ADVERTISEMENT

Australian Open: ರಿಬಾಕಿನಾಗೆ ಆಸ್ಟ್ರೇಲಿಯಾ ಓಪನ್ ಕಿರೀಟ

ಏಜೆನ್ಸೀಸ್
Published 31 ಜನವರಿ 2026, 18:10 IST
Last Updated 31 ಜನವರಿ 2026, 18:10 IST
   

ಮೆಲ್ಬರ್ನ್‌: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು  ಉತ್ತಮ ಹೋರಾಟದ ಫೈನಲ್‌ನಲ್ಲಿ ಮಣಿಸಿದ ಎಲಿನಾ ರಿಬಾಕಿನಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಇದು ಕಜಾಕಸ್ತಾನದ ಆಟಗಾರ್ತಿಗೆ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.

ಭರ್ಜರಿ ಸರ್ವ್‌ಗಳನ್ನು ಮಾಡುವ ಐದನೇ ಶ್ರೇಯಾಂಕದ ಆಟಗಾರ್ತಿ, ಶನಿವಾರ ರಾಡ್‌ ಲೇವರ್ ಅರೇನಾದಲ್ಲಿ 6–4, 4–6, 6–4 ರಿಂದ ಸಬಲೆಂಕಾ ವಿರುದ್ಧ ಜಯಗಳಿಸಿದರು. ಚೆಂಡನ್ನು ಬಲವಾಗಿ ಹೊಡೆದಟ್ಟುವ ಇಬ್ಬರು ಆಟಗಾರ್ತಿಯರ ನಡುವಣ ಈ ಪಂದ್ಯ 2ಗಂಟೆ 18 ನಿಮಿಷ ನಡೆಯಿತು.

ಈ ಮೂಲಕ ಕಜಾಕಸ್ತಾನದ ರಿಬಾಕಿನಾ 2023ರ ಫೈನಲ್‌ನಲ್ಲಿ ಸಬಲೆಂಕಾ ಕೈಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡರು. 26 ವರ್ಷ ವಯಸ್ಸಿನ ರಿಬಾಕಿನಾ ಅವರು ಈ ಹಿಂದೆ 2022ರಲ್ಲಿ ವಿಂಬಲ್ಡನ್‌ನಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದರು.

ADVERTISEMENT

27 ವರ್ಷ ವಯಸ್ಸಿನ ಸಬಲೆಂಕಾ ಅವರಿಗೆ ಈ ಸೋಲು ನಿರಾಸೆ ಮೂಡಿಸಿತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಎರಡನೇ ಬಾರಿ ಅಮೆರಿಕ ಓಪನ್ ಗೆದ್ದುಕೊಂಡಿದ್ದ ಅವರು ಫ್ರೆಂಚ್‌ ಓಪನ್ ಮತ್ತು ಅಮೆರಿಕ ಓಪನ್‌ ಫೈನಲ್ಸ್‌ನಲ್ಲಿ ಸೋತಿದ್ದರು.

ಸತತ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ್ದ ಅವರು ಇದುವರೆಗೆ ಪ್ರಾಬಲ್ಯ ಸಾಧಿಸಿದ್ದು, ಫೈನಲ್ ನಂತರ ಕಣ್ಣೀರನ್ನು ತಡೆಯಲಾಗಲಿಲ್ಲ.

ರಿಬಾಕಿನಾ ಆರಂಭದಲ್ಲೇ ಎದುರಾ ಳಿಯ ಸರ್ವ್ ಮುರಿದು 2–0 ಮುನ್ನಡೆ ಪಡೆದರು. ಉತ್ತಮ ಹೊಡೆತಗಳು ಹಾಗೂ ಸರ್ವ್‌ಗಳ ಮೂಲಕ 37 ನಿಮಿಷಗಳಲ್ಲಿ ಮೊದಲ ಸೆಟ್‌ ಗೆದ್ದರು. ಸಬಲೆಂಕಾ 2026ರಲ್ಲಿ ಒಂದೂ ಸೆಟ್ ಕಳೆದುಕೊಂಡಿರಲಿಲ್ಲ.

ಎರಡನೇ ಸೆಟ್‌ನ ಎರಡನೇ ಗೇಮ್‌ ಒತ್ತಡದಿಂದ ಕೂಡಿತ್ತು. ಈ ಗೇಮ್‌ನಲ್ಲಿ ರಿಬಾಕಿನಾ ಮೂರು ಬಾರಿ ಬ್ರೇಕ್‌ ಪಾಯಿಂಟ್‌ ರಕ್ಷಿಸಿ 1–1 ಸಮ ಮಾಡಿಕೊಂಡರು.

