ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಸೆಮಿಗೆ ಸಿನ್ನರ್‌ ಲಗ್ಗೆ

ರಾಯಿಟರ್ಸ್
Published 4 ಜೂನ್ 2024, 23:35 IST
Last Updated 4 ಜೂನ್ 2024, 23:35 IST
<div class="paragraphs"><p>ಚೆಂಡನ್ನು ಹಿಂತಿರುಗಿಸುತ್ತಿರುವ ಸಿನ್ನರ್‌</p></div>

ಚೆಂಡನ್ನು ಹಿಂತಿರುಗಿಸುತ್ತಿರುವ ಸಿನ್ನರ್‌

   

ಪ್ಯಾರಿಸ್‌: ಇಟಲಿಯ ಯಾನಿಕ್ ಸಿನ್ನರ್ ಅವರು ಮಂಗಳವಾರ ನಡೆದ ಪಂದ್ಯದಲ್ಲಿ 6–2, 6–4, 7–6 (3) ರಿಂದ ಹತ್ತನೇ ಕ್ರಮಾಂಕದ ಗ್ರಿಗರ್ ದಿಮಿಟ್ರೊವ್‌ ಅವರನ್ನು ಸೋಲಿಸಿ ಫ್ರೆಂಚ್‌ ಓಪನ್‌ ಟೂರ್ನಿಯ ಸಿಂಗಲ್ಸ್‌ ಸೆಮಿಫೈನಲ್‌ ಪ್ರವೇಶಿಸಿದರು. ಆ ಮೂಲಕ ಎರಡನೇ ಗ್ರ್ಯಾನ್‌ಸ್ಲಾಮ್ ಟೂರ್ನಿ ಗೆಲ್ಲುವ ನಿಟ್ಟಿನಲ್ಲಿ ಎರಡನೇ ಶ್ರೇಯಾಂಕದ ಸಿನ್ನರ್‌ ದೃಢವಾದ ಹೆಜ್ಜೆಯಿಟ್ಟರು.

ಮೊದಲ ಸಲ ವಿಶ್ವದ ಅಗ್ರಪಟ್ಟಕ್ಕೇರುವುದು ಖಚಿತವಾದ ಕೆಲವೇ ನಿಮಿಷಗಳ ಮೊದಲು, 22 ವರ್ಷ ವಯಸ್ಸಿನ ಸಿನ್ನರ್‌ ಅವರಿಗೆ ಈ ಗೆಲುವು ಒಲಿಯಿತು.

ADVERTISEMENT

ಅವರಿಗೆ ಸೆಮಿಫೈನಲ್‌ನಲ್ಲಿ ಇನ್ನೊಬ್ಬ ಯುವ ತಾರೆ ಕಾರ್ಲೊಸ್‌ ಅಲ್ಕರಾಜ್ ಸಂಭವನೀಯ ಎದುರಾಳಿಯಾಗಲಿದ್ದು ಸತ್ವಪರೀಕ್ಷೆ ಎದುರಾಗಲಿದೆ. ಅಲ್ಕರಾಜ್ ಅದಕ್ಕೆ ಮೊದಲು ಎಂಟರ ಘಟ್ಟದಲ್ಲಿ ಸ್ಟೆಫಾನೊಸ್‌ ಸಿಸಿಪಸ್‌ ಅವರನ್ನು ಎದುರಿಸಲಿದ್ದಾರೆ.

ಸಿನ್ನರ್‌ ಅವರು ಫಿಲಿಪ್ ಶಾಟಿಯೆ ಅಂಕಣದಲ್ಲಿ ಬಲ್ಗೇರಿಯಾದ ದಿಮಿಟ್ರೋವ್ ಅವರ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಗೆ ಸವಾಲು ಹಾಕಿದರು. ಸಿನ್ನರ್‌ಗೆ ಮೊದಲ ಸೆಟ್‌ನಲ್ಲಿ ಡಬಲ್‌ ಬ್ರೇಕ್ ದೊರೆಯಿತು. ಹೀಗಾಗಿ ಹೆಚ್ಚಿನ ಶ್ರಮಹಾಕುವ ಪ್ರಮೇಯ ಬರಲಿಲ್ಲ. ಪ್ರಬಲ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಅವರು ಪ್ರಾಬಲ್ಯ ಮುಂದುವರಿಸಿ, ಋತುವಿನ 33ನೇ ಗೆಲುವಿಗೆ ಅಡಿಪಾಯ ಹಾಕಿದರು.

