ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಶಂಕೆ: ತನಿಖೆ ಆರಂಭ

ಏಜೆನ್ಸೀಸ್
Published 7 ಅಕ್ಟೋಬರ್ 2020, 13:30 IST
Last Updated 7 ಅಕ್ಟೋಬರ್ 2020, 13:30 IST
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಲೋಗೊ
ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಲೋಗೊ   

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಡಬಲ್ಸ್ ಪಂದ್ಯವೊಂದರಲ್ಲಿ ಫಿಕ್ಸಿಂಗ್‌ ನಡೆದಿದೆ ಎಂಬ ವರದಿಯ ಕುರಿತು ತನಿಖೆ ನಡೆಸುತ್ತಿರುವುದಾಗಿ ಫ್ರಾನ್ಸ್‌ನ ಅಧಿಕಾರಿಗಳು ಹೇಳಿದ್ದಾರೆ.

’ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯ ಫಿಕ್ಸ್ ಆಗಿರುವ ಶಂಕೆಯಿದೆ‘ ಎಂದು ಫ್ರಾನ್ಸ್‌ನ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ (ಎಎನ್‌ಜೆ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ರುಮೇನಿಯಾದ ಆ್ಯಂಡ್ರಿಯಾ ಮಿತು–ಪ್ಯಾಟ್ರಿಸಿಯಾ ಮರಿಯಾ ಟಿಗ್‌ ಹಾಗೂ ರಷ್ಯಾ, ಅಮೆರಿಕ ಜೋಡಿ ಯಾನಾ ಸಿಜಿಕೊವಾ– ಮ್ಯಾಡಿಸನ್‌ ಬ್ರೆಂಗ್ಲೆ ಅವರ ನಡುವೆಸೆಪ್ಟೆಂಬರ್‌ 30ರಂದು ನಡೆದ ಪಂದ್ಯದಲ್ಲಿ ಫಿಕ್ಸಿಂಗ್‌ ನಡೆದಿರುವ ಸಂಶಯವಿದೆ‘ ಎಂದು ಫ್ರಾನ್ಸ್‌ನ ಕ್ರೀಡಾ ದಿನಪತ್ರಿಕೆ ಎಲ್‌ ಇಕ್ವಿಪ್‌ ಹಾಗೂ ಜರ್ಮನ್‌ ಪತ್ರಿಕೆ ಡೈ ವೆಲ್ಟ್ ವರದಿ ಮಾಡಿವೆ.

ADVERTISEMENT

‘ಪಂದ್ಯದಲ್ಲಿ ರುಮೇನಿಯಾ ಜೋಡಿ ಗೆಲ್ಲಲಿದೆ ಎಂದು ಭಾರೀ ಮೊತ್ತದ ಬೆಟ್ಟಿಂಗ್ ನಡೆದಿತ್ತು. ಹಲವು ದೇಶಗಳ ಬುಕಿಗಳು ಇದರಲ್ಲಿ ಭಾಗಿಯಾಗಿದ್ದಾರೆ‘ ಎಂದು ಎಲ್‌ ಇಕ್ವಿಪ್‌ ತನ್ನ ವರದಿಯಲ್ಲಿ ಹೇಳಿತ್ತು.

ಪಂದ್ಯದಲ್ಲಿ ರುಮೇನಿಯಾ ಜೋಡಿಯು 7–6, 6–4ರಿಂದ ಗೆಲುವು ಸಾಧಿಸಿತ್ತು.

ಫ್ರೆಂಚ್‌ ಓಪನ್‌ ಟೂರ್ನಿಯ ಮಹಾ ನಿರ್ದೇಶಕ ಜೀನ್‌ ಫ್ರಾಂಕೊಯಿಸ್‌ ವಿಲೊಟ್ಟೆ ಅವರು, ಯಾವ ಪಂದ್ಯದ ಕುರಿತು ತನಿಖೆಯಾಗುತ್ತಿದೆ ಎಂದು ಖಚಿತಪಡಿಸಿಲ್ಲವಾದರೂ ತನಿಖೆ ನಡೆಯುತ್ತಿರುವುದನ್ನು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.