ADVERTISEMENT

ಟೆನಿಸ್‌: ನೆದರ್ಲೆಂಡ್ಸ್‌ಗೆ ಮಣಿದ ಭಾರತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 23:16 IST
Last Updated 16 ನವೆಂಬರ್ 2025, 23:16 IST
   

ಬೆಂಗಳೂರು: ಭಾರತದ ಟೆನಿಸ್‌ ತಂಡವು ಭಾನುವಾರ ಬಿಲ್ಲಿ ಜೀನ್‌ ಕಿಂಗ್‌ ಕಪ್‌ ‘ಜಿ’ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ 0–3ರಿಂದ ನೆದರ್ಲೆಂಡ್ಸ್‌ ತಂಡಕ್ಕೆ ಮಣಿಯುವುದರೊಂದಿಗೆ ಈ ಬಾರಿಯ ಅಭಿಯಾನವನ್ನು ಮುಗಿಸಿತು.

ಕಬ್ಬನ್‌ ಪಾರ್ಕ್‌ನ ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣದಲ್ಲಿ ಆತಿಥೇಯ ತಂಡದ ಆಟಗಾರ್ತಿಯರಿಂದ ಸತತ ಎರಡನೇ ಪಂದ್ಯದಲ್ಲೂ ಸುಧಾರಿತ ಪ್ರದರ್ಶನ ಕಾಣಲಿಲ್ಲ. ವಾರಾಂತ್ಯದ ಪ್ರಯುಕ್ತ ಪಂದ್ಯ ಕಣ್ತುಂಬಿಕೊಳ್ಳಲು ಸೇರಿದ್ದ ತವರಿನ ನೂರಾರು ಪ್ರೇಕ್ಷಕರಿಗೂ ನಿರಾಸೆಯಾಯಿತು.

ಸ್ಲೊವೇನಿಯಾದ ವನಿತೆಯರ ತಂಡವು ತನ್ನೆರಡು ಪಂದ್ಯಗಳಲ್ಲಿ (ನೆದರ್ಲೆಂಡ್ಸ್‌ ಮತ್ತು ಭಾರತ ವಿರುದ್ಧ) ಗೆಲುವು ಸಾಧಿಸಿ ಕ್ವಾಲಿಫೈಯರ್ಸ್‌ ಹಂತಕ್ಕೆ ಟಿಕೆಟ್‌ ಪಡೆದಿದೆ. ಹೀಗಾಗಿ, ಭಾರತ– ಡಚ್‌ ತಂಡಗಳ ನಡುವಿನ ಹಣಾಹಣಿಗೆ ಹೆಚ್ಚಿನ ಮಹತ್ವ ಇರಲಿಲ್ಲ.

ADVERTISEMENT

ಮೊದಲ ಸಿಂಗಲ್ಸ್‌ನಲ್ಲಿ ಡಚ್‌ ಆಟಗಾರ್ತಿ ಅನೌಕ್ ಕೋವರ್‌ಮನ್ಸ್ 6–2, 6–4ರಿಂದ ಭಾರತದ ಶ್ರೀವಲ್ಲಿ ಭಮಿಡಿಪಾಟಿ ಅವರನ್ನು ಮಣಿಸಿ, ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು.

ಎರಡನೇ ಸಿಂಗಲ್ಸ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ 87ನೇ ಸ್ಥಾನದಲ್ಲಿರುವ ಸುಝಾನ್ ಲಮೆನ್ಸ್ 6–2, 6–3ರಿಂದ ಸಹಜಾ ಯಮಲಪಲ್ಲಿ ಅವರನ್ನು ಪ್ರಯಾಸವಿಲ್ಲದೆ ಹಿಮ್ಮೆಟ್ಟಿಸಿ ತಂಡಕ್ಕೆ ಗೆಲುವನ್ನು ಖಚಿತಪಡಿಸಿದರು.

ಡಬಲ್ಸ್‌ ಪಂದ್ಯದಲ್ಲಿ ಸುಜಾನ್ ಲಮೆನ್ಸ್ ಮತ್ತು ಡೆಮಿ ಶುರ್ಸ್ ಜೋಡಿ 6–1, 6–1ರಿಂದ ಅಂಕಿತಾ ರೈನಾ ಮತ್ತು ಪ್ರಾರ್ಥನಾ ಜಿ.ಟಿ. ಅವರನ್ನು ಮಣಿಸಿ, ಗೆಲುವಿನ ಅಂತರವನ್ನು ಹೆಚ್ಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.