ADVERTISEMENT

ಆಸ್ಟ್ರೇಲಿಯಾ ಓಪನ್‌: ಸೆಮಿಗೆ ಸಿನ್ನರ್‌, ಜೊಕೊವಿಚ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 23:20 IST
Last Updated 28 ಜನವರಿ 2026, 23:20 IST
   

ಮೆಲ್ಬರ್ನ್‌: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ತಾರೆ ನೊವಾಕ್‌ ಜೊಕೊವಿಚ್‌ ಅವರಿಗೆ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅದೃಷ್ಟವೂ ಜೊತೆಯಾಯಿತು. ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವಿನ ಸನಿಹದಲ್ಲಿದ್ದ ಇಟಲಿಯ ಲೊರೆಂಜೊ ಮುಸೆಟ್ಟಿ ಅವರು ಗಾಯಾಳಾಗಿ ಹೊರನಡೆದಿದ್ದು ದಿಗ್ಗಜ ಆಟಗಾರನಿಗೆ ವರದಾನವಾಯಿತು.

ಹ್ಯಾಟ್ರಿಕ್‌ ಸಾಧನೆಯ ಉತ್ಸಾಹ ದಲ್ಲಿರುವ ಇಟಲಿಯ ಯಾನಿಕ್‌ ಸಿನ್ನರ್‌ ಅವರು ಅಮೆರಿಕದ ಬೆನ್‌ ಶೆಲ್ಟನ್‌ ಅವರನ್ನು ನೇರ ಸೆಟ್‌ಗಳಲ್ಲಿ ಮಣಿಸಿದರು. ಆ ಮೂಲಕ, ಜೊಕೊವಿಕ್‌ ಅವರೊಂದಿಗೆ ಸೆಮಿಫೈನಲ್‌ ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದರು.

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಅವರು ಎರಡನೇ ಶ್ರೇಯಾಂಕದ ಆಟಗಾರ್ತಿ ಇಗಾ ಶ್ವಾಂಟೆಕ್‌ ಅವರಿಗೆ ಆಘಾತ ನೀಡಿದರು. ಅಮೆರಿಕದ ಆಟಗಾರ್ತಿಯರ
ವ್ಯವಹಾರವಾಗಿದ್ದ ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಜೆಸ್ಸಿಕಾ ಪೆಗುಲಾ 6–2, 7–6 (7–1)ರಿಂದ ಅಮಂಡಾ ಅನಿಸಿಮೊವಾ ವಿರುದ್ಧ ಗೆಲುವು ಸಾಧಿಸಿದರು.

ADVERTISEMENT

ರಾಡ್‌ ಲೇವರ್‌ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 23 ವರ್ಷ ವಯಸ್ಸಿನ ಮುಸೆಟ್ಟಿ ಅವರು ಗೆಲುವಿನ ಹಾದಿಯಲ್ಲಿದ್ದರು. ಮೊದಲ ಎರಡು ಸೆಟ್‌ಗಳಲ್ಲಿ ಕ್ರಮವಾಗಿ 6–4, 6–3ರಲ್ಲಿ ಮುನ್ನಡೆ ಸಾಧಿಸಿದ್ದರು. ಮೂರನೇ ಸೆಟ್‌ ವೇಳೆಗೆ (1–3), ಬಲಗಾಲಿನ ವಿಪರೀತ ನೋವಿನಿಂದಾಗಿ ನಿರಾಶೆಯಿಂದಲೇ ಪಂದ್ಯ ತೊರೆದರು. ಐದನೇ ಶ್ರೇಯಾಂಕದ ಮುಸೆಟ್ಟಿ ಇಲ್ಲಿ ಪ್ರಥಮ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು.

‘ಮುಸೆಟ್ಟಿ ಬಗ್ಗೆ ನನಗೆ ಅನುಕಂಪವಿದೆ. ಅವರು ಈ ಪಂದ್ಯದಲ್ಲಿ ನನಗಿಂತಲೂ ಚೆನ್ನಾಗಿ ಆಟವಾಡುತ್ತಿದ್ದರು. ನಾನು ತವರಿಗೆ ಮರಳಲು ಸಿದ್ಧನಾಗಿದ್ದೆ’ ಎಂದು ಪಂದ್ಯದ ನಂತರ ಜೊಕೊವಿಕ್‌ ಪ್ರತಿಕ್ರಿಯಿಸಿದರು.

16ರ ಘಟ್ಟದಲ್ಲಿ ಜೊಕೊವಿಕ್‌ ಅವರು ಒಂದೂ ಸೆಟ್‌ ಆಡದೆ ಜೆಕ್‌ ಗಣರಾಜ್ಯದ ಜೇಕಬ್‌ ಮೆನ್ಸಿಕ್‌ ಅವರಿಂದ ವಾಕ್‌ ಓವರ್‌ ಪಡೆದಿದ್ದರು.

ಅಮೋಘ ಲಯದಲ್ಲಿರುವ ಎರಡನೇ ಶ್ರೇಯಾಂಕದ ಆಟಗಾರ ಸಿನ್ನರ್‌, ಎಂಟರ ಘಟ್ಟದಲ್ಲಿ 6–3, 6–4, 6–4ರಿಂದ ಶೆಲ್ಟನ್‌ ವಿರುದ್ಧ ನಿರಾಯಾಸವಾಗಿ ಗೆದ್ದರು. ‘ಹ್ಯಾಟ್ರಿಕ್‌’ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಅವರು, ಸೆಮಿಫೈನಲ್‌ನಲ್ಲಿ ಜೊಕೊವಿಕ್‌ ಅವರನ್ನು ಎದುರಿಸಲಿದ್ದಾರೆ. 10 ಬಾರಿಯ ಚಾಂಪಿಯನ್‌ ಜೊಕೊವಿಕ್‌, ಟೂರ್ನಿಯಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದ ಏಕೈಕ ಆಟಗಾರ ಎನಿಸಿದ್ದಾರೆ.

24 ವರ್ಷ ವಯಸ್ಸಿನ ಸಿನ್ನರ್‌ ಹಾಗೂ 38 ವರ್ಷದ ಜೊಕೊವಿಕ್‌ ಅವರು ಈವರೆಗೆ 10 ಬಾರಿ ಮುಖಾಮುಖಿಯಾಗಿದ್ದು, ಇಟಲಿಯ ಆಟಗಾರ 6ರಲ್ಲಿ ಜಯ ಸಾಧಿಸಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಸಿನ್ನರ್‌ ಅವರೇ ‘ವಿನ್ನರ್‌’ ಆಗಿದ್ದಾರೆ.

2022ರ ವಿಂಬಲ್ಡನ್‌ ಚಾಂಪಿಯನ್‌ ರಿಬಾಕಿನಾ ಅವರು 7–5, 6–1ರಿಂದ ನೇರ ಸೆಟ್‌ಗಳಲ್ಲಿ ಪೋಲೆಂಡ್‌ನ ಶ್ವಾಂಟೆಕ್‌ ಅವರಿಗೆ ಆಘಾತ ನೀಡಿದರು. 2023ರಲ್ಲಿ ಇಲ್ಲಿ ಫೈನಲ್‌ ತಲುಪಿದ್ದ ರಿಬಾಕಿನಾ, ಸೆಮಿಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಪೆಗುಲಾ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.