ADVERTISEMENT

ಎರಡನೇ ಸುತ್ತಿಗೆ ಮುನ್ನಡೆದ ರಫೆಲ್‌ ನಡಾಲ್‌, ಸೆರೆನಾ ವಿಲಿಯಮ್ಸ್

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಕೆರ್ಬರ್‌ಗೆ ಸೋಲಿನ ಕಹಿ

ಏಜೆನ್ಸೀಸ್
Published 29 ಸೆಪ್ಟೆಂಬರ್ 2020, 13:39 IST
Last Updated 29 ಸೆಪ್ಟೆಂಬರ್ 2020, 13:39 IST
ರಫೆಲ್‌ ನಡಾಲ್‌ ಆಟದ ವೈಖರಿ–ರಾಯಿಟರ್ಸ್ ಚಿತ್ರ
ರಫೆಲ್‌ ನಡಾಲ್‌ ಆಟದ ವೈಖರಿ–ರಾಯಿಟರ್ಸ್ ಚಿತ್ರ   

ಪ್ಯಾರಿಸ್‌ : ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ 13ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್‌ ನಡಾಲ್‌ ಅವರು ಗೆಲುವಿನ ಆರಂಭ ಮಾಡಿದ್ದಾರೆ.‌ ಫ್ರೆಂಚ್‌ ಓಪನ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಮೊದಲ ಸುತ್ತಿನಲ್ಲಿ ಅವರು ಮಂಗಳವಾರ 6–4, 6–4, 6–2ರಿಂದ ಇಗರ್‌ ಗೆರಾಸಿಮೊವ್‌ ಅವರನ್ನು ಮಣಿಸಿದರು.

ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಸ್ಪೇನ್‌ನ ನಡಾಲ್ ಅವರು ಮೊದಲ ಎರಡು ಸೆಟ್‌ ಗೆದ್ದ ಬಳಿಕ ಮೂರನೇ ಸೆಟ್‌ನ ಆರಂಭದಲ್ಲಿ 15–40ರಿಂದ ಹಿನ್ನಡೆಯಲ್ಲಿದ್ದರು. ಆದರೆ ಬಳಿಕ ತಿರುಗೇಟು ನೀಡಿದರು.

ಮೂರನೇ ಸೆಟ್‌ 2–2ರಿಂದ ಸಮಬಲವಾದಾಗ ಗೆರಾಸಿಮೊವ್‌ ಬಹಳಷ್ಟು ನಿಮಿಷಗಳ ವಿರಾಮ ತೆಗೆದುಕೊಂಡರು. ಬಳಿಕ ಆಟ ಆರಂಭಿಸಿದ ಅವರು ಅಂಗಣದಲ್ಲಿ ಆಯತಪ್ಪಿ ಬಿದ್ದರು. ಬಲ ಪಾದಕ್ಕೆ ಗಾಯವಾಗಿ ಚಿಕಿತ್ಸೆ ಪಡೆದರು. ನಂತರ ಅವರ ಪಾದಚಲನೆ ಕೂಡ ನಿಧಾನವಾಯಿತು. ನಡಾಲ್‌ ಸೆಟ್‌ ಹಾಗೂ ಪಂದ್ಯ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಸುತ್ತಿನ ಹಣಾಹಣಿಯಲ್ಲಿ ನಡಾಲ್‌ ಅವರು ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್‌ ಅವರನ್ನು ಎದುರಿಸಲಿದ್ದಾರೆ.

ಎರಡನೇ ಸುತ್ತಿಗೆ ಪ್ಲಿಸ್ಕೊವಾ, ಸೆರೆನಾ: ಎರಡನೇ ಶ್ರೇಯಾಂಕದ ಆಟಗಾರ್ತಿ ಕರೋಲಿನಾ ಪ್ಲಿಸ್ಕೊವಾ 6–7, 6–2, 6–4ರಿಂದ ಮಯರ್‌ ಶರೀಫ್‌‌ ಅವರಿಗೆ ಸೋಲುಣಿಸಿ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು. ಫ್ರೆಂಚ್‌ ಓಪನ್‌ ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸಿದ ಈಜಿಪ್ಟ್‌ನ ಮೊದಲ ಮಹಿಳೆ ಎನಿಸಿಕೊಂಡಿದ್ದರು ಮಯರ್‌.

ಜೆಕ್‌ ಗಣರಾಜ್ಯದ ಪ್ಲಿಸ್ಕೊವಾ ಅವರು ಮುಂದಿನ ಪಂದ್ಯದಲ್ಲಿ ಎಲೆನಾ ಒಸ್ಟಾಪೆಂಕೊ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

ಮೂರು ಬಾರಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಟೂರ್ನಿಯಲ್ಲಿ ಶುಭಾರಂಭ ಮಾಡಿದರು. 7–6, 6–0ರಿಂದ ಕ್ರಿಸ್ಟಿ ಅಹನ್‌ ಎದುರು ಅವರು ಗೆದ್ದರು. ಅಮೆರಿಕದವರೇ ಆದ ಕ್ರಿಸ್ಟಿ ಮೊದಲ ಸೆಟ್‌ನಲ್ಲಿ ಭಾರಿ ಪ್ರತಿರೋಧ ಒಡ್ಡಿದರು. ಒಂದು ಹಂತದಲ್ಲಿ 4–2 ಗೇಮ್‌ಗಳ ಮುನ್ನಡೆಯನ್ನೂ ಗಳಿಸಿದ್ದರು. ಆದರೆ ಅದೇ ಲಯ ಮುಂದುವರಿಸಲು ಕ್ರಿಸ್ಟಿ ಅವರಿಗೆ ಸಾಧ್ಯವಾಗಲಿಲ್ಲ.

ಇಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಸೆರೆನಾ ಅವರು ಮುಂದಿನ ಪಂದ್ಯದಲ್ಲಿ ಬಲ್ಗೇರಿಯಾದ ಸ್ವೆಟ್ಲಾನಾ ಪಿರೊಂಕೊವಾ ಅವರನ್ನು ಎದುರಿಸಲಿದ್ದಾರೆ.

ಕೆರ್ಬರ್‌ ಪರಾಭವ: ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಎಂಜೆಲಿಕಾ ಕೆರ್ಬರ್‌ ಅವರು ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. 18ನೇ ಶ್ರೇಯಾಂಕದ ಜರ್ಮನಿಯ ಆಟಗಾರ್ತಿ 3–6, 3–6ರಿಂದ ಸ್ಲೋವೆನಿಯಾದ ಖಾಜಾ ಯುವಾನ್‌ ಎದುರು ಪರಾಭವಗೊಂಡರು. ಫ್ರೆಂಚ್‌ ಓಪನ್‌ನಲ್ಲಿ ಕೆರ್ಬರ್‌ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವುದು ಇದು ಸತತ ಎರಡನೇ ಬಾರಿ.

ಪುರುಷರ ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಇಟಲಿಯ ಮ್ಯಾಟಿಯೊ ಬೆರೆಟಿನಿ 6–3, 6–1, 6–3ರಿಂದ ಕೆನಡಾದ ವಾಸೆಕ್‌ ಪಾಸ್ಪಿಸಿಲ್‌ ಎದುರು, ಅಮೆರಿಕದ ಲಾಯ್ಡ್‌ ಹ್ಯಾರಿಸ್‌ 6–4, 6–4, 7–6ರಿಂದ ಆಸ್ಟ್ರೇಲಿಯದ ಅಲೆಕ್ಸಿ ಪೊಪಿರಿನ್‌ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಕಾಲಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.