
ಭಾರತದ ಸುಮಿತ್ ನಗಾಲ್
ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಡೇವಿಸ್ ಕಪ್ ವಿಶ್ವ ಗುಂಪಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇತ್ತೀಚೆಗಷ್ಟೇ ಬಿಲ್ಲಿ ಜೀನ್ ಕಿಂಗ್ ಕಪ್ ಪ್ಲೇ ಆಫ್ ಟೂರ್ನಿಯನ್ನು ಇಲ್ಲಿ ಆಯೋಜಿಸಲಾಗಿತ್ತು. ಈ ತಿಂಗಳಾಂತ್ಯದಲ್ಲಿ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ವಿಶ್ವ ಟೆನಿಸ್ ಲೀಗ್ (ಡಬ್ಲ್ಯುಟಿಎಲ್) ನಡೆಯಲಿದೆ.
ಬೆಂಗಳೂರಿನಲ್ಲಿ 1970, 1985, 2013, 2014 ಮತ್ತು 2017ರಲ್ಲಿ ಡೇವಿಸ್ ಕಪ್ ಪಂದ್ಯಗಳನ್ನು
ಆಯೋಜಿಸಲಾಗಿತ್ತು.
‘ಬೆಂಗಳೂರಿಗೆ ಇದು ಬಹಳ ಗೌರವದ ವಿಷಯವಾಗಿದೆ. ನೆದರ್ಲೆಂಡ್ಸ್ ಎದುರಿನ ಡೇವಿಸ್ ಕಪ್ ಪಂದ್ಯಗಳು ಇಲ್ಲಿ ನಡೆಯಲಿವೆ. ಇದೊಂದು ವಿಶೇಷ ಸಂದರ್ಭವಾಗಿದೆ’ ಎಂದು ಕೆಎಸ್‌ಎಲ್‌ಟಿಎ ಉಪಾಧ್ಯಕ್ಷ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡೇವಿಸ್ ಕಪ್ ರ‍್ಯಾಂಕಿಂಗ್‌ನಲ್ಲಿ ಭಾರತವು 33ನೇ ಸ್ಥಾನದಲ್ಲಿದೆ. ಮೂರು ಬಾರಿ (1966, 1974 ಮತ್ತು 1987) ಫೈನಲ್ಸ್ ಕೂಡ ತಲುಪಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ ಜಯಗಳಿಸಿದ್ದ ಭಾರತ ಮುಂದಿನ ವರ್ಷದ ಕ್ವಾಲಿಫೈಯರ್‌ನಲ್ಲಿ ಸ್ಥಾನ ಪಡೆದಿದೆ.
2026ರ ಫೆಬ್ರುವರಿ 7 ಮತ್ತು 8ರಂದು ಪಂದ್ಯ ನಡೆಯಲಿದೆ. ಅನುಭವಿ ಆಟಗಾರ ಸುಮಿತ್ ನಗಾಲ್ ಮತ್ತು ದಕ್ಷಿಣೇಶ್ವರ್ ಸುರೇಶ್ ನಾಯಕತ್ವದಲ್ಲಿ ತಂಡವು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.