ADVERTISEMENT

ಟೆನಿಸ್ ಟೂರ್ನಿ: ಪ್ರಶಸ್ತಿ ಮಡಿಗೇರಿಸಿಕೊಂಡ ಎರಿಕ್, ರೇಷ್ಮಾ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 16:19 IST
Last Updated 7 ಜನವರಿ 2021, 16:19 IST
ಬಾಲಕಿಯರ ವಿಭಾಗದ ರನ್ನರ್ ಅಪ್‌ ಸುಹಿತಾ, ಚಾಂಪಿಯನ್ ರೇಷ್ಮಾ, ಟೆನಿಸ್ ಅಕಾಡೆಮಿಯ ಸಲಹೆಗಾರ ರೋಹನ್ ಬೋಪಣ್ಣ, ದಿ ಸ್ಪೋರ್ಟ್ಸ್ ಸ್ಕೂಲ್ ಪ್ರಾಚಾರ್ಯ ಎ.ಎಸ್‌.ವೆಂಕಟೇಶನ್, ಬಾಲಕರ ವಿಭಾಗದ ಚಾಂಪಿಯನ್ ಎರಿಕ್ ಮತ್ತು ರನ್ನರ್ ಅಪ್ ಅರುಣವ
ಬಾಲಕಿಯರ ವಿಭಾಗದ ರನ್ನರ್ ಅಪ್‌ ಸುಹಿತಾ, ಚಾಂಪಿಯನ್ ರೇಷ್ಮಾ, ಟೆನಿಸ್ ಅಕಾಡೆಮಿಯ ಸಲಹೆಗಾರ ರೋಹನ್ ಬೋಪಣ್ಣ, ದಿ ಸ್ಪೋರ್ಟ್ಸ್ ಸ್ಕೂಲ್ ಪ್ರಾಚಾರ್ಯ ಎ.ಎಸ್‌.ವೆಂಕಟೇಶನ್, ಬಾಲಕರ ವಿಭಾಗದ ಚಾಂಪಿಯನ್ ಎರಿಕ್ ಮತ್ತು ರನ್ನರ್ ಅಪ್ ಅರುಣವ   

ಬೆಂಗಳೂರು: ಅಗ್ರ ಶ್ರೇಯಾಂಕದ ನಿತಿಲನ್ ಎರಿಕ್ ಮತ್ತು ರೇಷ್ಮಾ ಮರೂರಿ ಅವರು ಎಐಟಿಎ 18 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ರಾಜ್ಯ ಟೆನಿಸ್ ಸಂಸ್ಥೆಯ ಸಹಯೋಗದಲ್ಲಿ ಸ್ಪೋರ್ಟ್ಸ್ ಸ್ಕೂಲ್ ಟೆನಿಸ್ ಅಕಾಡೆಮಿ ಆಯೋಜಿಸಿದ್ದ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಅರುಣವ ಮಜುಂದಾರ್ ಎದುರು ಎರಿಕ್ 6–4, 6–2ರಲ್ಲಿ ಜಯ ಗಳಿಸಿದರು. ಸಹೋದರಿ ಸುಹಿತಾ ವಿರುದ್ಧ 6–2, 6–1ರ ಗೆಲುವು ಸಾಧಿಸಿ ರೇಷ್ಮಾ ಪ್ರಶಸ್ತಿ ಗೆದ್ದುಕೊಂಡರು.

ಕರ್ನಾಟಕದ ಎರಿಕ್ ಮತ್ತು ಪಶ್ಚಿಮ ಬಂಗಾಳದ ಅರುಣವ ನಡುವಿನ ಹಣಾಹಣಿಯ ಮೊದಲ ಸೆಟ್ ರೋಮಾಂಚಕವಾಗಿತ್ತು. ಆರಂಭದಲ್ಲಿ 4–1ರ ಮುನ್ನಡೆ ಗಳಿಸಿದ್ದ ಎರಿಕ್‌ಗೆ ತಿರುಗೇಟು ನೀಡಿದ ಅರುಣವ ಸತತ ಪಾಯಿಂಟ್‌ಗಳನ್ನು ಗಳಿಸಿ ಹಿನ್ನಡೆಯನ್ನು 4–5ಕ್ಕೆ ಕುಗ್ಗಿಸಿದರು. ಆದರೆ ಛಲ ಬಿಡದ ಎರಿಕ್ ಅಮೋಘ ಆಟವಾಡಿ ಮುನ್ನುಗ್ಗಿದರು. ಮೋಹಕ ಸರ್ವ್ ಮೂಲಕ ಅವರು ಸೆಟ್ ಪಾಯಿಂಟ್ ಗೆದ್ದುಕೊಂಡರು.

ಎರಡನೇ ಸೆಟ್‌ನ ಆರಂಭದಲ್ಲಿ ಎರಿಕ್ ಸತತ ಎರಡು ಗೇಮ್‌ಗಳನ್ನು ಗೆದ್ದುಕೊಂಡರು. ಈ ಆಘಾತದಿಂದ ಚೇತರಿಸಿಕೊಂಡ ಅರುಣವ ಎದುರಾಳಿಯ ಸರ್ವ್ ಮುರಿದು 2–2ರ ಸಮಬಲ ಸಾಧಿಸಿದರು. ಆದರೆ ನಂತರ ಎರಿಕ್ ಪೂರ್ಣ ಆಧಿಪತ್ಯ ಸ್ಥಾಪಿಸಿದರು. ಎದುರಾಳಿಗೆ ಯಾವ ಹಂತದಲ್ಲೂ ಅವಕಾಶಗಳನ್ನು ಬಿಟ್ಟುಕೊಡದೆ ಸೆಟ್ ಮತ್ತು ಪಂದ್ಯವನ್ನು ಗೆದ್ದುಕೊಂಡರು.

ADVERTISEMENT

ಕರ್ನಾಟಕದವರೇ ಆದ ರೇಷ್ಮಾ ಮತ್ತು ಸುಹಿತಾ ನಡುವಿನ ಪಂದ್ಯ ಏಕಪಕ್ಷೀಯವಾಗಿತ್ತು. ಅಕ್ಕನ ಆಟಕ್ಕೆ ಉತ್ತರ ನೀಡಲು ಸಾಧ್ಯವಾಗದ ಸುಹಿತಾ ಸುಲಭವಾಗಿ ಸೋಲೊಪ್ಪಿಕೊಂಡರು. ಪಂದ್ಯದ ಉದ್ದಕ್ಕೂ ಒಂದೇ ಒಂದು ಸರ್ವ್ ಬಿಟ್ಟುಕೊಡದೆ ರೇಷ್ಮಾ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.