ADVERTISEMENT

ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್‌ಗೆ ಕೋವಿಡ್

ಏಜೆನ್ಸೀಸ್
Published 23 ಜೂನ್ 2020, 17:27 IST
Last Updated 23 ಜೂನ್ 2020, 17:27 IST
ಪತ್ನಿ ಎಲೆನಾ ಅವರೊಂದಿಗೆ ನೊವಾಕ್‌ ಜೊಕೊವಿಚ್‌–ರಾಯಿಟರ್ಸ್‌ ಚಿತ್ರ
ಪತ್ನಿ ಎಲೆನಾ ಅವರೊಂದಿಗೆ ನೊವಾಕ್‌ ಜೊಕೊವಿಚ್‌–ರಾಯಿಟರ್ಸ್‌ ಚಿತ್ರ   

ಬೆಲ್‌ಗ್ರೇಡ್‌: ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಅವರಿಗೆ ಮಂಗಳವಾರ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ಸರ್ಬಿಯಾ ಹಾಗೂ ಕ್ರೊವೇಷ್ಯಾದಲ್ಲಿ ಅವರು ಇತ್ತೀಚೆಗೆ ಪ್ರದರ್ಶನ ಪಂದ್ಯ ಆಯೋಜಿಸಿದ್ದರು.

ಈ ಪ್ರದರ್ಶನ ಪಂದ್ಯಗಳ ಟೂರ್ನಿಯಲ್ಲಿ ಆಡಿದ್ದ ಒಟ್ಟು ನಾಲ್ಕು ಆಟಗಾರರಿಗೆ ಸೋಂಕು ತಗುಲಿದಂತಾಗಿದೆ. ಜೊಕೊವಿಚ್‌ ಅವರ ಪತ್ನಿಗೂ ಸೋಂಕು ದೃಢಪಟ್ಟಿದೆ.

‘ನಾವು ಬೆಲ್‌ಗ್ರೇಡ್‌ಗೆ ತಲುಪಿದ ಬಳಿಕ ತಪಾಸಣೆಗೆ ಒಳಗಾದೆವು. ಪತ್ನಿ ಎಲೆನಾ ಹಾಗೂ ನನ್ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನಮ್ಮ ಮಕ್ಕಳಲ್ಲಿ ಇಲ್ಲ’ ಎಂದು ಜೊಕೊವಿಚ್‌ ಹೇಳಿದ್ದಾರೆ.

ADVERTISEMENT

ಕೋವಿಡ್‌ ಪಿಡುಗಿನ ಮಧ್ಯೆಯೂ ಅನ್ಯ ದೇಶಗಳಿಂದ ಆಟಗಾರರನ್ನು ಕರೆಸಿ ಪಂದ್ಯ ಆಡಿಸಿದ ಜೊಕೊವಿಚ್‌ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಹಾಗೂ ಕ್ರೊವೇಷ್ಯಾದ ಬೊರ್ನಾ ಕೊರಿಚ್ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟ ಬೆನ್ನಲ್ಲೇ ಜೊಕೊವಿಚ್‌ ನಿರ್ಧಾರವನ್ನು ಹಲವರು ಖಂಡಿಸಿದ್ದಾರೆ. ಇದೇ ಟೂರ್ನಿಯಲ್ಲಿ ಆಡಿದ್ದ ಸರ್ಬಿಯಾ ಆಟಗಾರ ವಿಕ್ಟರ್‌ ಟ್ರೊಯ್ಸಿ ಹಾಗೂ ಆತನ ಗರ್ಭಿಣಿ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ.

14 ದಿನಗಳ ಸ್ವಯಂ ಪ್ರತ್ಯೇಕವಾಸಕ್ಕೆ ಒಳಗಾಗುವುದಾಗಿ ಹೇಳಿರುವ ಜೊಕೊವಿಚ್‌, ಟೂರ್ನಿಯ ಕಾರಣ ಸೋಂಕಿಗೆ ಒಳಪಟ್ಟವರ ಕ್ಷಮೆಯನ್ನೂ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.