ನೊವಾಕ್ ಜೊಕೊವಿಚ್
(ರಾಯಿಟರ್ಸ್ ಚಿತ್ರ)
ಮೆಲ್ಬರ್ನ್: ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಗಾಯದಿಂದಾಗಿ ನಿವೃತ್ತಿ ಹೊಂದಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಪ್ರಶಸ್ತಿ ಕನಸು ಭಗ್ನಗೊಂಡಿದೆ.
ಇಂದು ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ ಮೊದಲ ಸೆಟ್ ಟೈ ಬ್ರೇಕರ್‌ನಲ್ಲಿ 6-7 (5-7)ರ ಅಂತರದಲ್ಲಿ ಜೊಕೊವಿಚ್ ಕಳೆದುಕೊಂಡಿದ್ದರು.
ಇದಾದ ಬೆನ್ನಲ್ಲೇ ಗಾಯ ಉಲ್ಬಣಿಸಿದ್ದರಿಂದ ಕೂಟದಿಂದಲೇ ಹಿಂದೆ ಸರಿಯಲು ನಿರ್ಧರಿಸಿದರು. ತಕ್ಷಣವೇ ಜೊಕೊವಿಚ್ ನಿರ್ಧಾರವನ್ನು ಅಂಪೈರ್ ಘೋಷಿಸಿದರು. ಈ ವೇಳೆ ನೆರೆದಿದ್ದ ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು.
ಇದರೊಂದಿಗೆ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಹತ್ತು ಬಾರಿಯ ಚಾಂಪಿಯನ್ ಜೊಕೊವಿಚ್, ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಸದೆಬಡಿದಿದ್ದರು. ಅಲ್ಲದೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಾರೆ ಎನಿಸಿದ್ದರು.
24 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ದಾಖಲೆ 37 ವರ್ಷದ ಜೊಕೊವಿಚ್ ಹೆಸರಲ್ಲಿದೆ. ಆದರೆ ಈಗ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಈ ನಡುವೆ ಗಾಯದಿಂದಾಗಿ ನಿವೃತ್ತಿ ಪಡೆದಿರುವ ಜೊಕೊವಿಚ್ ಅವರನ್ನು ಜ್ವೆರೇವ್ ಬೆಂಬಲಿಸಿದ್ದಾರೆ. ಚಾಂಪಿಯನ್ ಆಟಗಾರನನ್ನು ಹೀಯಾಳಿಸುವುದು ಸರಿಯಲ್ಲ. ಸ್ವಲ್ಪ ಗೌರವ ತೋರಿ ಎಂದು ಅಭಿಮಾನಿಗಳಿಗೆ ವಿನಂತಿ ಮಾಡಿದ್ದಾರೆ.
ನೊವಾಕ್ ಜೊಕೊವಿಚ್, ಅಲೆಕ್ಸಾಂಡರ್ ಜ್ವೆರೇವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.