ADVERTISEMENT

ಯುಎಸ್ ಓಪನ್: ಬೂಸ್ಟಾ, ಒಸಾಕ ಸೆಮಿಗೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 13:20 IST
Last Updated 9 ಸೆಪ್ಟೆಂಬರ್ 2020, 13:20 IST
ಪ್ಯಾಬ್ಲೊ ಕರೇನೊ ಬೂಸ್ಟಾ ಅವರ ಗೆಲುವಿನ ಸಂಭ್ರಮ –ಎಎಫ್‌ಪಿ ಚಿತ್ರ
ಪ್ಯಾಬ್ಲೊ ಕರೇನೊ ಬೂಸ್ಟಾ ಅವರ ಗೆಲುವಿನ ಸಂಭ್ರಮ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್: ನಾಲ್ಕು ತಾಸಿಗೂ ಹೆಚ್ಚು ಕಾಲ ನಡೆದ ಜಿದ್ದಾಜಿದ್ದಿಯ ಹೋರಾಟದ ಕೊನೆಯಲ್ಲಿ ಪ್ಯಾಬ್ಲೊ ಕರೆನೊ ಬೂಸ್ಟಾ ಮೇಲುಗೈ ಸಾಧಿಸಿದರು. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಈ ಆಟಗಾರ ಕೆನಡಾದ ಡೆನಿಸ್ ಶಪೊವಲೊವ್ ಎದುರು 3–6, 7–6(5), 7–6 (4), 0–6, 6–3ರಲ್ಲಿ ಮಂಗಳವಾರ ರಾತ್ರಿ ಗೆಲುವು ಸಾಧಿಸಿದರು.

2017ರಲ್ಲೂ ಅಮೆರಿಕ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಬುಸ್ಟಾ ಮೊದಲ ಸೆಟ್‌ ಸೋತ ನಂತರ ಚೇತರಿಸಿಕೊಂಡು ಎರಡು ಸೆಟ್‌ಗಳಲ್ಲಿ ಮುನ್ನಡೆದಿದ್ದರು. ಆದರೆ ನಾಲ್ಕನೇ ಸೆಟ್‌ನಲ್ಲಿ ಬೆನ್ನುನೋವು ಕಾಡಿ ಒಂದು ಗೇಮ್‌ ಕೂಡ ಗೆದ್ದುಕೊಳ್ಳಲಾಗದೆ ಎದುರಾಳಿಗೆ ಮಣಿದರು. ಶಪೊವಲೊವ್ ಅವರ ಪ್ರಬಲ ಸರ್ವ್‌ಗಳಿಗೆ ಉತ್ತರ ನೀಡಲಾಗಿದೆ ನಿರಾಸೆ ಅನುಭವಿಸಿದ್ದರು.

ನಂತರ ನೋವಿಗೆ ಚಿಕಿತ್ಸೆ ಪಡೆದ ಬೂಸ್ಟಾ ನಿರ್ಣಾಯಕ ಸೆಟ್‌ನಲ್ಲಿ ತಿರುಗೇಟು ನೀಡಿದರು. ಶಪೊವಲೊವ್ ಎದುರು ಈ ಹಿಂದೆ ನಾಲ್ಕು ಬಾರಿ ಸೆಣಸಿದ್ದ ಬೂಸ್ಟಾ ಮೂರರಲ್ಲಿ ಗೆಲುವು ಸಾಧಿಸಿದ್ದರು. ಆ ಮೂರು ಜಯದಲ್ಲೂ ಬೂಸ್ಟಾ ಒಂದು ಸೆಟ್ ಕೂಡ ಸೋತಿರಲಿಲ್ಲ. ಆದರೆ ಮಂಗಳವಾರ ರಾತ್ರಿ ಶಪೊವಲೊವ್ ಎಚ್ಚರಿಕೆಯಿಂದ ಆಡಿದರು. ಮೊದಲ ಸೆಟ್‌ನಲ್ಲಿ ಎರಡು ಬಾರಿ ಎದುರಾಳಿಯ ಸರ್ವ್ ಮುರಿದರು. ಮುಂದಿನ ಎರಡು ಸೆಟ್‌ಗಳು ಟೈ ಬ್ರೇಕರ್‌ಗಳಲ್ಲಿ ಮುಕ್ತಾಯಗೊಂಡವು. ಹೋರಾಟದಲ್ಲಿ ಬೂಸ್ಟಾ ಮೇಲುಗೈ ಸಾಧಿಸಿದರು. ಇದೇ ಲಯದಲ್ಲಿ ಕೊನೆಯ ಸೆಟ್‌ನಲ್ಲೂ ಆಡಿ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸುವರು. ಜರ್ಮನಿಯ ಜ್ವೆರೆವ್ ಕ್ರೊಯೇಷ್ಯಾದ ಬೋರ್ನಾ ಕೋರಿಕ್ ವಿರುದ್ಧ 1–6, 7–6 (7/5), 7–6 (7/1), 6–3ರಲ್ಲಿ ಗೆಲುವು ಸಾಧಿಸಿದರು.

ನವೊಮಿ ಒಸಾಕ ಸೆಮಿ ಫೈನಲ್‌ಗೆ

ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ಜಪಾನ್‌ನ ನವೊಮಿ ಒಸಾಕ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಅಮೆರಿಕದ ಶೆಲ್ಬಿ ರೋಜರ್ಸ್ ವಿರುದ್ಧ 6–3, 6–4ರಲ್ಲಿ ಜಯ ಸಾಧಿಸಿದರು. 22 ವರ್ಷದ ಒಸಾಕ ಕೇವಲ ಒಂದು ತಾಸು 20 ನಿಮಿಷಗಳಲ್ಲಿ 27 ವರ್ಷದ ಎದುರಾಳಿಯನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.