ನಿಧಾನವಾಗಿ ಕುದುರಿಕೊಂಡ ಸಬಲೆಂಕಾ ಅತ್ಯುತ್ತಮ ರ್‍ಯಾಲಿಗಳ ಮೂಲಕ ಏಳನೇ ಗೇಮ್ ಉಳಿಸಿಕೊಂಡು 4–3 ಮುನ್ನಡೆ ಗಳಿಸಿದರು. ಈ ವೇಳೆ ಸರಾಗವಾಗಿ ಆಡತೊಡಗಿದ ಸಬಲೆಂಕಾ ಎರಡನೇ ಸೆಟ್‌ ಗೆದ್ದರಲ್ಲದೇ, ಮೂರನೇ ಸೆಟ್‌ನಲ್ಲಿ 3–0 ಮುನ್ನಡೆ ಪಡೆದು ಗೆಲುವಿನತ್ತ ಸಾಗಿದಂತೆ ಕಂಡಿತು.

ಮೂರನೇ ಸೆಟ್‌ನ ಎರಡನೇ ಗೇಮ್‌ನಲ್ಲಿ ರಿಬಾಕಿನಾ ಅವರ ಸರ್ವ್ ಮುರಿದ ಸಬಲೆಂಕಾ ಬೇಗನೇ ಮುನ್ನಡೆ ಸಂಪಾದಿಸಿದರು. ಒಂದೂ ಸೆಟ್‌ ಕಳೆದುಕೊಳ್ಳದೇ ಫೈನಲ್ ತಲುಪಿದ್ದ ರಿಬಾಕಿನಾ ಕೂಡ ಕೆಲಕಾಲ ಅಧೀರರಾದಂತೆ ಕಂಡುಂದರು.

ಆದರೆ ಮರುಗೇಮ್‌ನಲ್ಲಿ ತಮ್ಮ ಸರ್ವ್‌ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ರಿಬಾಕಿನಾ ಎದುರಾಳಿಯ ಸರ್ವ್‌ ಮುರಿದು 3–3 ಸಮಮಾಡಿಕೊಂಡರು. ಪಂದ್ಯ ರೋಚಕ ವಾಗುವಂತೆ ಕಂಡಿತು. ಈ ಹಂತದಲ್ಲಿ ಸಂಯಮವಹಿಸಿ ಆಡಿದ ಅವರು ಸಬಲೆಂಕಾ ಅವರ ಸರ್ವ್‌ ಮುರಿದು, ಸತತ ನಾಲ್ಕನೇ ಗೇಮ್‌ ಗೆಲ್ಲುವ ಮೂಲಕ 4–3 ಗಳಿಸಿದರು. ಆ ಮೂಲಕ ಗೆಲುವಿಗೆ ಹತ್ತಿರವಾದರು. ಆರನೇ ‘ಏಸ್‌’ ಮೂಲಕ ಅವರು ಗೆಲುವು ಪೂರೈಸಿದರು.

ಸಬಲೆಂಕಾ ಈ ಪಂದ್ಯ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರೂ, ರಿಬಾಕಿನಾ ಸಹ ಇತ್ತೀಚಿನ ತಿಂಗಳಲ್ಲಿ ಉತ್ತಮ ಲಯದಲ್ಲಿದ್ದರು. ಡಿಸೆಂಬರ್‌ನಲ್ಲಿ ಡಬ್ಲ್ಯುಟಿಎ ಫೈನಲ್‌ನಲ್ಲಿ ಸಬಲೆಂಕಾ ವಿರುದ್ಧ ಜಯಗಳಿಸಿದದ್ದರು. 

ಎಂಟರ ಘಟ್ಟದಲ್ಲಿ, ಎರಡನೇ ಶ್ರೇಯಾಂಕದ ಇಗಾ ಶ್ವಾಂಟೆಕ್ ಅವರನ್ನು ಮಣಿಸಿದ್ದ ರಿಬಾಕಿನಾ ಸೆಮಿಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಜೆಸಿಕಾ ಪೆಗುಲಾ ಅವರನ್ನು ಸೋಲಿಸಿದ್ದರು.

ಮಾಸ್ಕೊದಲ್ಲಿ ಜನಿಸಿದ ರಿಬಾಕಿನಾ, ತಮ್ಮ 19ನೇ ವಯಸ್ಸಿನಲ್ಲಿ (2018) ಹಣಕಾಸಿನ ತೊಂದರೆಯ ಕಾರಣ ಕಜಾಕಸ್ತಾನಕ್ಕೆ ವಲಸೆ ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.