ADVERTISEMENT

ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಪಿಟಿಐ
Published 15 ಅಕ್ಟೋಬರ್ 2025, 15:51 IST
Last Updated 15 ಅಕ್ಟೋಬರ್ 2025, 15:51 IST
   

ಭುವನೇಶ್ವರ: ಏಷ್ಯನ್ ಟೇಬಲ್‌ ಟೆನಿಸ್‌ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಪುರುಷರ ಮತ್ತು ಮಹಿಳೆಯರ ವಿಭಾಗದ ತಂಡ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಚೀನಾ, ವಿಶ್ವ ಟೇಬಲ್‌ ಟೆನಿಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. 

ಆ ಮೂಲಕ ಈ ಆಟದಲ್ಲಿ ತನ್ನ ಸಾಮರ್ಥ್ಯ, ಒತ್ತಡವನ್ನು ತಾಳಿಕೊಳ್ಳುವ ಗುಣವನ್ನು ಚೀನಾ ತೋರಿಸಿತು. ಪುರುಷರ ತಂಡ 3–0 ಯಿಂದ ಹಾಂಗ್‌ಕಾಂಗ್‌ ತಂಡವನ್ನು ಸೋಲಿಸಿದರೆ, ಮಹಿಳೆಯರ ತಂಡವು ಇದೇ ಅಂತರದಿಂದ ಜಪಾನ್ ಮೇಲೆ ಜಯಗಳಿಸಿತು.

ಮಹಿಳೆಯರ ವಿಭಾಗದಲ್ಲಿ ವಿಶ್ವದ ಎರಡನೆ ನಂಬರ್ ಆಟಗಾರ್ತಿ ವಾಂಗ್‌ ಮನ್ಯು 10-12, 11-3, 11-6, 11-3 ರಿಂದ 11ನೇ ಕ್ರಮಾಂಕದ ಹೊನೊಕಾ ಹಷಿಮೊಟೊ ಅವರನ್ನು ಸೋಲಿಸಿದರು. ಮೊದಲ ಗೇಮ್ ಸೋತ ವಾಂಗ್, ತಕ್ಷಣ ಎರಡನೇ ಗೇಮ್‌ನಲ್ಲಿ ತಪ್ಪುಗಳನ್ನು ತಿದ್ದಿಕೊಂಡರು. ಸನ್‌ ಯಿಂಗ್ಶಾ 11–0, 11–5, 11–7 ರಿಂದ ಮಿವಾ ಹರಿಮೊಟೊ ವಿರುದ್ಧ, ಕುವಯಿ ಮಾನ್ 8–11, 12–10, 11–6, 11–0 ರಿಂದ ಹಿನಾ ಹಯಾಟಾ ಅವರನ್ನು ವಿರುದ್ಧ ಜಯಗಳಿಸಿದರು.

ADVERTISEMENT

ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಲಿನ್‌ ಶಿಡೊಂಗ್‌ 11–8, 11–4, 11–4 ರಿಂದ ವಾಂಗ್‌ ಚುನ್‌ ಟಿಂಗ್ ವಿರುದ್ಧ, ಎರಡನೇ ಕ್ರಮಾಂಕದ ವಾಂಗ್‌ ಚುಖಿನ್‌ 12–10, 11–9, 5–11, 14–12 ರಿಂದ ಚಾನ್‌ ಬಾಲ್ಡ್‌ವಿನ್‌ ವಿರುದ್ಧ, ಏಳನೇ ಕ್ರಮಾಂಕದ ಲಿಯಾಂಗ್ ಜಿಂಗ್‌ಕು 13–11, 11–6, 12–10 ರಿಂದ ಯಿಯು ಕ್ವಾನ್ ವಿರುದ್ಧ ಗೆಲುವು ಪಡೆದರು.