ADVERTISEMENT

ಅಮೋಘವಾಗಿ ಗೆದ್ದ ಜೊಕೊವಿಚ್‌

ಪಿಟಿಐ
Published 19 ಜನವರಿ 2024, 16:35 IST
Last Updated 19 ಜನವರಿ 2024, 16:35 IST
<div class="paragraphs"><p>ಜೊಕೊವಿಚ್‌ </p></div>

ಜೊಕೊವಿಚ್‌

   

ಮೆಲ್ಬರ್ನ್‌ (ಎಎಫ್‌ಪಿ): ತಮ್ಮ ಎಂದಿನ ಲಹರಿಯಲ್ಲಿ ಆಡಿದ ನೊವಾಕ್ ಜೊಕೊವಿಚ್‌ ನೇರ ಸೆಟ್‌ಗಳ ಗೆಲುವಿನೊಡನೆ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್ ಅಂತಿಮ 16ರ ಸುತ್ತಿಗೆ ಮುನ್ನುಗ್ಗಿದರು. ಅರಿನಾ ಸಬಲೆಂಕಾ ಮತ್ತು ಯಾನಿಕ್ ಸಿನ್ನರ್‌ ಕೂಡ ಶುಕ್ರವಾರ ನಡೆದ ಪಂದ್ಯಗಳಲ್ಲಿ ಗೆಲ್ಲಲು ಹೆಚ್ಚೇನೂ ಕಷ್ಟಪಡಲಿಲ್ಲ.

ಈ ಮೊದಲಿನ ಸುತ್ತುಗಳಲ್ಲಿ ಲಯಕ್ಕೆ ಪರದಾಡಿದ್ದ ಹತ್ತು ಬಾರಿಯ ಚಾಂಪಿಯನ್ ಜೊಕೊವಿಚ್‌ ಅವರು ರಾಡ್‌ ಲೇವರ್ ಅರೇನಾದಲ್ಲಿ ಈ ಬಾರಿ ಅತ್ಯುತ್ತಮ ಆಟ ಕಂಡುಕೊಂಡರು. ಸರ್ಬಿಯಾದ ಸೂಪರ್‌ ಸ್ಟಾರ್ ಆಟಗಾರ 6–3, 6–3, 7–6 (2) ರಿಂದ ಆರ್ಜೆಂಟೀನಾದ ಥಾಮಸ್‌ ಮಾರ್ಟಿನ್ ಇಚೆವೆರಿ ಅವರನ್ನು ಸೋಲಿಸಿದರು.

ADVERTISEMENT

‘ಇವತ್ತಿನ ಆಟದಿಂದ ಸಮಾಧಾನವಾಗಿದೆ’ ಎಂದು ಆಸ್ಟ್ರೇಲಿಯನ್ ಓಪನ್‌ನಲ್ಲಿ ನೂರನೇ ಪಂದ್ಯವಾಡಿದ ಜೊಕೊವಿಚ್‌ ಹೇಳಿದರು. ರೋಜರ್‌ ಫೆಡರರ್‌ (117) ಮತ್ತು ಸೆರೆನಾ ವಿಲಿಯಮ್ಸ್‌ (105) ಮಾತ್ರ ಇಲ್ಲಿ ಅವರಿಗಿಂತ ಹೆಚ್ಚು ಪಂದ್ಯಗಳಲ್ಲಿ ಆಡಿದ್ದರು.

ಮಹಿಳೆಯರ ವಿಭಾಗದಲ್ಲಿ ಅಮೆರಿಕ ಓಪನ್ ಚಾಂಪಿಯನ್ ಕೊಕೊ ಗಫ್ (ಅಮೆರಿಕ) 6–0, 6–2 ರಿಂದ ಸ್ವದೇಶದ ಅಲಿಸಿಯಾ ಪಾರ್ಕ್ಸ್ ವಿರುದ್ಧ ಗಳಿಸಿದರೆ, 16ರ ಹರೆಯದ ಮಿರಾ ಆಂಡ್ರೀವಾ (ರಷ್ಯಾ) ಕನಸಿನ ಓಟವನ್ನು ಮುಂದುವರಿಸಿ ಫ್ರಾನ್ಸ್‌ನ ಡಯಾನ ಪಾರಿ ಅವರನ್ನು 1–6, 6–1, 7–6 ರಿಂದ ಹಿಮ್ಮೆಟ್ಟಿಸಿದರು.

ಇವರನ್ನು, ರಷ್ಯಾದ ಮತ್ತೋರ್ವ ಯುವ ಆಟಗಾರ್ತಿ ಮರಿಯಾ ಟಿಮೊಫೀವಾ ನಾಲ್ಕನೇ ಸುತ್ತಿನಲ್ಲಿ ಸೇರಿಕೊಂಡರು. ಟಿಮೊಫೀವಾ 7–6 (9/7), 6–3 ರಿಂದ ಹತ್ತನೇ ಶ್ರೇಯಾಂಕದ ಬೀಟ್ರಿಜ್ ಹದದ್ ಮಯಿಯ (ಬ್ರೆಜಿಲ್‌) ಅವರನ್ನು ಮಣಿಸಿದರು. ಈ ಮೊದಲು, 170ನೇ ಕ್ರಮಾಂಕದ ಈ ಆಟಗಾರ್ತಿ, ಮಾಜಿ ಚಾಂಪಿಯನ್ ಕರೊಲಿನ್ ವೊಜ್ನಿಯಾಕಿ ವಿರುದ್ಧ ಜಯಗಳಿಸಿದ್ದೂ ಅಚ್ಚರಿಗೆ ಕಾರಣವಾಗಿತ್ತು. 2017ರ ನಂತರ ಇಷ್ಟು ಕೆಳಕ್ರಮಾಂಕದ ಆಟಗಾರ್ತಿಯೊಬ್ಬರ ನಾಲ್ಕನೇ ಸುತ್ತಿಗೆ ತಲುಪಿದ್ದು ಇದೇ ಮೊದಲು.

ಹಾಲಿ ಚಾಂಪಿಯನ್ ಸಬಲೆಂಕಾ 6–0, 6–0 ಯಿಂದ 28ನೇ ಶ್ರೇಯಾಂಕದ ಲೆಸಿಯಾ ಸುರೆಂಕೊ ಅವರನ್ನು ಸದೆಬಡಿದರು.

ಯಾನಿಕ್ ಸಿನ್ನರ್‌ 6–0, 6–1, 6–3 ರಿಂದ ಸೆಬಾಸ್ಟಿಯನ್ ಬೇಜ್‌ ಮೇಲೆ ಗೆಲ್ಲುವ ಹಾದಿಯಲ್ಲಿ ಕಳೆದುಕೊಂಡಿದ್ದು ನಾಲ್ಕು ಗೇಮ್‌ಗಳನ್ನಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.