ಬಾಯ್ಸನ್
ಪ್ಯಾರಿಸ್: ಶ್ರೇಯಾಂಕರಹಿತ ಆಟಗಾರ್ತಿ ಲೋಯಿಸ್ ಬಾಯ್ಸನ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅವರಿಗೆ ಆಘಾತ ನೀಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ ವಿಶ್ವದ 361ನೇ ರ‍್ಯಾಂಕ್‌ನ ಬಾಯ್ಸನ್ 3-6, 6-4, 6-4ರಿಂದ ಅಮೆರಿಕದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು. ಆತಿಥೇಯ ಫ್ರಾನ್ಸ್‌ನ ಆಟಗಾರ್ತಿ ಇದೇ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಎಂಟರ ಘಟ್ಟ ಪ್ರವೇಶಿಸಿದರು.
ಬಾಯ್ಸನ್ ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಮಿರಾ ಆ್ಯಂಡ್ರೀವಾ ಅವರನ್ನು ಎದುರಿಸಲಿದ್ದಾರೆ. ರಷ್ಯಾದ ಆ್ಯಂಡ್ರೀವಾ 7-5, 6-3ರಿಂದ ಆಸ್ಟ್ರೇಲಿಯಾದ ಡೇರಿಯಾ ಕಸತ್ಕಿನಾ ಅವರನ್ನು ಸೋಲಿಸಿದರು.
ಎರಡನೇ ಶ್ರೇಯಾಂಕದ ಕೊಕೊ ಗಾಫ್ (ಅಮೆರಿಕ) 6-0, 7-5ರಿಂದ 20ನೇ ಶ್ರೇಯಾಂಕದ ಎಕಟೆರಿನಾ ಅಲೆಕ್ಸಾಂಡ್ರೋವಾ (ರಷ್ಯಾ) ಅವರನ್ನು ಸೋಲಿಸಿದರು. ಅವರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಮತ್ತೊಬ್ಬ ಆಟಗಾರ್ತಿ ಮ್ಯಾಡಿಸನ್ ಕೀಸ್ ಎದುರಾಳಿ. ಏಳನೇ ಶ್ರೇಯಾಂಕದ ಕೀಸ್ 6-3, 7-5ರಿಂದ ಸ್ವದೇಶದ ಹೀಲಿ ಬ್ಯಾಪ್ಟಿಸ್ಟ್ ಅವರನ್ನು ಸೋಲಿಸಿದರು.
ಜ್ವರೇವ್ ಮುನ್ನಡೆ: ಪುರುಷರ ಸಿಂಗಲ್ಸ್‌ನ ನಾಲ್ಕನೇ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಜರ್ಮನಿಯ ಆಟಗಾರ 6-4, 3-0 ಮುನ್ನಡೆಯಲ್ಲಿದ್ದಾಗ ಡಚ್ ಆಟಗಾರ ಟ್ಯಾಲನ್ ಗ್ರೀಕ್ಸ್‌ಪೂರ್ ಸ್ಪರ್ಧೆಯಿಂದ ಹಿಂದೆಸರಿದರು.
ಜ್ವರೇವ್ ಮುಂದಿನ ಸುತ್ತಿನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಸವಾಲನ್ನು ಎದುರಿಸಲಿದ್ದಾರೆ. ಆರನೇ ಶ್ರೇಯಾಂಕದ ಜೊಕೊವಿಚ್ 6-2, 6-3, 6-2ರಿಂದ ಬ್ರಿಟನ್‌ನ ಕ್ಯಾಮರೂನ್ ನಾರ್ರಿ ಅವರನ್ನು ಸೋಲಿಸಿದರು. ಇದರೊಂದಿಗೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ರಫೆಲ್ ನಡಾಲ್ (112) ಬಳಿಕ 100ನೇ ಪಂದ್ಯವನ್ನು ಗೆದ್ದ ದಾಖಲೆ ಬರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.