಾರ್ ವಿರುದ್ಧ 5-7, 6-7 ನೇರ ಸೆಟ್‌ಗಳಿಂದ ಬೋಪಣ್ಣ ಜೋಡಿ ಸೋಲುಂಡಿತು..

14ನೇ ಶ್ರೇಯಾಂಕದ ಇಂಡೋ-ಕೊಲಂಬಿಯಾದ ಜೋಡಿಯು ಗೆಲುವಿನ ಭರವಸೆಯೊಂದಿಗೆ ಆಟ ಆರಂಭಿಸಿತ್ತು. ಆದರೆ, ನಿರ್ಣಾಯಕ ಕ್ಷಣಗಳಲ್ಲಿ ಎಡವಿತು. ಒಂದು ಗಂಟೆ 54 ನಿಮಿಷಗಳ ಪಂದ್ಯದಲ್ಲಿ ಸ್ಪೇನ್‌ ಜೋಡಿ ಗೆಲುವಿನ ನಗೆ ಬೀರಿತು.

ADVERTISEMENT

ಮೊದಲ ಸೆಟ್‌ನ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಬೋಪಣ್ಣ ಜೋಡಿ ಬಳಿಕ ಹಿಡಿತ ಕಳೆದುಕೊಂಡಿತು.

ಎರಡನೇ ಸೆಟ್‌ನಲ್ಲಿ ಸ್ಪೇನ್ ಜೋಡಿ 5-3ರ ಮುನ್ನಡೆ ದಾಖಲಿಸಿತ್ತು. ಕಮ್‌ಬ್ಯಾಕ್ ಮಾಡಿದ್ದ ಬೋಪಣ್ಣ ಜೋಡಿ 5–5ರ ಸಮಬಲ ಸಾಧಿಸಿತ್ತು. ಟೈ ಬ್ರೇಕರ್‌ನಲ್ಲಿ ಸ್ಪೇನ್ ಜೋಡಿ 7–5ರಿಂದ ಗೆಲುವು ಸಾಧಿಸಿತು.

ರೋಹನ್ ಬೋಪಣ್ಣ ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ 2024ರ ಆವೃತ್ತಿಯ ಆಸ್ಟ್ರೇಲಿಯಾ ಓಪನ್ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಆ ಐತಿಹಾಸಿಕ ಗೆಲುವಿನ ಮೂಲಕ 43 ವರ್ಷದ ಬೋಪಣ್ಣ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.