ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ ಇಂದಿನಿಂದ

ರಾಯಿಟರ್ಸ್
Published 24 ಮೇ 2025, 23:52 IST
Last Updated 24 ಮೇ 2025, 23:52 IST
   

ಪ್ಯಾರಿಸ್‌: ಪ್ರಶಸ್ತಿಗೆ ನೆಚ್ಚಿನ ಆಟಗಾರ್ತಿಯಾಗಿರುವ ಅಗ್ರ ಕ್ರಮಾಂಕದ ಅರಿನಾ ಸಬಲೆಂಕಾ ಅವರು ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾನುವಾರ ಕಮಿಲ್ಲಾ ರಾಖಿಮೋವಾ ಅವರನ್ನು ಎದುರಿಸಲಿದ್ದಾರೆ.

ಮೂರು ವಾರಗಳ ಹಿಂದೆ ಮ್ಯಾಡ್ರಿಡ್‌ ಓಪನ್ ಟೂರ್ನಿಯಲ್ಲಿ ಮೂರನೇ ಸಲ ಪ್ರಶಸ್ತಿ ಗೆದ್ದು ಇಲ್ಲಿಗೆ ಬಂದಿರುವ ಸಬಲೆಂಕಾ ಆವೆಮಣ್ಣಿನ ಅಂಕಣದಲ್ಲಿ ಪಾರಮ್ಯ ಮೆರೆಯಲು ಉತ್ಸುಕರಾಗಿದ್ದಾರೆ.

ಉತ್ತಮ ಲಯದಲ್ಲಿರುವ ಎಂಟನೇ ಶ್ರೇಯಾಂಕದ ಲೊರೆಂಝೊ ಮುಸೆಟ್ಟಿ (ಇಟಲಿ) ತಮ್ಮ ಅಭಿಯಾನವನ್ನು ಯಾನಿಕ್ ಹಾಫ್‌ಮನ್ ಎದುರು ಆಡುವ ಆರಂಭಿಸಲಿದ್ದಾರೆ. ಇತ್ತೀಚೆಗೆ ಆಡಿರುವ ಟೂರ್ನಿಗಳಲ್ಲಿ ಮುಸೆಟ್ಟಿ ಒಂದರಲ್ಲಿ ಫೈನಲ್ ತಲುಪಿದ್ದು, ಎರಡು ಟೂರ್ನಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ADVERTISEMENT

ಕಳೆದ ತಿಂಗಳು ಮಾಂಟೆಕಾರ್ಲೊ ಮಾಸ್ಟರ್ಸ್‌ ಟೂರ್ನಿಯಲ್ಲಿ ಫೈನಲ್ ಆಡಿದ್ದು, ಫ್ರೆಂಚ್‌ ಓಪನ್ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರಿಗೆ ಮಣಿದಿದ್ದರು. 

ಆದರೆ ಎರಡು ವರ್ಷಗಳ ಹಿಂದೆ ಮ್ಯಾಡ್ರಿಡ್ ಓಪನ್‌ನಲ್ಲಿ ಹಾಫ್‌ಮನ್‌, ಇಟಲಿಯ ಆಟಗಾರರನ್ನು ಮಣಿಸಿದ್ದರು.‌

ಫಿಲಿಪ್‌ ಶಾಟಿಯೆ ಕೋರ್ಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಆಟಗಾರ್ತಿ ಹಾಗೂ ಒಲಿಂಪಿಕ್ ಚಾಂಪಿಯನ್ ಝೆಂಗ್‌ ಕ್ವಿನ್ವೆನ್‌ (ಚೀನಾ) ಅವರು ರಷ್ಯಾದ ಅನಸ್ತೇಸಿಯಾ ಪಾವ್ಲಿಚೆಂಕೋವಾ ಅವರನ್ನು ಎದುರಿಸಲಿದ್ದಾರೆ.

2021ರ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಪಾವ್ಲಿಚೆಂಕೋವಾ ಅವರು ಫೈನಲ್ ತಲುಪಿ ಅಚ್ಚರಿ ಮೂಡಿಸಿದ್ದರು. ಅವರು ಫೈನಲ್ ತಲುಪಿದ ಏಕೈಕ ಗ್ರ್ಯಾನ್‌ಸ್ಲಾಮ್ ಟೂರ್ನಿ ಇದಾಗಿತ್ತು. ಪ್ರಶಸ್ತಿ ಸೆಣಸಾಟದಲ್ಲಿ ಬಾರ್ಬರಾ ಕ್ರಾಚಿಕೋವಾ ಅವರಿಗೆ ಮಣಿದಿದ್ದರು.

ಹಸನ್ ಇತಿಹಾಸ: ಓಪನ್ ಯುಗ ಆರಂಭವಾದ ನಂತರ ಫ್ರೆಂಚ್‌ ಓಪನ್ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದ ಲೆಬನಾನ್‌ನ ಮೊದಲ ಟೆನಿಸಿಗ ಎಂಬ ಹಿರಿಮೆಗೆ ಬೆಂಜಮಿನ್ ಹಸನ್ ಪಾತ್ರರಾಗಿದ್ದಾರೆ. 30 ವರ್ಷದ ಹಸನ್‌ ಅಂತಿಮ ಅರ್ಹತಾ ಸುತ್ತಿನಲ್ಲಿ ಜಪಾನ್‌ನ ಜೇಮ್ಸ್ ಟ್ರಾಟರ್‌ ಅವರನ್ನು 6–2, 7–5 (5)ರಿಂದ ಸೋಲಿಸಿದರು.

ಬೆಂಜಮಿನ್ ಜರ್ಮನಿ ಸಂಜಾತರಾಗಿದ್ದು, ವಿಶ್ವ ಕ್ರಮಾಂಕದಲ್ಲಿ ಸದ್ಯ 177ನೇ ಸ್ಥಾನದಲ್ಲಿದ್ದಾರೆ. ಜನವರಿಯಲ್ಲಿ ಹದಿ ಹಬೀರ್ ಅವರು ಆಸ್ಟ್ರೇಲಿಯನ್ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಗಳಿಸಿ ಇತಿಹಾಸ ಸ್ಥಾಪಿಸಿದ್ದರು. ಪ್ರಸ್ತುತ 159ನೇ ಕ್ರಮಾಂಕ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.