ADVERTISEMENT

ಪ್ರಿಕ್ವಾರ್ಟರ್‌ಫೈನಲ್‌ಗೆ ಜಿಗಿದ ಹಲೆಪ್‌

ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತು ಪ್ರವೇಶಿಸಿದ ಸಿಸಿಪಸ್‌ೆ

ರಾಯಿಟರ್ಸ್
Published 1 ಜೂನ್ 2019, 20:15 IST
Last Updated 1 ಜೂನ್ 2019, 20:15 IST
ಸರ್ವ್‌ ಹಿಂದಿರುಗಿಸುತ್ತಿರುವ ಸಿಮೊನಾ ಹಲೆಪ್‌–ಎಎಫ್‌ಪಿ ಚಿತ್ರ
ಸರ್ವ್‌ ಹಿಂದಿರುಗಿಸುತ್ತಿರುವ ಸಿಮೊನಾ ಹಲೆಪ್‌–ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಉಕ್ರೇನ್‌ ಆಟಗಾರ್ತಿ ಲೇಸಿಯಾ ಸುರೆಂಕೊ ಅವರನ್ನು ಸುಲಭವಾಗಿ ಮಣಿಸಿದ ಹಾಲಿ ಚಾಂಪಿಯನ್‌ ಸಿಮೊನಾ ಹಲೆಪ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಟೂರ್ನಿಯಲ್ಲಿ ಅತ್ಯುತ್ತಮ ಪಂದ್ಯವಾಡುವ ಮೂಲಕ ಮೋಡಿ ಮಾಡಿದ ಹಲೆಪ್‌, 6–2, 6–1 ಸೆಟ್‌ಗಳಿಂದ ಜಯದ ತೋರಣ ಕಟ್ಟಿದರು. ಕೇವಲ 55 ನಿಮಿಷಗಳಲ್ಲಿ ಪಂದ್ಯ ಅಂತ್ಯಕಂಡಿತು.

ಉಕ್ರೇನ್‌ ಆಟಗಾರ್ತಿಯ ವಿರುದ್ಧದ ಜಯದ ದಾಖಲೆಯನ್ನು ಹಲೆಪ್‌ 8–0ಗೆ ಹೆಚ್ಚಿಸಿಕೊಂಡರು. ಸುರೆಂಕೊ ಎಸಗಿದ ಹಲವು ಅನಗತ್ಯ ತಪ್ಪುಗಳೂ ಹಲೆಪ್‌ಗೆ ವರವಾಗಿ ಪರಿಣಮಿಸಿದವು.

ADVERTISEMENT

ಗ್ರೀಸ್ ಆಟಗಾರ ಸಿಸಿಪಸ್‌ ರವಿವಾರ ಟೂರ್ನಿಯಲ್ಲಿ ಅಪರೂಪದ ಸಾಧನೆಗೆ ಪಾತ್ರರಾದರು. 83 ವರ್ಷಗಳಲ್ಲಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಅಂತಿಮ 16ರ ಘಟ್ಟ ತಲುಪಿದ ಮೊದಲ ಗ್ರೀಸ್‌ ಆಟಗಾರ ಎನಿಸಿಕೊಂಡರು. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಸೆರ್ಬಿಯಾದ ಫಿಲಿಪ್‌ ಕ್ರಾಜಿನೊವಿಕ್‌ ಅವರಿಗೆ ಸೋಲಿನ ರುಚಿ ತೋರಿಸಿದರು. ಟೈಬ್ರೇಕ್‌ನಲ್ಲಿ ಒಂದು ಸೆಟ್‌ ಕಳೆದುಕೊಂಡರೂ ಛಲಬಿಡದ ಅವರು 7–5, 6–3, 6–7 (5/7), 7–6 (8/6) ಸೆಟ್‌ಗಳಿಂದ ಕ್ರಾಜಿನೊವಿಕ್‌ ಅವರನ್ನು ಮಣಿಸಿದರು.

ಐದನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರೂ ನಾಲ್ಕನೇ ಸುತ್ತಿಗೆ ಮುನ್ನಡೆದರು.

ಸರ್ಬಿಯಾದ ಡುಸನ್‌ ಲಾಜೊವಿಕ್‌ ವಿರುದ್ಧ 6–4, 6–2, 4–6, 1–6, 6–2 ಸೆಟ್‌ಗಳಿಂದ ಅವರು ಜಯಭೇರಿ ಮೊಳಗಿಸಿದರು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಬೆಲ್ಜಿಯಂ ಆಟಗಾರ ಡೇವಿಡ್‌ ಗಫಿನ್‌ ವಿರುದ್ಧ ಜಯಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.