ದಿಮಿಟ್ರೋವ್ ಮೂರನೇ ಸೆಟ್‌ನಲ್ಲಿ ಪ್ರಬಲ ಹೋರಾಟ ತೋರಿದರು. ಈ ವರ್ಷ ಬ್ರಿಸ್ಬೇನ್‌ ಓಪನ್ ಪ್ರಶಸ್ತಿ ಗೆದ್ದಿದ್ದ ಅವರು, ಸೋಲುವ ಮೊದಲು ಸೆಟ್‌ಅನ್ನು ಟೈಬ್ರೇಕರ್‌ಗೆ ಬೆಳೆಸಿದರು. ಆದರೆ ಸಿನ್ನರ್ ಅವರ ನಿಖರವಾದ ಆಟ ಅವರಿಗೆ ನಿರ್ಣಾಯಕ ಸಂದರ್ಭದಲ್ಲಿ ಗೆಲುವು ತಂದುಕೊಟ್ಟಿತು.

ಹಿಂದೆ ಸರಿದ ಜೊಕೊ; ಸಿನ್ನರ್‌ಗೆ ಅಗ್ರಪಟ್ಟ
ಪ್ಯಾರಿಸ್‌ (ಎಎಫ್‌ಪಿ): ನಾರ್ವೆಯ ಕ್ಯಾಸ್ಪರ್‌ ರುಡ್‌ ವಿರುದ್ಧ ಬುಧವಾರ ಫ್ರೆಂಚ್‌ ಓಪನ್ ಟೂರ್ನಿ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯ ಆಡಬೇಕಾಗಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರು ಮೊಣಕಾಲಿನ ನೋವಿನಿಂದ ಹಿಂದೆಸರಿದಿದ್ದಾರೆ ಎಂದು ಟೂರ್ನಿಯ ಸಂಘಟಕರು ಮಂಗಳವಾರ ತಿಳಿಸಿದ್ದಾರೆ. ಈ ಮೂಲಕ ಮೂರು ಬಾರಿಯ ಚಾಂಪಿಯನ್ ಜೊಕೊವಿಚ್‌ ದೀರ್ಘಕಾಲದಿಂದ ಹೊಂದಿದ್ದ ವಿಶ್ವದ ನಂ ಆಟಗಾರನ ಸ್ಥಾನ ಕಳೆದುಕೊಳ್ಳಲಿದ್ದಾರೆ. ರುಡ್‌ ಸೆಮಿಫೈನಲ್‌ಗೆ ಮುನ್ನಡೆಯಲ್ಲಿದ್ದಾರೆ. ಇದರೊಂದಿಗೆ ಯಾನಿಕ್ ಸಿನ್ನರ್ ಅವರು ಮುಂದಿನ ವಾರ ಪ್ರಕಟವಾಗಲಿರುವ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರಲಿದ್ದಾರೆ. ಈ ಸ್ಥಾನಕ್ಕೇರುವ ಇಟಲಿಯ ಮೊದಲ ಆಟಗಾರ ಎನಿಸಲಿದ್ದಾರೆ. ಅವರು ಫೈನಲ್ ತಲುಪಿದಲ್ಲಿ ಅಗ್ರಕ್ರಮಾಂಕ ಖಾತರಿಯಾಗುತಿತ್ತು. ಆದರೆ ಅದಕ್ಕೆ ಮೊದಲೇ ಅವರಿಗೆ ಈ ಸ್ಥಾನ ಖಚಿತವಾಗಿದೆ. ಸೋಮವಾರ ಫ್ರಾನ್ಸಿಸ್ಕೊ ಸೆರುನಡೊಲೊ ಎದುರು ಮೂರನೇ ಸುತ್ತಿನಲ್ಲಿ ಐದು ಸೆಟ್‌ಗಳ ಪಂದ್ಯ ಗೆದ್ದ ನಂತರ ತಮ್ಮ ಫಿಟ್ನೆಸ್ ಬಗ್ಗೆ ಜೊಕೊವಿಚ್‌ ಸಂದೇಹ ವ್ಯಕ್ತಪಡಿಸಿದ್ದರು. ಫಿಲಿಪ್‌ ಶಾಟಿಯೆ ಅಂಕಣ ‘ಜಾರುತ್ತಿದ್ದುದು’ ಇದಕ್ಕೆಲ್ಲ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.